ಮಲೆ ಮಾದಪ್ಪನಿಗೆ ಬರೀ ರಾಜ್ಯ, ದೇಶ ಅಲ್ಲದೆ ವಿದೇಶಗಳ ಭಕ್ತರು; ಕೇವಲ ಒಂದೇ ತಿಂಗಳಿಗೆ ಹುಂಡಿಯಲ್ಲಿ ಕೋಟಿ.. ಕೋಟಿ ಸಂಗ್ರಹ
Male Mahadeshwara Hill: ಚಾಮರಾಜನಗರ ಜಿಲ್ಲೆ, ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ (ಆಗಸ್ಟ್ 29) ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ ಕೇವಲ ಒಂದು ತಿಂಗಳ ಅವಧಿಯಲ್ಲಿ 1.76 ಕೋಟಿ ರೂಪಾಯಿ ಸಂಗ್ರಹವಾಗಿದೆ. ಹಾಗಾದರೆ ಎಷ್ಟು ವಿದೇಶಿ ಕರೆನ್ಸಿ ಪತ್ತೆಯಾಗಿವೆ ಎನ್ನಿವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿರವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಎಣಿಕೆ ಕಾರ್ಯವು ಸಂಜೆ 4:30 ಗಂಟೆಯವರೆಗೂ ನಡೆಯಿತು.

ಭೀಮನ ಅಮಾವಾಸ್ಯೆ, ಸರ್ಕಾರಿ ರಜಾ ದಿನಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದು , ಈ ವೇಳೆ ಹರಕೆಯ ರೂಪದಲ್ಲಿ 1,76,29,849 ನಗದು 45 ಗ್ರಾಂ ಚಿನ್ನ ಹಾಗೂ 1.300 ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲದೆ, ಈ ಹುಂಡಿಯಿಂದ 2,96,469 ರೂಪಾಯಿ ಮೌಲ್ಯದ ಬೇರೆ ದೇಶದ ಕರೆನ್ಸಿಗಳು ಪತ್ತೆಯಾಗಿವೆ. 20 ಯುಎಸ್‌ಎ ಡಾಲರ್, ಥಾಯ್ಲ್ಯಾಂಡ್ 1 ಒಂದು, ಶ್ರೀಲಂಕಾ 2, ಅರಬ್ 3 ನೋಟು ಸೇರಿದಂತೆ ಇತರ ದೇಶಗಳ ನೋಟುಗಳನಗನು ಹುಂಡಿಗೆ ಹಾಕಿದ್ದಾರೆ. ಅಲ್ಲದೆ, ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 11 ನೋಟುಗಳು ಹುಂಡಿಯಲ್ಲಿ ಹಾಕಿದ್ದಾರೆ.
ಈ ವೇಳೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಾ ಅಧೀಕ್ಷಕ ನಾಗೇಶ್, ಜಿಲ್ಲಾಡಳಿತ ಕಚೇರಿ ಮುಜರಾಯಿ ಶಾಖೆಯ ಭಾರತಿ, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
2.28 ಕೋಟಿ ರೂಪಾಯಿ ಸಂಗ್ರಹ: ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ (ಜುಲೈ 30) ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ ಕೇವಲ 32 ದಿನಗಳ ಅವಧಿಯಲ್ಲಿ 2.28 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಗೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ರಘುರವರ ಸಮ್ಮುಖದಲ್ಲಿ ದೇವರ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಇದು ಸಂಜೆ 6ಗಂಟೆಯವರೆಗೂ ನಡೆಯಿತು.
ಇನ್ನು 32 ದಿನಗಳ ಅವಧಿಯಲ್ಲಿ 2,28,03,803 ರೂಪಾಯಿ ಹುಂಡಿಯಲ್ಲಿ ಸಂಗ್ರಹವಾದರೆ, 59 ಗ್ರಾಂ ಚಿನ್ನ, 1.500 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಅಷ್ಟೇ ಅಲ್ಲದೆ,ವಿದೇಶದ 6 ನೋಟು ಕೂಡ ಪತ್ತೆಯಾಗಿವೆ. ಅಲ್ಲದೆ, ಚಲಾವಣೆಯಿಲ್ಲದ ಎರಡು ಸಾವಿರ ಮುಖಬೆಲೆಯ 21 ನೋಟುಗಳನ್ನು ಭಕ್ತರು ದೇವರ ಹುಂಡಿಗೆ ಹಾಕಿದ್ದಾರೆ ಎಂದು ಕಾರ್ಯದರ್ಶಿ ರಘು ತಿಳಿಸಿದ್ದಾರೆ.












Click it and Unblock the Notifications