ನೋಕಿಯಾದಿಂದ ನೆಟ್ವರ್ಕ್ ಕ್ಷೇತ್ರದಲ್ಲಿ ಭಾರಿ ಡೀಲ್
ಫಿನ್ಲೆಂಡ್, ಏ.15: ಫಿನ್ಲೆಂಡ್ ಮೂಲದ ನೆಟ್ವರ್ಕ್ ಉಪಕರಣಗಳ ಉತ್ಪಾದನಾ ಸಂಸ್ಥೆ ನೋಕಿಯಾ ಈಗ ಮತ್ತೊಮ್ಮೆ ಪುಟಿದೇಳಲು ಸಿದ್ಧವಾಗುತ್ತಿದೆ. ಫ್ರೆಂಚ್ ಸಂಸ್ಥೆ ಅಲ್ಕಾಟೆಲ್ ಲೂಸೆಂಟ್ ಖರೀದಿಗೆ ನೋಕಿಯಾ ಸಹಿ ಹಾಕಿದೆ.
ಭಾರತದ ಸೇರಿದಂತೆ ಜಗತ್ತಿನೆಲ್ಲೆಡೆ ಮೊಬೈಲ್ ಹ್ಯಾಂಡ್ ಸೆಟ್ ಜನಪ್ರಿಯಗೊಳ್ಳಲು ಕಾರಣವಾಗಿದ್ದ ನೋಕಿಯಾ ಇತ್ತೀಚೆಗೆ ಮಂಕಾಗಿತ್ತು. ಮೈಕ್ರೋಸಾಫ್ಟ್ ಸಂಸ್ಥೆ ತಮ್ಮ ನೆರಳು ನೋಕಿಯಾ ಮೇಲೆ ಚಾಚಿ ಕೊನೆಗೆ ನೋಕಿಯಾ ಮೊಬೈಲ್ ಅಸ್ತಿತ್ವವನ್ನು ಅಲ್ಲಾಡಿಸಿಬಿಟ್ಟಿತು.[ನೋಕಿಯಾ ಹೆಸರು ಕೈಬಿಟ್ಟ ಮೈಕ್ರೋಸಾಫ್ಟ್]
ಹೀಗಾಗಿ ನೋಕಿಯಾ ಮೊಬೈಲ್ ಜಗತ್ತಿನಿಂದ ನೆಟ್ವರ್ಕ್ ಉಪಕರಣಗಳತ್ತ ಕಣ್ಣು ಹಾಕಿತು. ಈಗ ಅಲ್ಕಾಟೆಲ್-ಲೂಸೆಂಟ್ ಕಂಪನಿಯನ್ನು ಬುಧವಾರ ಸುಮಾರು 15.6 ಬಿಲಿಯನ್ ಯುರೋಸ್ (16.58 ಬಿಲಿಯನ್ ಯುಎಸ್ ಡಿ) ಕೊಟ್ಟು ಖರೀದಿಸಿದೆ.

ಈ ಖರೀದಿಯ ನಂತರ ನೋಕಿಯಾ ಶೇ 66.5 ಪಾಲು ಹಾಗೂ ಅಲ್ಕಾಟೆಲ್ ಲೂಸೆಂಟ್ ಶೇ 33.5 ಪಾಲು ಹೊಂದಲಿದೆ. ಅಂತಿಮ ಡೀಲ್ 2016ರ ಮೊದಲ ಭಾಗದಲ್ಲಿ ಪೂರ್ಣಗೊಳ್ಳಲಿದೆ. [ನೋಕಿಯಾ ಬೆನ್ನಲ್ಲೇ ತೈವಾನ್ ಕಂಪನಿ ಬಾಗಿಲು ಬಂದ್]
ಮೊಬೈಲ್ ಕ್ಷೇತ್ರದ ದಿಗ್ಗಜ ಸ್ವೀಡನ್ನಿನ ಎರಿಕ್ಸನ್ ಗೆ ಪೈಪೋಟಿ ನೀಡಲು ಈಗ ನೋಕಿಯಾಗೆ ಲೂಸೆಂಟ್ ಬೆಂಬಲ ಸಿಕ್ಕಿದೆ. ಟೆಲಿಕಾಂ ಕ್ಷೇತ್ರದಲ್ಲಿ ನೋಕಿಯಾ ತನ್ನ ಛಾಪು ಮೂಡಿಸಲು ಯತ್ನಿಸುತ್ತಿದೆ.
ಸಮೀಕ್ಷೆಯ ಪ್ರಕಾರ ವೈರ್ ಲೆಸ್ ಮಾರುಕಟ್ಟೆಯಲ್ಲಿ ಎರಿಕ್ಸನ್ ಶೇ40ರಷ್ಟು ಸ್ವಾಮ್ಯತೆ ಹೊಂದಿದ್ದರೆ ನೋಕಿಯಾ ಶೇ35 ರಷ್ಟಿದೆ. ಚೀನಾದ ಹ್ಯೂವೈ ಶೇ 20ರಷ್ಟು ಪಾಲು ಹೊಂದಿದೆ.
ಈ ಡೀಲ್ ನಂತರ ಎರಡು ಕಂಪನಿಗಳ ಒಟ್ಟು ಮಾನವ ಸಂಪನ್ಮೂಲ ಬಲ 11,400ಕ್ಕೇರಲಿದೆ. (ಏಜೆನ್ಸೀಸ್)











Click it and Unblock the Notifications