Male Mahadeshwara Temple: ಕೇವಲ 28 ದಿನಗಳಲ್ಲಿ ₹1.82 ಕೋಟಿ ಒಡೆಯನಾದ ಮಲೆ ಮಾದಪ್ಪ
ಚಾಮರಾಜನಗರ, ಮಾರ್ಚ್, 01: ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ (ಮಾರ್ಚ್ 01) ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 28 ದಿನಗಳ ಅವಧಿಯಲ್ಲಿ 1.82 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆಯಲ್ಲಿ ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯವನ್ನು ಪ್ರಾರಂಭಿಸಲಾಯಿತು. ಎಣಿಕೆ ಕಾರ್ಯವು ಸಂಜೆ 7:40ರ ಗಂಟೆಯವರೆಗೂ ನಡೆಯಿತು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡಿದ್ದಾರೆ. ಅಮಾವಾಸ್ಯೆ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ ಹಣ ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ.
ಹುಂಡಿಗಳ ಎಣಿಕೆಯಲ್ಲಿ ಈ ಬಾರಿ 1,82,33,071 ರೂಪಾಯಿ ಸಂಗ್ರಹವಾಗಿದೆ. ಚಿನ್ನ 41 ಗ್ರಾಂ ಮತ್ತು ಬೆಳ್ಳಿ 1 ಕೆ.ಜಿ 200 ಗ್ರಾಂ ಸಂಗ್ರಹವಾಗಿದೆ. ಇದಲ್ಲದೆ 5 ಫೌಂಡ್, 5 ಡಾಲರ್‌ನ ಮೂರು ವಿದೇಶಿ ನೋಟುಗಳು, ಚಲಾವಣೆಯಲ್ಲಿಲ್ಲದ 2,000 ಮುಖಬೆಲೆಯ 14 ನೋಟುಗಳು ಹುಂಡಿಯಲ್ಲಿ ಹಾಕಿದ್ದಾರೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ರಘು ತಿಳಿಸಿದ್ದಾರೆ.












Click it and Unblock the Notifications