ಚೆನ್ನೈನಲ್ಲಿ ಪತ್ರಕರ್ತನಿಂದ 27 ಸಹೋದ್ಯೋಗಿಗಳಿಗೆ ಹರಡಿದ ಕೊರೊನಾ ಸೋಂಕು
ಚೆನ್ನೈ, ಏಪ್ರಿಲ್ 21: ಚೆನ್ನೈನಲ್ಲಿ ಓರ್ವ ಪತ್ರಕರ್ತನಿಂದ 27 ಮಂದಿಗೆ ಕೊರೊನಾ ಸೋಂಕು ಹರಡಿರುವ ಸಂಗತಿ ಬೆಳಕಿಗೆ ಬಂದಿದೆ.
ಕಳೆದ ಭಾನುವಾರ ಸುದ್ದಿವಾಹಿನಿಯ ಉಪ ಸಂಪಾದಕರೊಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿ ಎರಡು ದಿನಗಳ ಬಳಿಕ ಇದೀಗ ಅವರ 27 ಸಹೋದ್ಯೋಗಿಗಳಲ್ಲಿ ಸಹ ಸೋಂಕು ಕಾಣಿಸಿಕೊಂಡಿದೆ.
ಇನ್ನು ಕೆಲವರ ರಕ್ತದ ಮಾದರಿಯ ಪರೀಕ್ಷೆ ವರದಿ ಬಂದಿಲ್ಲ. ಇಲ್ಲಿಯವರೆಗೆ ಇಷ್ಟು ಸಿಕ್ಕಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.ಭಾನುವಾರ ಸೋಂಕು ಕಾಣಿಸಿಕೊಂಡಿದ್ದ ಪತ್ರಕರ್ತ ರೊಯಪುರಂನ ಪೊಲೀಸ್ ಕ್ವಾರ್ಟರ್ಸ್ ನಿವಾಸಿ.

ಕಳೆದ ಭಾನುವಾರ ರೊಯಪುರಂನ ಸುದ್ದಿ ವಾಹಿನಿಯ ಉಪ ಸಂಪಾದಕರಿಗೆ ಕೊರೊನಾ ಇರುವುದು ಪತ್ತೆಯಾಗಿತ್ತು. ನಂತರ ಚೆನ್ನೈ ಮಹಾನಗರ ಪಾಲಿಕೆ ಅವರ ಸಂಪರ್ಕಿತ ಕೊರೊನಾ ಶಂಕಿತರಲ್ಲಿ 94 ಮಂದಿಯ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದರು. ಅವರಲ್ಲಿ 27 ಮಂದಿಗೆ ಇಂದು ಸೋಂಕು ತಗುಲಿರುವುದು ದೃಢಪಟ್ಟಿದೆ.
ತಮಿಳುನಾಡಿನಲ್ಲಿ ಇದುವರೆಗೆ 1477 ಮಂದಿಗೆ ಕೊರೊನಾ ಸೋಂಕು ಹರಡಿದೆ. 15 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ 18,601 ಮಂದಿ ಕೊರೊನಾ ಸೋಂಕಿತರಿದ್ದು, 3252 ಮಂದಿ ಗುಣಮುಖರಾಗಿದ್ದಾರೆ. 590 ಮಂದಿ ಸಾವನ್ನಪ್ಪಿದ್ದಾರೆ.












Click it and Unblock the Notifications