ಚಲಿಸುತ್ತಿದ್ದ ವೇಳೆ ಕಳಚಿದ ಶಾಲಾ ವಾಹನದ ಚಕ್ರಗಳು: ತಪ್ಪಿದ ಭಾರೀ ಅನಾಹುತ
ಚಾಮರಾಜನಗರ, ಜುಲೈ, 18: ಶಾಲಾ ವಾಹನ ಚಲಿಸುತ್ತಿದ್ದಾಗ ಚಕ್ರಗಳು ಕಳಚಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿ ಸಮೀಪ ನಡೆದಿದೆ.
ಗುಂಡ್ಲುಪೇಟೆ ಪಟ್ಟಣದಲ್ಲಿರುವ ಹಿಂದೂಸ್ಥಾನ್ ಪಬ್ಲಿಕ್ ಶಾಲೆಗೆ ಸೇರಿದ ಶಾಲಾ ವಾಹನ ಇದಾಗಿದ್ದು, ನೇನೆಕಟ್ಟೆ, ಆಲತ್ತೂರು, ಮಳವಳ್ಳಿ ಗ್ರಾಮಗಳಿಂದ ಮಕ್ಕಳನ್ನು ಶಾಲೆಗೆ ಕರೆ ತರುವಾಗ ಈ ಅವಘಡ ಉಂಟಾಗಿದೆ.

ಮಕ್ಕಳನ್ನು ಶಾಲೆಗೆ ಕರೆತರುವಾಗ ಹಿಂಬದಿಯ ಎರಡೂ ಚಕ್ರಗಳು ಕಳಚಿದ್ದು, ಘಟನೆಯಲ್ಲಿ 20ಕ್ಕೂ ಹೆಚ್ಚು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಶಾಲಾ ವಾಹನ ಸುಸ್ಥಿತಿಯಲ್ಲಿಡದಿರುವುದು ಅವಘಡಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಭೀಕರ ಅಪಘಾತ: ಲಾರಿ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಿಕ್ಕಬೆನ್ನೂರು ಬಳಿ ಈ ಘಟನೆ ನಡೆದಿದ್ದು, ಅಪಘಾತ ರಭಸಕ್ಕೆ ಮೂವರು ಸ್ಥಳದಲ್ಲಿ ಅಸುನಿಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಜ್ವಲ್ ರೆಡ್ಡಿ (30 ವರ್ಷ), ಹರ್ಷಿತಾ (28 ವರ್ಷ) ಮತ್ತು ಮಗು ಸೋಹನ್ (2 ವರ್ಷ) ಮೃತ ದುರ್ದೈವಿಗಳಾಗಿದ್ದಾರೆ. ಗಾಯಗೊಂಡವರನ್ನು ಶಿಲ್ಪ, ಸ್ವರ್ಣ ಜಾರ್ಜ್, ಮಧುಮಿತ, ವಿಜಯ್ ರೆಡ್ಡಿ, ಕೃಷ್ಣ, ಎಂದು ಗುರುತಿಸಲಾಗಿದೆ. ಚಲಿಸುತ್ತಿದ್ದ ಲಾರಿಯ ಟಯರ್ ಬ್ಲಾಸ್ಟ್ ಆಗುತ್ತಿದ್ದಂತೆ, ವೇಗವಾಗಿ ಹಿಂಬದಿಯಿಂದ ಬಂದ ಫಾರ್ಚೂನರ್ ಕಾರು ಲಾರಿಗೆ ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರದುರ್ಗ ಕಡೆಯಿಂದ ದಾವಣಗೆರೆ ಕಡೆಗೆ ಚಲಿಸುವಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಪ್ರಕರಣ ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಕಬ್ಬು ಬೆಳೆ ಸುಟ್ಟು ಭಸ್ಮ: ಜೋತುಬಿದ್ದ ವಿದ್ಯುತ್ ತಂತಿ ತಗುಲಿ ನಾಲ್ಕು ಹೆಕ್ಟೇರ್ ಕಬ್ಬು ಬೆಳೆ ಸುಟ್ಟು ಭಸ್ಮವಾದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದಲ್ಲಿ ಘಟನೆ.
ಗುಂಡೇಗಾಲ ಗ್ರಾಮದ ಮಹದೇವಪ್ರಭು ಎಂಬವರಿಗೆ ಸೇರಿದ ಜಮೀನಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ರೈತ ಬೆಳೆದಿದ್ದ ಕಬ್ಬು ಬೆಳೆ ನಾಶವಾದ ದುರ್ಘಟನೆ ನಡೆದಿದೆ. ಕಳೆದ ವರ್ಷವೂ ಒಂದೂವರೆ ಹೆಕ್ಟೇರ್ ಕಬ್ಬು ಕಳೆದುಕೊಂಡಿದ್ದ ಈ ಕುಟುಂಬ ಇದೀಗ ಮತ್ತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ನಾಲ್ಕು ಹೆಕ್ಟೇರ್ ಕಬ್ಬು ಹಾಗೂ ಪೈಪ್ ಲೈನ್ ಸೇರಿದಂತೆ ಅಪಾರ ಪ್ರಮಾಣ ನಷ್ಟವಾಗಿದೆ. ಇದರಿಂದ ರೈತರ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸುವ ಕೆಲಸವನ್ನು ಮಾಡಿದ್ದಾರೆ. ಈ ಮೂಲಕ ಹೆಚ್ಚಿನ ಅನಾಹುತ ಆಗದಂತೆ ತಡೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದೆ. ಇನ್ನು ಪದೇ ಪದೇ ಆಗುತ್ತಿರುವ ದುರ್ಘಟನೆಯಿಂದ ಜಮೀನನ್ನೇ ಮಾರಾಟ ಮಾಡಲು ರೈತನ ಕುಟುಂಬ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ. ಇನ್ನು ಚೆಸ್ಕಾಂ ಅಧಿಕಾರಿಗಳಿಗೆ ಈ ಬಗ್ಗೆ ಎಷ್ಟು ಬಾರಿ ಹೇಳಿದರೂ ಕ್ರಮ ಕೈಗೊಳ್ಳುತ್ತಿಲ್ಲವೆಂಬ ಆರೋಪವನ್ನು ಕುಟುಂಬಸ್ಥರು ಮಾಡಿದ್ದಾರೆ.












Click it and Unblock the Notifications