ಕೆನರಾ ಬ್ಯಾಂಕ್ ಮೊದಲ ತ್ರೈಮಾಸಿಕದಲ್ಲಿ ನಷ್ಟವೋ ನಷ್ಟ
ಬೆಂಗಳೂರು, ಆಗಸ್ಟ್ 05: ಕರ್ನಾಟಕದ ಮೂಲದ ಕೆನರಾ ಬ್ಯಾಂಕ್ ಬುಧವಾರ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಜೂನ್ 30ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಶೇ 40.65ರಷ್ಟು ನಿವ್ವಳ ಲಾಭದಲ್ಲಿ ಕುಸಿತ ಕಂಡಿದೆ.
ಕೆನರಾ ಬ್ಯಾಂಕಿನ ಮೊದಲ ತ್ರೈಮಾಸಿಕದಲ್ಲಿ 478.84ಕೋಟಿ ರು ನಂತೆ ನಿವ್ವಳ ಲಾಭ ಬಂದಿದ್ದು, ಸಾಲ ನೀಡಿಕೆಯಲ್ಲಿನ ವ್ಯತ್ಯಯದಿಂದಾಗಿ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.[Q4: ಕೆನರಾ ಬ್ಯಾಂಕ್ ಆದಾಯ ಇಳಿಕೆ, ಲಾಭವೂ ಅಷ್ಟಕಷ್ಟೇ!]
ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ 806.86 ಕೋಟಿ ರು ಗಳಿಸಿತ್ತು. ಮೊದಲ ತ್ರೈಮಾಸಿಕದ ಆದಾಯ ಶೇ 4.5ರಷ್ಟು ಏರಿಕೆಯಾಗಿದೆ. 12,252.64 ಕೋಟಿ ರು ನಷ್ಟು ಬಂದಿದೆ. ಕಳೆದ ವರ್ಷ ಇದೇ ಅವಧಿಗೆ 11,728.01 ಕೋಟಿ ರು ಗಳಿಸಿತ್ತು ಎಂದು ಬಿಎಸ್ ಇಗೆ ಮಾಹಿತಿ ನೀಡಲಾಗಿದೆ.

ಮೇ ತಿಂಗಳಿನಲ್ಲಿ ಕೆನರಾಬ್ಯಾಂಕ್ 4ಕೋಟಿ ರು ಈಕ್ವಿಟಿ ಷೇರುಗಳನ್ನು 370.08 ಪ್ರಿಮಿಯಂನಂತೆ ಎಲ್ ಐಸಿಗೆ ಹಂಚಿಕೆ ಮಾಡಿತ್ತು. ಬಿಎಸ್ ಇಯಲ್ಲಿ ಕೆನರಾಬ್ಯಾಂಕ್ ಷೇರುಗಳು ಬುಧವಾರ 310.40 ರು ನಂತೆ ವಹಿವಾಟು ಆರಂಭಿಸಿ ದಿನದ ಅಂತ್ಯಕ್ಕೆ 303.55 ರು ಗೆ ಕುಸಿದಿದೆ ಶೇ 1.89ರಷ್ಟು ಇಳಿಕೆಯಾಗಿದೆ. ಎನ್ ಎಸ್ ಇಯಲ್ಲಿ 311.40ರುನಂತೆ ವಹಿವಾಟು ಆರಂಭಿಸಿ ಶೇ 1.78 ರು ಕಳೆದುಕೊಂಡು 303.60 ರು ಇಳಿಕೆಯಾಗಿತ್ತು.
ಪ್ರಸಕ್ತ ಆರ್ಥಿಕ ವರ್ಷದ ಆರಂಭದಲ್ಲೇ ಪ್ರಧಾನ ಮಂತ್ರಿಗಳ ಜನ-ಧನ ಯೋಜನೆಯಲ್ಲಿ 64.76 ಲಕ್ಷ ಖಾತೆಗಳನ್ನು ತೆರೆಯಲಾಗಿದೆ. ಈ ಯೋಜನೆ ಸಮರ್ಥವಾಗಿ ಜಾರಿಗೊಳಿಸಿದ್ದಕ್ಕೆ 2015ನೇ ಸಾಲಿನ ಅತ್ಯುತ್ತಮ ಸಾಧನೆ ಪ್ರಶಸ್ತಿ "ಗೋಲ್ಡನ್ ಪಿಕಾಕ್ ಬಿಸ್ನೆಸ್ ಎಕ್ಸಲೆನ್ಸಿ " ಕೆನರಾ ಬ್ಯಾಂಕ್ ಪಾಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಕಳೆದ ವಿತ್ತ ವರ್ಷದಲ್ಲಿ ವಿತ್ತ ವರ್ಷದಲ್ಲಿ ಒಂದು ಕೋಟಿಗೂ ಅಧಿಕ ಗ್ರಾಹಕರು ಸೇರ್ಪಡೆಯಾಗಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications