Water Crisis: 200ಕ್ಕೂ ಹೆಚ್ಚು ಆರ್‌ಓ ಘಟಕ ಸ್ಥಗಿತ, ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಪರದಾಟ
ಬೆಂಗಳೂರು, ಮಾರ್ಚ್ 31: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕುಡಿಯುವ ನೀರಿಗಾಗಿ ಜನ ಕ್ಯಾನ್ ಹಿಡಿದು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಾರಿಯ ಮಳೆಯ ಕೊರತೆಯಿಂದ ಬೋರ್‌ವೆಲ್‌ಗಳ ನೀರು ಬತ್ತಿ ಹೋಗಿದೆ. ಹೀಗಾಗಿ ಬೆಂಗಳೂರು ನಗರದಲ್ಲಿನ ಅನೇಕ ರಿವರ್ಸ್ ಆಸ್ಮೋಸಿಸ್ (ಆರ್‌ಒ) ಶುದ್ಧ ಕುಡಿಯುವ ನೀರಿನ ಘಟಕಗಳು ಮುಚ್ಚಿದ್ದು, ಕೆಲವು ಮುಚ್ಚುವ ಹಂತದಲ್ಲಿದೆ. ಇನ್ನೂ ಕೆಲವು ಆರ್‌ಒ ಘಟಕಗಳಲ್ಲಿ ಹೆಚ್ಚುತ್ತಿರುವ ವಿದ್ಯುತ್ ಮತ್ತು ನೀರಿನ ವೆಚ್ಚವನ್ನು ನಿರ್ವಹಿಸಲು 20 ಲೀಟರ್ ಕುಡಿಯುವ ನೀರಿನ ಬೆಲೆಯನ್ನು ದುಪ್ಪಟ್ಟು ಮಾಡಲಾಗಿದೆ.

ಬೆಂಗಳೂರು ನಗರದಾದ್ಯಂತ 1,052 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಈ ಪೈಕಿ 209 ಘಟಕಗಳು ಈಗಾಗಲೇ ಸ್ಥಗಿತಗೊಂಡಿವೆ. ಉಳಿದ ಘಟಕಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಅನೇಕ ಘಟಕಗಳು ಮುಚ್ಚುವ ಹಂತದಲ್ಲಿದೆ. ಇನ್ನು ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಐದು ರೂಪಾಯಿ ಬದಲಿಗೆ ಹತ್ತು ರೂಪಾಯಿ ದರ ನಿಗದಿ ಮಾಡಲಾಗಿದ್ದು, 20 ಲೀಟರ್ ಕ್ಯಾನ್‌ನಲ್ಲಿ 19 ಲೀಟರ್ ನೀರು ಮಾತ್ರ ತುಂಬಿಸಲಾಗುತ್ತಿದೆ. ಇನ್ನು ಕೆಲವು ಕಡೆಗಳಲ್ಲಿ ಒಬ್ಬರಿಗೆ ಒಂದೇ ಕ್ಯಾನ್ ನೀರು ಕೊಡಲಾಗುತ್ತಿದೆ.
ಬಿಬಿಎಂಪಿ ಕೇಂದ್ರ ಭಾಗದ ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿಯೇ ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಭಾಗದಲ್ಲಿಯೇ ನೂರಕ್ಕೂ ಹೆಚ್ಚು ಘಟಕಗಳು ಸ್ಥಗಿತವಾಗಿವೆ. ಬಿಬಿಎಂಪಿ ಪೂರ್ವ ಭಾಗದಲ್ಲಿ-54, ಪಶ್ವಿಮ ಭಾಗದಲ್ಲಿ-44, ದಕ್ಷಿಣ ಭಾಗದಲ್ಲಿ-58, ಬೊಮ್ಮನಹಳ್ಳಿ ಭಾಗದಲ್ಲಿ-9, ಆರ್.ಆರ್.ನಗರ ಭಾಗದಲ್ಲಿ-31, ಮಹದೇವಪುರ ಭಾಗದಲ್ಲಿ-2, ಯಲಹಂಕ ಭಾಗದಲ್ಲಿ-5, ದಾಸರಹಳ್ಳಿ ಭಾಗದಲ್ಲಿ-6 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬಂದ್ ಮಾಡಲಾಗಿದೆ.
ಸಣ್ಣ ಹೋಟೆಲ್‌ಗಳು, ಚಾಟ್ಸ್ ಸೆಂಟರ್‌ಗಳು, ಬೀದಿಬದಿ ವ್ಯಾಪರಿಗಳು ಸೇರಿದಂತೆ, ಮನೆಯಲ್ಲಿ ನೀರು ಶುದ್ಧೀಕರಣ ಯಂತ್ರ(Water Purifier)ಗಳನ್ನು ಹೊಂದಲು ಸಾಧ್ಯವಾಗದ ಅನೇಕರಿಗೆ ಕೇವಲ 5 ರೂಪಾಯಿಗೆ 20 ಲೀಟರ್ ಕುಡಿಯುವ ನೀರು ಜೀವನಾಡಿಯಾಗಿತ್ತು. ಆದರೆ ಈ ಆರ್‌ಒ ಘಟಕಗಳು ಮುಚ್ಚುತ್ತಿರುವುದು ಬೆಂಗಳೂರಿನ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ.












Click it and Unblock the Notifications