ಕೊಳ್ಳೇಗಾಲ: ಭತ್ತ ಕತ್ತರಿಸುವ ಯಂತ್ರ ಹಾಗೂ ಬೈಕ್ ನಡುವೆ ಭೀಕರ ಅಪಘಾತ, ನಾಲ್ವರು ಸಾವು
ಚಾಮರಾಜನಗರ, ಜನವರಿ, 15: ಸಂಕ್ರಾತಿ ಹಬ್ಬದ ಸಡಗರದ ನಡುವೆ ಜವರಾಯ ಅಟ್ಟಹಾಸ ಮೆರೆದಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದ್ದು, ಒಂದೇ ಕುಟುಂಬದ ನಾಲ್ವರು ಅಸುನೀಗಿದ್ದಾರೆ.
ಕೊಳ್ಳೇಗಾಲ ಪಾಳ್ಯ ಗ್ರಾಮದ ಸಂತೋಷ (32), ಸೌಮ್ಯ(27) ಹಾಗೂ ಸಾಕ್ಷಿ(4) ಮೃತಪಟ್ಟ ದುರ್ದೈವಿಗಳಾಗಿದ್ದು, ನಂತರ ಗಾಯಂಗೊಂಡಿದ್ದ ಅಭಿ ಎಂಬ ಮಗುವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಈ ಮಗು ಕೂಡ ಮೃತಪಟ್ಟಿದ್ದು, ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ.

ಅಪಘಾತ ಸಂಭವಿಸಿದ್ದೇಗೆ?: ಹಬ್ಬಕ್ಕೆಂದು ಬಟ್ಟೆ ತರಲು ಕೊಳ್ಳೇಗಾಲಕ್ಕೆ ಸಂತೋಷ್ ಕುಟುಂಬ ಬೈಕ್‌ನಲ್ಲಿ ತೆರಳುತ್ತಿದ್ದಾಗ ಜಿನಕನಹಳ್ಳಿ ಸಮೀಪ ಭತ್ತ ಕತ್ತರಿಸುವ ಯಂತ್ರ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್‌ನಿಂದ ನಾಲ್ವರು ಕೆಳಕ್ಕೆ ಬಿದ್ದಿದ್ದು, ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಂಗಡಿಗೆ ನುಗ್ಗಿದ ಬಸ್: ನಿಯಂತ್ರಣ ತಪ್ಪಿದ ಸಾರಿಗೆ ಸಂಸ್ಥೆ ಬಸ್ ಅಂಗಡಿಗೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಹನೂರು ತಾಲೂಕಿನ ಎಲ್ಲೆಮಾಳ ಸಮೀಪ ನಡೆದಿದೆ.
ಘಟನೆಯಲ್ಲಿ ಕೌದಳ್ಳಿ ಗ್ರಾಮದ ಬಂಕಪ್ಪ(31) ಹಾಗೂ ಸೀಗಯ್ಯ(48) ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಲೆಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಎಲ್ಲೇಮಾಳ ಗ್ರಾಮದ ಸಮೀಪ ನಿಯಂತ್ರಣ ತಪ್ಪಿ ಮತ್ತುರಾಜ್ ಎಂಬವರಿಗೆ ಸೇರಿದ ಅಂಗಡಿಗೆ ನುಗ್ಗಿದೆ.
ಈ ವೇಳೆ ಅಂಗಡಿ ಮುಂಭಾಗ ಬೈಕ್ ಮೇಲೆ ಕುಳಿತಿದ್ದ ಬಂಕಪ್ಪ ಎಂಬಾತನ ಕಾಲು ಮುರಿದಿದ್ದು, ಸೀಗಯ್ಯನಿಗೂ ತೀವ್ರ ಪೆಟ್ಟು ಬಿದ್ದಿದೆ. ಇನ್ನು ಹನೂರು ಪೊಲೀಸರು ಸದ್ಯ ಬಸ್ ಅನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದು, ಪ್ರಯಾಣಿಕರನ್ನು ಬೇರೆ ಬಸ್‌ನಲ್ಲಿ ಕಳುಹಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications