ಇಂಡಿಗನತ್ತದಲ್ಲಿ ಮರು ಚುನಾವಣೆ: 528ರಲ್ಲಿ ಮತದಾನ ಮಾಡಿದವರೆಷ್ಟು ಜನ ಗೊತ್ತಾ?
ಚಾಮರಾಜನಗರ, ಏಪ್ರಿಲ್, 29: ಲೋಕಸಭಾ ಚುನಾವಣೆ 2024ರಲ್ಲಿ ಹನೂರು ತಾಲೂಕಿನ ಇಂಡಿಗನತ್ತದಲ್ಲಿ ಇಂದು (ಏಪ್ರಿಲ್ 29) ಮರು ಮತದಾನ ನಡೆಯುತ್ತಿದ್ದು, ಜನರು ಹಕ್ಕು ಚಲಾವಣೆ ಮಾಡಿದ್ದಾರೆ. ಹಾಗಾದರೆ ಎಷ್ಟು ಜನ ಮತದಾನ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಮತಗಟ್ಟೆ 146ರಲ್ಲಿ 528 ಮತದಾರರಿದ್ದು, ಮೆಂದಾರೆ ಗ್ರಾಮದ ಒಟ್ಟು 58 ಮಂದಿ ಹಾಗೂ ಇಂಡಿಗನತ್ತ ಗ್ರಾಮದ 13 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಎಎಸ್ಪಿ ಉದೇಶ್, ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಮೊಕ್ಕಾಂ ಹೂಡಿದ್ದಾರೆ. ಗ್ರಾಮದಲ್ಲಿ ಟಾಂಟಾಂ ಮಾಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗಿದ್ದು, ಮತದಾನ ಮಾಡಲು ಜನರಿಗೆ ಧೈರ್ಯ ತುಂಬಲಾಗಿತ್ತು.
ಊರೇ ಖಾಲಿ: ಏಪ್ರಿಲ್ 26ರಂದು ಮತದಾನ ಬಹಿಷ್ಕಾರ ಮಾಡಿ, ಬಳಿಕ ಗುಂಪು ಘರ್ಷಣೆ ನಡೆದು ಮತಗಟ್ಟೆಯನ್ನೇ ಧ್ವಂಸ ಮಾಡಿದ್ದರು. ಮತಗಟ್ಟೆ ಅಧಿಕಾರಿ ಹಾಗೂ ಹನೂರು ತಹಶಿಲ್ದಾರ್ ದೂರು ನೀಡಿದ ಮೇರೆಗೆ ಇಂಡಿಗನತ್ತ ಗ್ರಾಮದ 250 ಮಂದಿ ಮೇಲೆ ಎಫ್ಐಆರ್ ದಾಖಲಾಗಿದ್ದು, ಈಗಾಗಲೇ 36 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುವಣದಿದೆ.
ಇಂಡಿಗನತ್ತ ಗ್ರಾಮದಲ್ಲಿ ವೃದ್ಧರು ಹಾಗೂ ಬೆರಳಣಿಕೆ ಮಹಿಳೆಯರನ್ನು ಬಿಟ್ಟರೇ ಬಹುತೇಕ ಎಲ್ಲರೂ ಗ್ರಾಮ ತೊರೆದು ತಲೆ ಮರೆಸಿಕೊಂಡಿರುವುದರಿಂದ 528 ಮತದಾರರಲ್ಲಿ ಕಡಿಮೆ ಮತದಾನವಾಗಿದೆ. ಗ್ರಾಮದ ಹಿರಿಯರೊಬ್ಬರು ಮಾತನಾಡಿ ಗಲಾಟೆ ಹೇಗೆ ಆಯಿತೆಂದು ಗೊತ್ತಿಲ್ಲ. ಕೆಲ ತುಂಡು ಹುಡುಗರಿಂದ ಈ ಘರ್ಷಣೆ ಆಗಿದೆ ಎಂದಿದ್ದಾರೆ.
ಘಟನೆಗೆ ಹಿನ್ನೆಲೆ: ಮಲೆ ಮಹದೇಶ್ವರ ಗ್ರಾಮ ಪಂಚಾಯಿತಿಗೆ ಸೇರಿದ ಇಂಡಿಗನತ್ತ, ಮೆಂದಾರೆ ,ತುಳಿಸಿಕರೆ, ತೇಕಣೆ, ಪಡಸಲನತ್ತ ಈ ಗ್ರಾಮಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸದೆ ಮತದಾರರು ದೂರ ಉಳಿದಿದ್ದರು.
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ತುಳಿಸಿಕರೆಯ 480 ಮತದಾರರು, ಇಂಡಿಗನತ್ತ ಪೋಡಿನ 528 ಮತದಾರರು, ಪಡಸಲನತ್ತ ಪೋಡಿನ 298 ನಿವಾಸಿಗಳು ಮತದಾನದಿಂದ ದೂರ ಉಳಿದಿದ್ದರು. ತಮಗೆ ಮೂಲಸೌಕರ್ಯ ಕೊಡಬೇಕು ಇಲ್ಲದಿದ್ದರೇ ತಾವು ಮತ ಹಾಕುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ವಿಚಾರ ಅರಿತ ಪೊಲೀಸ್ ಸಿಬ್ಬಂದಿ, ಚುನಾವಣಾ ಅಧಿಕಾರಿಗಳು ಮತದಾರರನ್ನು ಮನವೊಲಿಸಲು ತೆರಳಿದ್ದರು. ಈ ವೇಳೆ ಕೆಲವರನ್ನು ಮತದಾನಕ್ಕೆ ಮನವೊಲಿಸಿದ್ದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆ ಧ್ಚಂಸ ಮಾಡಿ, ಇವಿಎಂ ಹೊಡೆದು ಹಾಕಿ, ಕಲ್ಲು ತೂರಿದ್ದಾರೆ.
ಈ ವೇಳೆ ಅಲ್ಲಿದ್ದ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೆ, ಮತಗಟ್ಟೆಯ ಬಾಗಿಲು, ಮೇಜು-ಕುರ್ಚಿ, ಇವಿಎಂ ಯಂತ್ರ ಇತರೆ ಪರಿಕರಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚುವ ಯತ್ನ ಮಾಡಿದ್ದಾರೆ. ಇನ್ನು ಈ ಘಟನೆ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿತ್ತಿತು.












Click it and Unblock the Notifications