GST Collection: ಏಪ್ರಿಲ್ ತಿಂಗಳಲ್ಲಿ ಸಾರ್ವಕಾಲಿಕ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ; ಕರ್ನಾಟಕಕ್ಕೆ 2ನೇ ಸ್ಥಾನ
ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಪ್ರಮಾಣ ಹೆಚ್ಚುತಲಿದ್ದು, ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ಹಣ ಸಂಗ್ರಹವಾಗುತ್ತಿದೆ. 2023ರ ಏಪ್ರಿಲ್ ತಿಂಗಳಿನಲ್ಲಿ ಕೇಂದ್ರ ಸರ್ಕಾರಕ್ಕೆ 1,87,035 ಕೋಟಿ ರೂಪಾಯಿ ಹರಿದುಬಂದಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.
2016ರಿಂದ ಈವರೆಗೆ ಇಷ್ಟು ಪ್ರಮಾಣದಲ್ಲಿ ಜಿಎಸ್‌ಟಿ ಸಂಗ್ರಹವಾಗಿದ್ದು ಇದೇ ಮೊದಲನೇ ಬಾರಿ. ಸಂಗ್ರಹವಾಗಿರುವ 1.87 ಲಕ್ಷ ಕೋಟಿ ರೂ. ಮೊತ್ತದ ಜಿಎಸ್‌ಟಿ ಆದಾಯದಲ್ಲಿ ಸಿಜಿಎಸ್ಟಿ 38,440 ಕೋಟಿ ರೂ, ಎಸ್ಜಿಎಸ್ಟಿ 47,412 ಕೋಟಿ ರೂ, ಐಜಿಎಸ್ಟಿ 89,158 ಕೋಟಿ ರೂ. ಹಾಗೂ 12,025 ಕೋಟಿ ರೂ. ಮೊತ್ತದ ಸೆಸ್ನ ಆದಾಯ ಸೇರಿದೆ. ಮೇ 1ರಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ.

ಮೂರು ವಿಧದ ಜಿಎಸ್ಟಿಯಲ್ಲಿ ಎಸ್ಜಿಎಸ್ಟಿ ವಿಧದಲ್ಲಿ ಸಂಗ್ರಹವಾದ ಹಣ ಆಯಾ ರಾಜ್ಯಗಳಿಗೆ ಸಂದಾಯವಾಗುತ್ತದೆ. ಐಜಿಎಸ್ಟಿ ಎಂದರೆ ಇಂಟಿಗ್ರೇಟೆಡ್ ಜಿಎಸ್‌ಟಿ. ಇದು ಅಂತಾರಾಜ್ಯ ವಹಿವಾಟುಗಳಲ್ಲಿ ಸಂಗ್ರಹವಾದ ತೆರಿಗೆಯಾಗಿದೆ. ಏಪ್ರಿಲ್ ತಿಂಗಳ ಐಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ 34,972 ಕೋಟಿ ರೂ. ಮೊತ್ತದ ಹಣ ಸರಕುಗಳ ಆಮದಿನಿಂದ ಬಂದಿದೆ. ಈ ಐಜಿಎಸ್ಟಿ ತೆರಿಗೆಯಲ್ಲಿ ಅರ್ಧದಷ್ಟು ಮೊತ್ತ ಕೇಂದ್ರಕ್ಕೆ ಹೋದರೆ, ಉಳಿದ ಅರ್ಧ ಮೊತ್ತ ಸಂಬಂಧಿಸಿದ ರಾಜ್ಯಗಳಿಗೆ ಹಂಚಿಕೆ ಆಗುತ್ತದೆ.
ಇನ್ನು ಕಳೆದ ವರ್ಷ 2022ರ ಏಪ್ರಿಲ್ ತಿಂಗಳಲ್ಲಿ 1,67,540 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಈವರೆಗೆ ಅದೇ ಸಾರ್ವಕಾಲಿಕ ಜಿಎಸ್‌ಟಿ ಸಂಗ್ರಹ ದಾಖಲೆಯಾಗಿತ್ತು. ಇದೀಗ 2023 ಏಪ್ರಿಲ್ ತಿಂಗಳಲ್ಲಿ 1,87,035 ಕೋಟಿ ರೂ. ಸಂಗ್ರಹದ ಮೂಲಕ ಹೊಸ ಸಾರ್ವಕಾಲಿಕ ದಾಖಲೆಯಾಗಿದೆ. ಕಳೆದ ವರ್ಷಕ್ಕಿಂತ 19,495 ಕೋಟಿ ರೂ.ನಷ್ಟು ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ
ಭಾರತದಾದ್ಯಂತ ಏಪ್ರಿಲ್ ತಿಂಗಳಿನಲ್ಲಿ ಸಂಗ್ರಹವಾಗಿರುವ ಒಟ್ಟು ಜಿಎಸ್‌ಟಿ ಪೈಕಿ ಕರ್ನಾಟಕದ ಪಾಲು ದೊಡ್ಡದಾಗಿದೆ. ಕರ್ನಾಟಕ ರಾಜ್ಯ 14,593 ಕೋಟಿ ರೂ. ಜಿಎಸ್‌ಟಿ ಸಂಗ್ರಹ ಮಾಡಿಕೊಟ್ಟಿದೆ. ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅತಿಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ. ಮಹಾರಾಷ್ಟ್ರ 33,196 ಕೋಟಿ ರೂ. ಜಿಎಸ್‌ಟಿ ಸಂಗ್ರಹ ಮಾಡಿದೆ.
Great news for the Indian economy! Rising tax collection despite lower tax rates shows the success of how GST has increased integration and compliance. https://t.co/xf1nfN9hrG
— Narendra Modi (@narendramodi) May 1, 2023
ನಂತರದಲ್ಲಿ ಸ್ಥಾನದಲ್ಲಿ ಗುಜರಾತ್, ತಮಿಳುನಾಡು, ಉತ್ತರಪ್ರದೇಶ ಮತ್ತು ಹರಿಯಾಣ ರಾಜ್ಯಗಳು 10,000 ಕೋಟಿ ರೂ.ಗೂ ಹೆಚ್ಚು ಮೊತ್ತದ ಜಿಎಸ್‌ಟಿ ಸಂಗ್ರಹಿಸಿದ ರಾಜ್ಯಗಳಾಗಿವೆ.
ಕಳೆದ ವರ್ಷದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹದಲ್ಲಿ ಅತಿ ಹೆಚ್ಚು ಶೇಕಡವಾರು ಹೆಚ್ಚಳ ಕಂಡಿರುವ ರಾಜ್ಯಗಳೆಂದರೆ ಸಿಕ್ಕಿಂ, ಮಿಜೋರಾಂ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗೋವಾ, ನಾಗಾಲ್ಯಾಂಡ್. ಇನ್ನು ನಮ್ಮ ಕರ್ನಾಟಕದಲ್ಲಿ ಶೇ.23ರಷ್ಟು ಜಿಎಸ್‌ಟಿ ಸಂಗ್ರಹ ಹೆಚ್ಚಳವಾಗಿದೆ.
2023ರ ಏಪ್ರಿಲ್ನಲ್ಲಿ ಅತಿಹೆಚ್ಚು ಜಿಎಸ್‌ಟಿ ಸಂಗ್ರಹ ಮಾಡಿರುವ ರಾಜ್ಯಗಳು:
1) ಮಹಾರಾಷ್ಟ್ರ - 33,196 ಕೋಟಿ ರೂ.
2) ಕರ್ನಾಟಕ - 14,593 ಕೋಟಿ ರೂ.
3) ಗುಜರಾತ್ - 11,721 ಕೋಟಿ ರೂ.
4) ತಮಿಳುನಾಡು - 11,559 ಕೋಟಿ ರೂ.
5) ಉತ್ತರಪ್ರದೇಶ - 10,320 ಕೋಟಿ ರೂ.
6) ಹರ್ಯಾಣ - 10,035 ಕೋಟಿ ರೂ.
7) ಪಶ್ಚಿಮ ಬಂಗಾಳ - 6,447 ಕೋಟಿ ರೂ.
8) ದೆಹಲಿ - 6,320 ಕೋಟಿ ರೂ.
9) ತೆಲಂಗಾಣ - 5,622 ಕೋಟಿ ರೂ.
10) ಒಡಿಶಾ - 5,036 ಕೋಟಿ ರೂ.
11) ರಾಜಸ್ಥಾನ - 4,785 ಕೋಟಿ ರೂ.
12) ಮಧ್ಯಪ್ರದೇಶ - 4,267 ಕೋಟಿ ರೂ.












Click it and Unblock the Notifications