GST: ಅಧಿಕಾರಿಗಳ ಬಂಧನದ ಅಧಿಕಾರ ರದ್ದು, ಇನ್ನೂ ಏನೆಲ್ಲಾ ನಿರ್ಧಾರ ತೆಗೆದುಕೊಳ್ಳಲಾಗಿದೆ? ಯಾರಿಗೆಲ್ಲ ಪ್ರಯೋಜನಾ?

ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 57ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ವ್ಯಾಪಾರ-ವಹಿವಾಟು ಹಾಗೂ ಉದ್ಯಮ ವಲಯಕ್ಕೆ ಮಹತ್ವದ ಕೊಡುಗೆ ನೀಡುವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದೇಶದಲ್ಲಿ ವ್ಯಾಪಾರ, ವಹಿವಾಟು ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶದಿಂದ ಜಿಎಸ್‌ಟಿ ಮಂಡಳಿಯು ಜಾರಿಗೊಳಿಸಿರುವ ಸುಧಾರಣಾ ಕ್ರಮಗಳು ಉದ್ಯಮ ವಲಯಕ್ಕೆ ಭಾರಿ ನಿರಾಳತೆ ತಂದಿವೆ. 'ಜಿಎಸ್‌ಟಿ 2.0' ಎರಡನೇ ಹಂತದ ಭಾಗವಾಗಿ ಕೈಗೊಳ್ಳಲಾದ ಈ ತೀರ್ಮಾನಗಳಲ್ಲಿ ತೆರಿಗೆ ಅಧಿಕಾರಿಗಳ ನೇರ ಬಂಧನ ಅಧಿಕಾರವನ್ನು ಸಂಪೂರ್ಣವಾಗಿ ಹಿಂಪಡೆದಿರುವುದು ಹಾಗೂ ಕ್ರಿಮಿನಲ್ ಮೊಕದ್ದಮೆ ಜರುಗಿಸುವ ಕನಿಷ್ಠ ಮಿತಿಯನ್ನು 5 ಕೋಟಿ ರೂಪಾಯಿಗೆ ಹೆಚ್ಚಿಸಿರುವುದು ಅತ್ಯಂತ ಮಹತ್ವದ ನಿಲುವಾಗಿದೆ.

GST Council 57th Meeting No Rate Hike Arrest Powers Scrapped in india Key Decisions Explained

ಗುರುವಾರ ನಡೆದ ಸಭೆಯಲ್ಲಿ ಯಾವುದೇ ಜಿಎಸ್‌ಟಿ ತೆರಿಗೆ ದರಗಳಲ್ಲಿ ಬದಲಾವಣೆ ಮಾಡಲಾಗಿಲ್ಲ. ಇನ್ಮುಂದೆ ತೆರಿಗೆ ದರಗಳ ಪರಿಷ್ಕರಣೆಯನ್ನು ವರ್ಷಕ್ಕೊಮ್ಮೆ ಮಾತ್ರ ಮೀಸಲಾದ ಪ್ರತ್ಯೇಕ ಸಭೆಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಸದ್ಯ ದಿನನಿತ್ಯದ ತೆರಿಗೆ ಪಾಲನೆ, ನೋಂದಣಿ, ರಿಟರ್ನ್ಸ್, ರೀಫಂಡ್ ಹಾಗೂ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ನಿಯಮಗಳ ಸರಳೀಕರಣಕ್ಕೆ ಸಂಪೂರ್ಣ ಒತ್ತು ನೀಡಲಾಗಿದೆ.

ದಂಡದ ಮೊತ್ತ ಇಳಿಕೆ

ಜೊತೆಗೆ ಸಾಮಾನ್ಯ ದಂಡದ ಮೊತ್ತವನ್ನು 25,000ದಿಂದ 10,000 ರೂಪಾಯಿವರೆಗೆ ಇಳಿಕೆ ಮಾಡಲಾಗಿದೆ. ಪ್ರಸ್ತುತ ದೇಶದಲ್ಲಿ ಮಾಸಿಕ ತೆರಿಗೆಯೋಗ್ಯ ವಹಿವಾಟು ಶೇಕಡ 25.8ರಷ್ಟು ಏರಿಕೆಯಾಗಿ 50.58 ಲಕ್ಷ ಕೋಟಿ ರೂಪಾಯಿಗೆ ತಲುಪಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಆದಾಯ ಶೇಕಡ 11ರಷ್ಟು ಪ್ರಗತಿ ಕಂಡಿದೆ.

ನೇರ ಬಂಧನದ ಅಧಿಕಾರ ರದ್ದು

ಜಿಎಸ್‌ಟಿ ವ್ಯಾಪ್ತಿಯಲ್ಲಿ ಈ ಹಿಂದೆ ಅಧಿಕಾರಿಗಳಿಗಿದ್ದ ನೇರ ಬಂಧನದ ಅಧಿಕಾರವನ್ನು ರದ್ದುಗೊಳಿಸಿರುವುದು ವ್ಯಾಪಾರಸ್ಥರಿಗೆ ದೊಡ್ಡ ನಿರಾಳತೆ ತಂದಿದೆ. ಕ್ರಿಮಿನಲ್ ಕ್ರಮಗಳ ಮೂಲಕ ಭೀತಿ ಹುಟ್ಟಿಸುವುದಕ್ಕಿಂತ ಹೆಚ್ಚಾಗಿ, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ತಂತ್ರಜ್ಞಾನದ ಮೂಲಕ ನಕಲಿ ಇನ್‌ವಾಯ್ಸ್ ಹಾಗೂ ತೆರಿಗೆ ವಂಚನೆ ಪತ್ತೆಹಚ್ಚುವತ್ತ ವ್ಯವಸ್ಥೆ ಮುಖಮಾಡಿದೆ.

ಪ್ರಾಸಿಕ್ಯೂಷನ್ ಮಿತಿಯನ್ನು 1 ಕೋಟಿಯಿಂದ 5 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದ್ದು, ಕನಿಷ್ಠ ಶಿಕ್ಷೆಯ ನಿಯಮವನ್ನು ರದ್ದುಪಡಿಸಿ ನ್ಯಾಯಾಲಯಗಳ ವಿವೇಚನೆಗೆ ಬಿಡಲಾಗಿದೆ. ಇದು ವಾಡಿಕೆಯ ವ್ಯಾಪಾರ ವಿವಾದಗಳು ಕ್ರಿಮಿನಲ್ ಪ್ರಕರಣಗಳಾಗಿ ಬದಲಾಗುವುದನ್ನು ತಡೆಯಲಿದೆ.

ರಫ್ತುದಾರರು ಮತ್ತು ಉದ್ಯಮಿಗಳಿಗೆ ಅನುಕೂಲ ಆಗುವಂತೆ ರೀಫಂಡ್ ವ್ಯವಸ್ಥೆಯನ್ನು ಚುರುಕುಗೊಳಿಸಲಾಗಿದೆ. ರೀಫಂಡ್ ಸ್ವೀಕೃತಿ ನೀಡುವ ಅವಧಿಯನ್ನು 15ರಿಂದ 10 ದಿನಗಳಿಗೆ ಇಳಿಕೆ ಮಾಡಲಾಗಿದೆ. ರಿಸ್ಕ್ ಅಸೆಸ್ಮೆಂಟ್ ಆಧಾರದ ಮೇಲೆ ಶೇಕಡಾ 90 ರಷ್ಟು ಕ್ಲೈಮ್ ಮೊತ್ತವನ್ನು ಸ್ವೀಕೃತಿಯ ಮೂರು ಕೆಲಸದ ದಿನಗಳಲ್ಲಿ ಮಂಜೂರು ಮಾಡಲಾಗುತ್ತದೆ. ಕ್ಯಾಶ್ ಲೆಡ್ಜರ್‌ನಲ್ಲಿರುವ ಹೆಚ್ಚುವರಿ ಮೊತ್ತದ ರೀಫಂಡ್ ಸಂಪೂರ್ಣ ಸ್ವಯಂಚಾಲಿತವಾಗಲಿದೆ.

ಇನ್‌ವರ್ಟೆಡ್ ಡ್ಯೂಟಿ ಅಡಿಯಲ್ಲಿ ಇನ್‌ಪುಟ್ ಸೇವೆಗಳ ರೀಫಂಡ್‌ಗೆ ನವೆಂಬರ್ 1, 2026ರಿಂದ ಹಾಗೂ ಪ್ಲಾಂಟ್ ಮತ್ತು ಮೆಷಿನರಿ ರೀಫಂಡ್‌ಗೆ ಏಪ್ರಿಲ್ 1, 2027ರಿಂದ ಅವಕಾಶ ನೀಡಲಾಗಿದೆ. ಇದು ಫಾರ್ಮಾ ಮತ್ತು ಎಫ್‌ಎಂಸಿಜಿ ಕ್ಷೇತ್ರಗಳ ಬಂಡವಾಳದ ಮೇಲಿನ ಒತ್ತಡ ತಗ್ಗಿಸಲಿದೆ.

ಇ-ಕಾಮರ್ಸ್, ಐಟಿಸಿ ನಿಯಮಗಳಲ್ಲಿ ಸಡಿಲಿಕೆ

ಗ್ರಾಹಕರಿಗೆ ಮಾತ್ರ ಸರಕು ಸರಬರಾಜು ಮಾಡುವ 5 ಕೋಟಿ ರೂಪಾಯಿವರೆಗಿನ ವಹಿವಾಟು ಹೊಂದಿರುವ ಸಣ್ಣ ತೆರಿಗೆದಾರರಿಗೆ ತ್ರೈಮಾಸಿಕ ತೆರಿಗೆ ಪಾವತಿ ಮತ್ತು ವರ್ಷಕ್ಕೊಮ್ಮೆ ಮಾತ್ರ ರಿಟರ್ನ್ ಸಲ್ಲಿಸುವ ಐಚ್ಛಿಕ ಯೋಜನೆಯನ್ನು ತರಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇ-ಕಾಮರ್ಸ್ ಮೂಲಕ ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳು ಇತರ ರಾಜ್ಯಗಳಲ್ಲಿರುವ ಆಪರೇಟರ್‌ಗಳ ಗೋದಾಮುಗಳನ್ನು ತಮ್ಮ ಪ್ರಮುಖ ವ್ಯವಹಾರದ ಸ್ಥಳ ಎಂದು ಸುಲಭವಾಗಿ ನೋಂದಾಯಿಸಿಕೊಳ್ಳಬಹುದು.

ಉದ್ಯೋಗಿಗಳಿಗೆ ಪಡೆಯುವ ಆರೋಗ್ಯ ಮತ್ತು ಜೀವ ವಿಮೆ, ಕಾರ್ಖಾನೆ ಹೊರಗಿನ ಟೆಲಿಕಾಂ ಟವರ್‌ಗಳು, ಪೈಪ್‌ಲೈನ್‌ಗಳು, ಉಚಿತ ಮಾದರಿಗಳು ಹಾಗೂ ಕಾನೂನುಬದ್ಧವಾಗಿ ನಾಶಪಡಿಸಿದ ಅವಧಿ ಮೀರಿದ ಸರಕುಗಳ ಮೇಲೂ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಅನುಮತಿಸಲಾಗಿದೆ. ಸರಬರಾಜುದಾರರು ತೆರಿಗೆ ವಂಚಿಸಿದಾಗ ಅಸಲಿ ಖರೀದಿದಾರರನ್ನು ರಕ್ಷಿಸುವ ಕುರಿತು ಅಧ್ಯಯನ ನಡೆಸಲು ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ.

ರಸ್ತೆಗಳಲ್ಲಿ ಸರಕು ಸಾಗಣೆ ವಾಹನಗಳನ್ನು ಅನಗತ್ಯವಾಗಿ ತಡೆದು ತಪಾಸಣೆ ನಡೆಸುವುದಕ್ಕೆ ಬ್ರೇಕ್ ಹಾಕಲಾಗಿದೆ. ಜಂಟಿ ಆಯುಕ್ತ ಶ್ರೇಣಿಗಿಂತ ಕಡಿಮೆ ಇಲ್ಲದ ಅಧಿಕಾರಿಯ ಪೂರ್ವಾನುಮತಿ ಮತ್ತು ಖಚಿತ ಮಾಹಿತಿ ಇದ್ದರೆ ಮಾತ್ರ ವಾಹನವನ್ನು ತಡೆಯಬಹುದು. ಸರಕು ಹೊರಡುವ ರಾಜ್ಯ ಮತ್ತು ತಲುಪುವ ರಾಜ್ಯದ ಅಧಿಕಾರಿಗಳಿಗೆ ಮಾತ್ರ ತಪಾಸಣೆ ನಡೆಸಲು ಅಧಿಕಾರವಿದ್ದು, ಮಾರ್ಗ ಮಧ್ಯದ ರಾಜ್ಯಗಳು ವಾಹನಗಳನ್ನು ಅಡ್ಡಗಟ್ಟುವಂತಿಲ್ಲ.

ವಿದೇಶಿ ಕ್ಲೈಂಟ್‌ಗಳ ಸರಕುಗಳ ಮೇಲೆ ಭಾರತದಲ್ಲೇ ಕುಳಿತು ನಡೆಸುವ ಪರೀಕ್ಷೆ, ಸಂಶೋಧನೆ, ದುರಸ್ತಿ ಮತ್ತು ಪ್ರಮಾಣೀಕರಣದಂತಹ ಕೆಲಸಗಳನ್ನು ಸೇವಾ ರಫ್ತು ಎಂದು ಪರಿಗಣಿಸಲು ಒಪ್ಪಿಗೆ ನೀಡಲಾಗಿದೆ. ಇದು ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ಇಂಜಿನಿಯರಿಂಗ್ ಮತ್ತು ಗುತ್ತಿಗೆ ಉತ್ಪಾದನಾ ಕ್ಷೇತ್ರಗಳಿಗೆ ಭಾರಿ ಉತ್ತೇಜನ ನೀಡಲಿದೆ.

ಕೌನ್ಸಿಲ್‌ನ ಈ ಮಹತ್ವದ ತೀರ್ಮಾನಗಳನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಪಶ್ಚಿಮ ಬಂಗಾಳದ ಹಣಕಾಸು ಸಚಿವ ಸ್ವಪನ್ ದಾಸ್‌ಗುಪ್ತಾ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು ಸ್ವಾಗತಿಸಿದ್ದಾರೆ. ಈ ಸುಧಾರಣೆಗಳು ದೇಶದಲ್ಲಿ ವ್ಯಾಪಾರ ವಾತಾವರಣವನ್ನು ಮತ್ತಷ್ಟು ಹಸನುಗೊಳಿಸಲಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+