ಹನೂರಿನ ಗುಂಡಿಮಯ ರಸ್ತೆಗಳಿಗೆ ರೀಲ್ಸ್ ಟಚ್: ವೀಡಿಯೋಗಳು ವೈರಲ್
ಚಾಮರಾಜನಗರ, ಅಕ್ಟೋಬರ್, 19: ರಾಜ್ಯದಲ್ಲಿ ಮತ್ತೆ ಮಳೆರಾಯನ ಆರ್ಭಟ ಮುಂದುವರೆದಿದೆ. ಇನ್ನು ನಿರಂತರವಾಗಿ ಸುರಿಯುತ್ತಿರುವ ಜೋರು ಮಳೆಗೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಗುಂಡಿ ಬಿದ್ದ ರಸ್ತೆಗಳೆಲ್ಲಾ ಕೆರೆಯಂತಾಗಿವೆ. ಇದರಿಂದ ಸಂಚರಿಸುವವರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ದೃಶ್ಯಗಳನ್ನು ಯುವಕನೋರ್ವ ಸೆರೆಹಿಡಿದು ಇವುಗಳು ದೊಡ್ಡ ದೊಡ್ಡ ಕೆರೆಗಳು ಎಂದು ವರ್ಣಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತೀ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ ರಸ್ತೆಯಲ್ಲಿನ ಗುಂಡಿಗಳನ್ನು ಗ್ರಾಮದ ಯುವಕನೋರ್ವ ವಿಡಿಯೋ ಮಾಡಿ, ತನ್ನದೇ ಆದ ರೀತಿಯಲ್ಲಿ ವರ್ಣನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದೀಗ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

ಮಾರ್ಟಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿರುವ ಗುಂಡಿಗಳನ್ನು ವಿಡಿಯೋ ಮಾಡಿ, ಇದು ಯಾವ ಕೆರೆ ಅಂದುಕೊಂಡಿದ್ದೀರಾ ಇದು ನಮ್ಮ ಊರಿನ ದೊಡ್ಡ ಕೆರೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೆರೆಗಳೆಲ್ಲ ತುಂಬಿಹೋಗಿವೆ. ಕುಡಿಯುವ ನೀರಿಗೆ ತೊಂದರೆಯಾಗಿತ್ತು. ಇದೀಗ ಕೆರೆ ತುಂಬಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ ಅನ್ನಿಸುತ್ತಿದೆ. ಕೆರೆಯ ನೋಡಲು ತುಂಬಾ ಚೆನ್ನಾಗಿ ಇದೆಯಲ್ಲವಾ, ನಮ್ಮ ಊರಿನ ರಸ್ತೆಯಲ್ಲಿ ಹಲವಾರು ಕೆರೆಗಳೆಲ್ಲ ತುಂಬಿರುವುದರಿಂದ ರೈತರಿಗೂ ತುಂಬಾ ಸಂತೋಷವಾಗಿದೆ ಎಂದು ವರ್ಣನೆ ಮಾಡಿದ್ದಾರೆ.
ಬಂಡಳ್ಳಿ ರಸ್ತೆ ಅದ್ಭುತ ರಸ್ತೆ: ಹನೂರು ತಾಲೂಕು ಕೇಂದ್ರ ಸ್ಥಾನದಿಂದ ಚಂಗವಾಡಿ, ಮಣಗಳ್ಳಿ, ಬಂಡಳ್ಳಿ ಶಾಗ್ಯ ಗ್ರಾಮದವರೆಗಿನ ರಸ್ತೆ ತುಂಬಾ ಹದಗಟ್ಟಿರುವುದರಿಂದ, ಸದಾಶಿವಪ್ಪ ಬೆಟ್ಟಪ್ಪ ಬಂಡಳ್ಳಿ ಎಂಬುವವರು ಸಾಮಾಜಿಕ ಜಾಲತಾಣ ಮುಖಪುಟದಲ್ಲಿ ಕರುನಾಡು ಬಂಧುಗಳೇ ನಮ್ಮ ರಸ್ತೆ ಅದ್ಭುತ ರಸ್ತೆ. ಹನೂರಿನಿಂದ ಶಾಗ್ಯ ಗ್ರಾಮದವರೆಗೆ ರಸ್ತೆಯಲ್ಲಿ ಉತ್ತಮ ತಳಿಯ ಭತ್ತ ಬೆಳೆಯಬಹುದು. ಈಗಾಗಲೇ ಮಳೆ ಬಿದ್ದಿರುವುದರಿಂದ ನಾಟಿ ಮಾಡಲು ಸಿದ್ಧವಾಗಿದೆ. ಯಾವುದೇ ರೀತಿಯ ಗೊಬ್ಬರ ಬೇಕಿಲ್ಲ ಎಂದು ಗ್ರಾಮಸ್ಥರನ್ನು ಮಾತನಾಡಿಸಿ ವಿಡಿಯೋ ಹರಿಬಿಟ್ಟಿದ್ದಾರೆ.
ಭಾರೀ ಮಳೆಗೆ ತುಂಬಿದ ಕೆರೆಗಳು: ಗುಂಡ್ಲುಪೇಟೆ ತಾಲೂಕಿನ ಹೊನ್ನಶೆಟ್ಟರಹುಂಡಿ ಗ್ರಾಮದಲ್ಲಿ ಮಳೆ ಆರ್ಭಟಕ್ಕೆ ಕೆರೆ ತುಂಬಿ ಏರಿ ಮೇಲೆ ನೀರು ಹರಿಯುತ್ತಿದೆ. ಇನ್ನು ಭಾರೀ ಮಳೆಯಿಂದ ಕೆರೆ ನೀರಿನ ಪ್ರಮಾಣ ಹೆಚ್ಚುತ್ತಲ್ಲೇ ಇದೆ. ಪರಿಣಾಮ ಕೋಡಿ ಸರಿಯಿಲ್ಲದ ಕಾರಣ ಏರಿ ಮೇಲೆ ನೀರು ಹರಿಯುತ್ತಿದ್ದು, ಕೆರೆಗಳು ಒಡೆಯುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ.
ಕೆರೆಗಳು ಒಡೆದರೇ ರೈತರು ಬೆಳೆದ ನೂರಾರು ಹೆಕ್ಟೇರ್ ಫಸಲು ನಾಶವಾಗುವ ಭೀತಿ ಎದುರಾಗಿದ್ದು, ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಬೇಕೆಂದು ಗ್ರಾಮದ ವೆಂಕಟೇಶ್ ಸೇರಿ ಹಲವರು ಒತ್ತಾಯಿಸಿದ್ದಾರೆ.
ಎರಡನೇ ಬಾರಿ ಕೋಡಿ ಬಿದ್ದ ಕೆರೆಗಳು: ಕೆಲವು ತಿಂಗಳ ಹಿಂದೆಯಷ್ಟೇ ಮುಂಗಾರು ಆರ್ಭಟಕ್ಕೆ ಕೋಡಿ ಬಿದ್ದಿದ್ದ ಕೆರೆಗಳು ಈಗ ಎರಡನೇ ಬಾರಿ ಭರ್ತಿಯಾಗಿ ಕೋಡಿ ಬಿದ್ದಿದೆ. ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕಮರಹಳ್ಳಿ ಕೆರೆ ನಿರಂತರ ಮಳೆಗೆ ವರ್ಷಗಳ ಬಳಿಕ ಕಳೆದ ತಿಂಗಳು ಕೋಡಿ ಬಿದ್ದಿತ್ತು.
ಕಮರಹಳ್ಳಿ ಕೆರೆ ತುಂಬಿ ಕೋಡಿ ಬಿದ್ದಿರುವ ಕಾರಣ ಸುತ್ತಮುತ್ತಲ ಪಂಪ್ ಸೆಟ್‍ಗಳಲ್ಲಿ ನೀರು ಅಧಿಕವಾಗಿ ಬರತೊಡಗಿದೆ. ಇದು ರೈತರ ವ್ಯವಸಾಯಕ್ಕೆ ಪೂರಕವಾಗಿದೆ. ಇನ್ನು, ಕೂತನೂರು ಕೆರೆಯೂ ಕೂಡ ಎರಡನೇ ಬಾರಿ ಕೋಡಿ ಬಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.












Click it and Unblock the Notifications