5G ಸ್ಪೆಕ್ಟ್ರಂ ಹರಾಜಿಗೆ ಅದಾನಿ ಎಂಟ್ರಿ, ಏರ್‌ಟೆಲ್ ಷೇರುಗಳು ಕುಸಿತ
ನವದೆಹಲಿ, ಜುಲೈ 12: ಭಾರತದಲ್ಲಿ 5G ಸ್ಪೆಕ್ಟ್ರಂ ಮಾರಾಟಕ್ಕೆ ಹರಾಜು ನಡೆಯಲಿದ್ದು ಅದಕ್ಕಾಗಿ ಹಲವು ಸಂಸ್ಥೆಗಳು ಬಿಡ್ ಸಲ್ಲಿಸಿವೆ. ಟೆಲಿಕಾಂ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿರುವ ಪ್ರಕಾರ ಗೌತಂ ಅದಾನಿ ಮಾಲೀಕತ್ವದ ಅದಾನಿ ಡಾಟಾ ನೆಟ್ವರ್ಕ್ಸ್, ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು 5ಜಿ ಸ್ಪೆಕ್ಟ್ರಂ ಖರೀದಿಗೆ ಅರ್ಜಿ ಹಾಕಿವೆ.
ಬಿಡ್ಡಿಂಗ್‌ಗೆ ಅದಾನಿ ಪ್ರವೇಶವಾಗಿರುವುದು ಸ್ಪರ್ಧೆಯಲ್ಲಿ ಬಿಸಿ ಏರಿದಂತಾಗಿದೆ. ಜುಲೈ 26ರಂದು ಸ್ಪೆಕ್ಟ್ರಂ ಹರಾಜು ನಡೆಯಲಿದೆ. ಕೆಲ ತರಂಗಾಂತರಗಳಿಗೆ ಹೆಚ್ಚು ಪೈಪೋಟಿ ಇರುವ ನಿರೀಕ್ಷೆ ಇದೆ.
5ಜಿಯಲ್ಲಿ 600 MHz, 700 MHz, 800 MHz, 900 MHz, 1800 MHz, 2100 MHz, 2300 MHz, 2500 MHz, 3300 MHz ಮತ್ತು 26 GHz ಬ್ಯಾಂಡ್‌ಗಳ ಸ್ಪೆಕ್ಟ್ರಂ ಖರೀದಿಗೆ ಅರ್ಜಿಗಳು ಬಂದಿವೆ ಎಂದು ಟೆಲಿಕಾಂ ಇಲಾಖೆ ತಿಳಿಸಿದೆ.
5ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆಯಿಂದ ಹಿಂದಕ್ಕೆ ಸರಿಯಲು ಇನ್ನೊಂದು ವಾರ ಅವಕಾಶ ಇದೆ. ಜುಲೈ 19ರಂದು ಅರ್ಜಿ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

ಷೇರುಪೇಟೆಯಲ್ಲಿ ಏರ್‌ಟೆಲ್ ನಡುಕ
5ಜಿ ಸ್ಪೆಕ್ಟ್ರಂ ರೇಸ್‌ಗೆ ಅದಾನಿ ಪ್ರವೇಶವಾಗುವುದರೊಂದಿಗೆ ಇನ್ನಿಲ್ಲದ ಪೈಪೋಟಿ ಹೆಚ್ಚಾಗಿದೆ. ಮೊದಲೇ ರಿಲಾಯನ್ಸ್ ಜಿಯೋದ ಪೈಪೋಟಿ ಎದುರಿಸುತ್ತಿದ್ದ ಏರ್‌ಟೆಲ್‌ಗೆ ಈಗ ಅದಾನಿಯದ್ದು ಇನ್ನೂ ದೊಡ್ಡ ಸವಾಲಾಗುವ ನಿರೀಕ್ಷೆ ಇದೆ. ಷೇರುಪೇಟೆಯಲ್ಲಿ ಭಾರ್ತಿ ಏರ್ಟೆಲ್ ಸಂಸ್ಥೆಯ ಷೇರು ಮೌಲ್ಯ ಶೇ. 5ರಷ್ಟು ಕುಸಿತ ಕಂಡಿದೆ. 30 ರೂಪಾಯಿಯಷ್ಟು ಕಡಿಮೆಯಾಗಿ ಪ್ರತಿ ಷೇರು ಮೌಲ್ಯ 661.5 ರೂಪಾಯಿಗೆ ಬಂದು ನಿಂತಿದೆ.

ಅದಾನಿ ಪ್ರವೇಶ ಯಾಕೆ?
ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಸಂಸ್ಥೆ ಏರ್ಟೆಲ್ ಅಥವಾ ರಿಲಾಯನ್ಸ್ ಜಿಯೋದಂತೆ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡುವ ಬಗ್ಗೆ ನಿರ್ಧಾರ ಮಾಡಿಲ್ಲ. ಆದರೆ, 5ಜಿ ಸ್ಪೆಕ್ಟ್ರಂ ಖರೀದಿ ಮೂಲಕ ಖಾಸಗಿ 5ಜಿ ನೆಟ್ವರ್ಕ್ ರೂಪಿಸುವುದು ಅದಾನಿ ಉದ್ದೇಶ ಎನ್ನಲಾಗಿದೆ.
ಅದಾನಿ ಗ್ರೂಪ್‌ನ ವ್ಯವಹಾರಗಳು ಈಗ ಬಹಳ ವಿಸ್ತಾರಗೊಂಡಿವೆ. ವಿದ್ಯುತ್ ಉತ್ಪಾದನೆ, ಏರ್‌ಪೋರ್ಟ್, ಡಾಟಾ ಸೆಂಟರ್ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅದಾನಿ ನೆಲೆ ನಿಂತಿದೆ. ಈ ಎಲ್ಲಾ ವ್ಯವಹಾರಗಳಿಗೆ 5ಜಿ ಬೆಂಬಲ ಪಡೆಯಲು ಅದಾನಿ ಗ್ರೂಪ್ ಪ್ರತ್ಯೇಕವಾಗಿ ಸ್ಪೆಕ್ಟ್ರಂ ಖರೀದಿಗೆ ಮುಂದಾಗಿದೆ.
ಒಂದು ವೇಳೆ, ಸ್ಪೆಕ್ಟ್ರಂ ಖರೀದಿಸದೇ ಇದ್ದರೆ ಬೇರೆ ಟೆಲಿಕಾಂ ಕಂಪನಿಯಿಂದ 5ಜಿ ಸೇವೆಯನ್ನು ಎರವಲು ಪಡೆದುಕೊಳ್ಳಬೇಕಾಗುತ್ತದೆ ಅಥವಾ ಅವಲಂಬಿತವಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮದೇ ಖಾಸಗಿ 5G ನೆಟ್ವರ್ಕ್ ರೂಪಪಿಸಲು ಅದಾನಿ ಪ್ರಯತ್ನ ಮಾಡುತ್ತಿರಬಹುದು.

ಅನಿಶ್ಚಿತತೆ ಸೃಷ್ಟಿಸಿದ ಅದಾನಿ
ಅದಾನಿ ಪ್ರವೇಶಕ್ಕೆ ಮುನ್ನ ಸ್ಪೆಕ್ಟ್ರಂ ಹರಾಜಿನಲ್ಲಿ ಭಾರ್ತಿ ಏರ್ಟೆಲ್ ಮತ್ತು ರಿಲಾಯನ್ಸ್ ಜಿಯೋ ಮಧ್ಯೆ ಬಹುತೇಕ ಹೆಚ್ಚು ಪೈಪೋಟಿ ನಿರೀಕ್ಷಿಸಲಾಗಿತ್ತು. ಈಗ ಅದಾನಿ ಗ್ರೂಪ್ ಅಖಾಡಕ್ಕೆ ಇಳಿದಿರುವುದರಿಂದ ಸ್ಪೆಕ್ಟ್ರಂ ಬಿಡ್ಡಿಂಗ್ ಮೌಲ್ಯ ಎಷ್ಟು ಹೆಚ್ಚಾಗಬಹುದು ಎಂಬ ಅನಿಶ್ಚಿತತೆ ಸೃಷ್ಟಿಯಾಗಿದೆ.
ಅಚ್ಚರಿ ಎಂದರೆ ಅದಾನಿ ಗ್ರೂಪ್ ಖಾಸಗಿ 5ಜಿ ಜಾಲ ರೂಪಿಸುವ ಉದ್ದೇಶ ಇದ್ದಿದ್ದರೆ ಸರಕಾರದಿಂದ ಕಡಿಮೆ ಬೆಲೆಗೆ ಮಾರಲಾಗುವ ಸ್ಪೆಕ್ಟ್ರಂ ಅನ್ನು ಖರೀದಿಸಬಹುದಿತ್ತು. ಅದು ಬಿಟ್ಟು ಸ್ಪೆಕ್ಟ್ರಂ ಹರಾಜಿನಲ್ಲಿ ಅದು ಪಾಲ್ಗೊಳ್ಳುವ ಅಗತ್ಯವಾದರೂ ಏನಿತ್ತು ಎಂಬುದು ಸಂದೇಹ.
ಒಂದು ವೇಳೆ ಅದಾನಿ ಗ್ರೂಪ್ 5ಜಿ ಸ್ಪೆಕ್ಟ್ರಂ ಅನ್ನು ಖರೀದಿಸಿದಲ್ಲಿ ಈ ಕ್ಷೇತ್ರದಲ್ಲಿ ಸ್ಪರ್ಧೆ ತುರುಸುಗೊಳ್ಳಲಿದೆ. ಜೊತೆಗೆ ಆ ಕಂಪನಿ ಮುಂದಿನ ದಿನಗಳಲ್ಲಿ ಯಾವಾಗ ಬೇಕಾದರೂ ಟೆಲಿಕಾಂ ಸೇವೆಯನ್ನು ಆರಂಭಿಸುವ ಸಾಧ್ಯತೆ ಇಲ್ಲದಿಲ್ಲ ಎಂದು ಕೆಲ ತಜ್ಞರು ಶಂಕಿಸುತ್ತಾರೆ.

ಅದಾನಿ ಯಾವುದನ್ನು ಖರೀದಿಸಬಹುದು?
ಜಾಗತಿಕವಾಗಿ 5ಜಿ ಸೇವೆಗಳು 700MHz, 3.5GHz ಮತ್ತು 26GHz ಬ್ಯಾಂಡ್‌ಗಳಲ್ಲಿ ಲಭ್ಯ ಇವೆ. ಭಾರತದಲ್ಲಿ ಅದಾನಿ ಒಂದು ವೇಳೆ ಮೊಬೈಲ್ ಸೇವೆಯ ಉದ್ದೇಶ ಇಲ್ಲದೇ ಇದ್ದರೆ 3.5GHz ಮತ್ತು 26GHz ಬ್ಯಾಂಡ್ ಸ್ಪೆಕ್ಟ್ರಂ ಖರೀದಿಗೆ ಯತ್ನಿಸಬಹುದು. ಒಂದು ವೇಳೆ 700MHz ಬ್ಯಾಂಡ್‌ನಲ್ಲಿ ಖರೀದಿಸಿದಲ್ಲಿ ಅದಾನಿಯ ಉದ್ದೇಶ ಸ್ಪಷ್ಟವಾಗಬಹುದು.
(ಒನ್ಇಂಡಿಯಾ ಸುದ್ದಿ)












Click it and Unblock the Notifications