Rich Person of India: ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಗೌತಮ್ ಅದಾನಿ
ಹುರುನ್ ಇಂಡಿಯಾ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಈ ಬಾರಿ ಗೌತಮ್ ಅದಾನಿ ಮತ್ತು ಅವರ ಕುಟುಂಬ, ಮುಖೆಶ್ ಅಂಬಾನಿಯನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದು, ಇದೀಗ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಗೌತಮ್ ಅದಾನಿ ಬಳಿ ಸದ್ಯ ₹ 11.6 ಲಕ್ಷ ಕೋಟಿ ಸಂಪತ್ತನ್ನು ಹೊಂದಿದ್ದಾರೆ.
2020 ರಲ್ಲಿ, ಗೌತಮ್ ಅದಾನಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು. ಕಳೆದ ಒಂದು ವರ್ಷದಲ್ಲಿ ಗೌತಮ್ ಅದಾನಿ ಅವರ ಸಂಪತ್ತು ಶೇಕಡಾ 95 ರಷ್ಟು ಏರಿಕೆಯಾಗಿದೆ. ಹಿಂಡೆನ್‌ಬರ್ಗ್ ವರದಿಯ ನಂತರ ಅವರ ಸಂಪತ್ತಿನ ಏರಿಕೆ ಮತ್ತಷ್ಟು ಸುಧಾರಣೆಯಾಗಿದೆ. ಇದರಿಂದಾಗಿ ಗೌತಮ್ ಅದಾನಿ ಸಮೂಹ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದೆ.

"ಹಿಂಡೆನ್‌ಬರ್ಗ್ ಆರೋಪಗಳ ಬಳಿಕ ಗೌತಮ್ ಅದಾನಿ ಮತ್ತು ಕುಟುಂಬ ಫೀನಿಕ್ಸ್‌ನಂತೆ ಎದ್ದುಬಂದಿದೆ. ಈ ವರ್ಷ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸಂಪತ್ತಿನಲ್ಲಿ 65% ಹೆಚ್ಚಳವಾಗಿದೆ. ಅವರ ಒಟ್ಟು ಸಂಪತ್ತು ₹1,161,800 ಕೋಟಿಗೆ ಏರಿಕೆಯಾಗಿದೆ. ಅದಾನಿ ಕಳೆದ ಐದು ವರ್ಷಗಳಲ್ಲಿ ಟಾಪ್ 10 ರೊಳಗೆ ಅತ್ಯಧಿಕ ಸಂಪತ್ತಿನ ಬೆಳವಣಿಗೆಯನ್ನು ದಾಖಲಿಸಿದೆ ಎಂದು ಹುರುನ್ ಹೇಳಿದೆ.
ಎಲ್ಲಾ ಅದಾನಿ ಗ್ರೂಪ್ ಕಂಪನಿಗಳು ಕಳೆದ ವರ್ಷದಲ್ಲಿ ಷೇರು ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡಿವೆ. ಅದಾನಿ ಪೋರ್ಟ್ಸ್ 98% ಹೆಚ್ಚಳವನ್ನು ಕಂಡರೆ, ಅದಾನಿ ಎನರ್ಜಿ, ಅದಾನಿ ಟ್ರಾನ್ಸ್‌ಮಿಷನ್, ಮತ್ತು ಅದಾನಿ ಪವರ್-ಷೇರು ಬೆಲೆಯಲ್ಲಿ ಸರಾಸರಿ 76% ಏರಿಕೆಯಾಗಿದೆ. ಎಂಎಸ್‌ಸಿಐ ಆಗಸ್ಟ್ 2024ರಲ್ಲಿ ಅದಾನಿ ಗ್ರೂಪ್ ಸೆಕ್ಯುರಿಟಿಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವ ನಿರ್ಧಾರವು ವರದಾನವಾಗಿದೆ. ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಅಂಬುಜಾ ಸಿಮೆಂಟ್ಸ್‌ನಂತಹ ಪ್ರಮುಖ ಷೇರುಗಳು ಕೂಡ ಗೌತಮ್ ಅದಾನಿ ಕುಟುಂಬದ ಸಂಪತ್ತು ಹೆಚ್ಚಿಸಲು ಗಮನಾರ್ಹ ಕೊಡುಗೆ ನೀಡಿದೆ ಎಂದು ಹುರುನ್ ಹೇಳಿದೆ.
ಅಂಬಾನಿ ಸಂಪತ್ತು ಎಷ್ಟಿದೆ?
₹ 10.14 ಲಕ್ಷ ಕೋಟಿ ಸಂಪತ್ತನ್ನು ಹೊಂದಿರುವ ಮುಖೇಶ್ ಅಂಬಾನಿ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜುಲೈ 31, 2024 ರ ವೇಳೆಗೆ ಇದ್ದ ಸಂಪತ್ತನ್ನು ಮಾತ್ರ ಹುರುನ್ ಗಣನೆಗೆ ತೆಗೆದುಕೊಂಡಿದೆ. ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ ದಾಖಲೆಯ 334 ತಲುಪಿದೆ ಎಂದು ವರದಿಯಾಗಿದೆ.
ಹುರುನ್ ಇಂಡಿಯಾದ ಸಂಸ್ಥಾಪಕ ಮತ್ತು ಮುಖ್ಯ ಸಂಶೋಧಕ ಅನಸ್ ರಹಮಾನ್ ಜುನೈದ್, ಭಾರತವು ಏಷ್ಯಾದ ಸಂಪತ್ತು ಸೃಷ್ಟಿಸುವ ಎಂಜಿನ್ ಆಗಿ ಹೊರಹೊಮ್ಮುತ್ತಿದೆ ಎಂದು ಹೇಳಿದ್ದಾರೆ. ಚೀನಾದ ಬಿಲಿಯನೇರ್‌ಗಳ ಸಂಖ್ಯೆಯಲ್ಲಿ 25% ಕುಸಿತವಾಗಿದ್ದರೆ, ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 29% ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಹೆಚ್‌ಸಿಎಲ್ ಟೆಕ್ಟಾಲಜೀಸ್‌ನ ಶಿವ ನಾಡರ್ ಮತ್ತು ಕುಟುಂಬ ₹ 3.14 ಲಕ್ಷ ಕೋಟಿ ಸಂಪತ್ತು ಹೊಂದುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸೈರಸ್ ಎಸ್ ಪೂನಾವಾಲಾ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಕುಟುಂಬ 2.89 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್‌ನ ದಿಲೀಪ್ ಶಾಂಘ್ವಿ ₹2.49 ಲಕ್ಷ ಕೋಟಿ ಸಂಪತ್ತು ಹೊಂದಿವ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.
ಕಳೆದ ವರ್ಷ ಭಾರತ ಪ್ರತಿ ಐದು ದಿನಗಳಿಗೊಮ್ಮೆ ಒಬ್ಬ ಬಿಲಿಯನೇರ್ ಅನ್ನು ಸೃಷ್ಟಿಸಿದೆ ಎಂದು ವರದಿ ಹೇಳಿದೆ. 2023 ರಲ್ಲಿ, ಭಾರತವು 259 ಬಿಲಿಯನೇರ್‌ಗಳನ್ನು ಹೊಂದಿತ್ತು. ಈ ಬಾರಿ ಅದು 334ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ 1,500 ಕ್ಕೂ ಹೆಚ್ಚು ವ್ಯಕ್ತಿಗಳು ₹ 1,000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಏಳು ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು 150% ಏರಿಕೆಯಾಗಿದೆ.












Click it and Unblock the Notifications