UPI: ಯುಪಿಐ ಬಳಕೆದಾರರಿಗೆ ಶಾಕ್, ಡಿಜಿಟಲ್ ಪಾವತಿಗೆ ಶುಲ್ಕ ವಿಧಿಸುವ ಮಸೂದೆಗೆ ಅಂಕಿತ
UPI: ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿರುವ ಯುಪಿಐ ಹಾಗೂ ಇತರ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳಿಗೆ ಇನ್ಮುಂದೆ ಸೇವಾ ಶುಲ್ಕ ಅನ್ವಯ ಆಗುವ ಸಾಧ್ಯತೆಯಿದೆ. ದೇಶದಲ್ಲಿ ಯುಪಿಐ ಮತ್ತು ಇತರ ಡಿಜಿಟಲ್ ಪಾವತಿಗಳ ಮೇಲೆ ಬ್ಯಾಂಕುಗಳು ಹಾಗೂ ಸೇವಾ ಪೂರೈಕೆದಾರರು ಶುಲ್ಕ ವಿಧಿಸಲು ಅನುಮತಿ ನೀಡುವ ತೆರಿಗೆ ಮತ್ತು ಇತರ ತಿದ್ದುಪಡಿ ಮಸೂದೆ, 2026 ಅನ್ನು ಲೋಕಸಭೆಯು ಅಂಗೀಕರಿಸಿದೆ.
ಈ ಹೊಸ ಮಸೂದೆಯ ಮೂಲಕ ಪಾವತಿ ಮತ್ತು ವಹಿವಾಟು ವ್ಯವಸ್ಥೆಗಳ ಕಾಯ್ದೆ 2007ರ ನಿಯಮಗಳಿಗೆ ಪ್ರಮುಖ ತಿದ್ದುಪಡಿ ತರಲಾಗಿದೆ. ಈವರೆಗೆ ಜಾರಿಯಲ್ಲಿದ್ದ ಸೆಕ್ಷನ್ 10ಎ ಪ್ರಕಾರ ಬ್ಯಾಂಕುಗಳು ಮತ್ತು ಪಾವತಿ ಸೇವಾ ಪೂರೈಕೆದಾರರು ಡಿಜಿಟಲ್ ಪಾವತಿಗಳ ಮೇಲೆ 'ಮರ್ಚಂಟ್ ಡಿಸ್ಕೌಂಟ್ ರೇಟ್' (ಎಂಡಿಆರ್) ಅಥವಾ ಯಾವುದೇ ರೀತಿಯ ಶುಲ್ಕವನ್ನು ನೇರವಾಗಲಿ ಅಥವಾ ಪರೋಕ್ಷವಾಗಲಿ ವಿಧಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿತ್ತು.

ಆರ್‌ಟಿಜಿಎಸ್ ಮತ್ತು ಎನ್‌ಇಎಫ್‌ಟಿ ಪಾವತಿಗಳಿಗೆ ಶುಲ್ಕ ಇದ್ದರೂ ಯುಪಿಐ ವಹಿವಾಟುಗಳಿಗೆ ಪೂರ್ಣ ವಿನಾಯಿತಿ ನೀಡಲಾಗಿತ್ತು. ಆದರೆ ಪ್ರಸ್ತುತ ತಿದ್ದುಪಡಿಯು ಈ ವಿನಾಯಿತಿಯನ್ನು ತೆಗೆದುಹಾಕಿದ್ದು, ಅಧಿಸೂಚಿತ ಡಿಜಿಟಲ್ ಪಾವತಿಗಳ ಮೇಲೆ ಶುಲ್ಕ ವಿಧಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಈ ಮಸೂದೆಯನ್ನು ಸಭೆಯ ಮುನ್ನಡೆಗೆ ಮಂಡಿಸಿದರು. ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಕೋಲಾಹಲದ ನಡುವೆಯೂ ಯಾವುದೇ ವಿಸ್ತೃತ ಚರ್ಚೆಯಿಲ್ಲದೆ ಮಸೂದೆಯನ್ನು ಯಶಸ್ವಿಯಾಗಿ ಅಂಗೀಕರಿಸಲಾಯಿತು.
ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಬಂದಿರುವ ಬ್ಯಾಂಕುಗಳು, ಸಂಸ್ಥೆಗಳು ಹಾಗೂ ಪಾವತಿ ಮೂಲಸೌಕರ್ಯ ಕಂಪನಿಗಳಿಗೆ ತಂತ್ರಜ್ಞಾನ ನಿರ್ವಹಣೆ ಮತ್ತು ಸುರಕ್ಷತೆಗಾಗಿ ಭಾರೀ ಪ್ರಮಾಣದ ವೆಚ್ಚ ತಗುಲುತ್ತಿದೆ. ಇಂತಹ ಸಂಸ್ಥೆಗಳಿಗೆ ಸುಸ್ಥಿರ ಆದಾಯ ಮಾದರಿ ಒದಗಿಸುವುದು ಈ ತಿದ್ದುಪಡಿಯ ಮುಖ್ಯ ಉದ್ದೇಶವಾಗಿದೆ.
ಗ್ರಾಹಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ತೊಂದರೆ ಆಗದಂತೆ ಸಣ್ಣ ಪ್ರಮಾಣದ ಶುಲ್ಕವನ್ನು ನಿರ್ದಿಷ್ಟ ಪಾವತಿಗಳ ಮೇಲೆ ಅನ್ವಯಿಸಲು ಸರ್ಕಾರ ಯೋಜಿಸಿದೆ. ಮುಖ್ಯವಾಗಿ ಆದಾಯ ತೆರಿಗೆ ಕಾಯ್ದೆಯಡಿ 50 ಕೋಟಿ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸುವ ದೊಡ್ಡ ಉದ್ಯಮಗಳು ರೂಪೇ ಡೆಬಿಟ್ ಕಾರ್ಡ್ ಮತ್ತು ಭೀಮ್ ಯುಪಿಐ ಕ್ಯೂಆರ್ ಕೋಡ್ ಬಳಕೆಯನ್ನು ಕಡ್ಡಾಯವಾಗಿ ನೀಡಬೇಕಾಗಿದ್ದು, ಅಂತಹ ವಹಿವಾಟುಗಳ ಮೇಲೆ ಕೇಂದ್ರ ಸರ್ಕಾರವು ನಿಯಮಾವಳಿಗಳನ್ನು ಅಧಿಸೂಚನೆಯ ಮೂಲಕ ಶೀಘ್ರದಲ್ಲೇ ಹೊರಡಿಸಲಿದೆ. ಈ ನಿರ್ಧಾರದಿಂದ ದೇಶದಲ್ಲಿ ಶೂನ್ಯ-MDR ಯುಗ ಅಂತ್ಯಗೊಂಡಂತಾಗಿದ್ದು, ಮುಂದಿನ ದಿನಗಳಲ್ಲಿ ಡಿಜಿಟಲ್ ಪಾವತಿಗಳ ಸ್ವರೂಪದಲ್ಲಿ ಬದಲಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications
