ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 2 ತಾಸು ಬಂದ್; ಕಾರಣ ಏನು?
ಚಾಮರಾಜನಗರ, ಸೆಪ್ಟೆಂಬರ್, 19: ಚಾಮರಾಜನಗರ ಒಂದಲ್ಲ ಒಂದು ರೀತಿಯಲ್ಲಿ ರಸ್ತೆ, ಅಪಘಾತಗಳು, ಪ್ರಾಣಿಗಳ ವಿಡಿಯೋ ವೈರಲ್ ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದೆ. ಹಾಗೆಯೇ ಇದೀಗ ಈ ಜಿಲ್ಲೆ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದಾಗಿದ್ದು, ಸುಮಾರು ಎರಡು ಗಂಟೆಗಳ ಕಾಲ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ. ಕಾರಣ ಏನೆಂದು ಇಲ್ಲಿ ತಿಳಿಯಿರಿ.
ಅತಿಭಾರ ಹೊತ್ತ ವಾಹನಗಳು ಕಳೆದ ಕೆಲವು ದಿನಗಳಿಂದ ಮತ್ತೇ ಸಂಚರಿಸುತ್ತಿರುವ ಹಿನ್ನೆಲೆ ಕರ್ನಾಟಕ ಮತ್ತು ತಮಿಳುನಾಡು ಬೆಸೆಯುವ ಚಾಮರಾಜನಗರ ಗಡಿಭಾಗವಾದ ದಿಂಬಂನಲ್ಲಿ 2 ತಾಸು ಟ್ರಾಫಿಕ್ ಜಾಂ ಆದ ಘಟನೆ ಗುರುವಾರ (ಸೆಪ್ಟೆಂಬರ್ 19) ಮಧ್ಯಾಹ್ನ ನಡೆದಿದೆ. ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಂ ಉಂಟಾಗಿ ವಾಹನ ಸವಾರರು ಪರದಾಡಿದರು.

ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಗಡಿಯಲ್ಲಿರುವ ಅಸನೂರು, ದಿಂಬಂನಲ್ಲಿ ಅತಿಭಾರ ಹೊತ್ತ ವಾಹನಗಳು ಸಂಚಾರ ಮಾಡಿವೆ. ಈ ಹಿನ್ನೆಲೆ ಉಳಿದ ವಾಹನಗಳಾದ ಬಸ್, ಕಾರು, ಬೈಕ್ ಸವಾರರು ಗಂಟೆಗಟ್ಟಲೇ ಟ್ರಾಫಿಕ್ ಜಾಂನಲ್ಲಿ ಸಿಲುಕಿ ಪರದಾಡಿದರು. ಆ್ಯಂಬುಲೆನ್ಸ್‌ಗಳು ಸೇರಿದಂತೆ ಹಲವು ವಾಹನಗಳು ಕಿಲೋ ಮೀಟರ್‌ಗಟ್ಟಲೇ ನಿಂತು ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಫಜೀತಿ ಅನುಭವಿಸಿದ್ದಾರೆ.
ಜಂಟಿ ಸಮೀಕ್ಷೆ: ಗುಂಡ್ಲುಪೇಟೆ ಮೂಲಕ ಮೈಸೂರಿಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ಅಪಘಾತಗಳು ಹೆಚ್ಚಳ ಆಗುತ್ತಲೇ ಇವೆ. ಈ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುರುತಿಸಲಾದ ಅಪಘಾತ ವಲಯಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪ್ರಾದೇಶಿಕ ಸಾರಿಗೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿದರು.
ಗುಂಡ್ಲುಪೇಟೆ ಪಟ್ಟಣದಿಂದ ಹಿರೀಕಾಟಿ ಗೇಟ್‌ವರೆಗೆ ಸೆಲ್ ಪೆಟ್ರೋಲ್ ಬಂಕ್, ಎಪಿಎಂಸಿ ಪ್ರಾಂಗಣ, ಬೆಂಡಗಹಳ್ಳಿ, ಗರಗನಹಳ್ಳಿ ಗೇಟ್, ಅರೇಪುರ ಗೇಟ್, ಹಿರೀಕಾಟಿ ಗೇಟ್ ಇನ್ನೂ ಹಲವು ಕಡೆಗಳಲ್ಲಿರುವ ಅಪಘಾತ ವಲಯಗಳನ್ನು ಪರಿಶೀಲಿಸಿದರು. ಅಪಘಾತ ನಿಯಂತ್ರಣ ಸಲುವಾಗಿ ಜಂಟಿಯಾಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಈ ವೇಳೆ ಪೊಲೀಸ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ, ಆರ್‌ಟಿಒ ಇನ್ಸ್ಪೆಕ್ಟರ್ ದಿನೇಶ್‍ಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಕೌಶಿಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
11 ಮಂದಿಗೆ ಗಾಯ: ನಿಯಂತ್ರಣ ತಪ್ಪಿದ ಟಾಟಾ ಸುಮೋ ಹಳ್ಳಕ್ಕೆ ಉರುಳಿ 11 ಮಂದಿಗೆ ಗಾಯಗಳಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಧನಗೆರೆ ಸಮೀಪ ಇತ್ತೀಚೆಗಷ್ಟೇ ನಡೆದಿತ್ತು.
ಕನಕಪುರ ತಾಲೂಕಿನ ಅರಳಗಡ್ಡಕಲ್ಲು ಗ್ರಾಮದ ಕಾರು ಚಾಲಕ ಲಿಂಗೇಗೌಡ (50), ಕನಕಪುರ ತಾಲೂಕಿನ ತಟಗುಪ್ಪೆ ಗ್ರಾಮದ ಅಮೂಲ್ಯ (12), ಕನಕಪುರ ತಾಲೂಕಿನ ಆನಂದ್ (10), ಶಿವಮ್ಮ (50), ಮಾದಪ್ಪ (60), ಚಂದ್ರು (45), ಮಾದೇವಮ್ಮ (50), ಬಿ. ಶಿವಮ್ಮ (50), ರುದ್ರಮ್ಮ(30), ಚಿಕ್ಕಭೈರಪ್ಪ (60) ಗಾಯಗೊಂಡವರು.
ಕನಕಪುರ ಮೂಲದ 13 ಮಂದಿ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ವಾಪಾಸ್ ಆಗುತ್ತಿದ್ದ ವೇಳೆ ಧನಗೆರೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಗುಡ್ಡಕ್ಕೆ ಗುದ್ದಿ ಟಾಟಾ ಸುಮೋ ಹಳ್ಳಕ್ಕೆ ಉರುಳಿದೆ. ಇನ್ನು ಈ ಕಾರಿನಲ್ಲಿದ್ದ 13 ಮಂದಿಯಲ್ಲಿ 11 ಮಂದಿಗೆ ಗಾಯಗಳಾಗಿದ್ದು, ಸಾರ್ವಜನಿಕರು ಮತ್ತು ಪೊಲೀಸರು ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಈ ಪ್ರಕರಣ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications