ಬೆಂಗಳೂರಿನಲ್ಲಿ 1.4 ಕೋಟಿ ಕೊಟ್ಟು 33 ವರ್ಷದ ಹಳೇ ಅಪಾರ್ಟ್ಮೆಂಟ್ ಖರೀದಿಸುವುದು ಸೇಫಾ? ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸ್ವಂತದ್ದೊಂದು ಮನೆ ಅಥವಾ ಅಪಾರ್ಟ್ಮೆಂಟ್ ಖರೀದಿಸಬೇಕು ಎಂಬುದು ಪ್ರತಿಯೊಬ್ಬರ ಬಹುದೊಡ್ಡ ಕನಸು. ಆದರೆ, ದಿನದಿಂದ ದಿನಕ್ಕೆ ಪ್ರಾಪರ್ಟಿಗಳ ಬೆಲೆ ಗಗನಕ್ಕೇರುತ್ತಲೇ ಹೋಗುತ್ತಿದೆ. ಅನೇಕರು ಅನಿವಾರ್ಯವಾಗಿ ಹಳೆಯ ಪ್ರಾಪರ್ಟಿಗಳತ್ತ ಮುಖ ಮಾಡುತ್ತಿದ್ದಾರೆ. ಹಳೆಯ ಫ್ಲ್ಯಾಟ್ ಅಥವಾ ಮನೆಗಳನ್ನು ಖರೀದಿಸುವುದು ಲಾಭದಾಯಕವೇ ಅಥವಾ ಅಪಾಯಕಾರಿಯೇ ಎಂಬ ಬಗ್ಗೆ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಬೆಂಗಳೂರಿನ ಮನೆ ಖರೀದಿದಾರರೊಬ್ಬರು ಹಳೆಯ ಅಪಾರ್ಟ್ಮೆಂಟ್ ಖರೀದಿಯ ಬಗ್ಗೆ ಸಾಮಾಜಿಕ ಜಾಲತಾಣ 'ರೆಡ್ಡಿಟ್'ನಲ್ಲಿ ಕೇಳಿರುವ ಪ್ರಶ್ನೆಯೊಂದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಬಳಕೆದಾರರು ಕೇಳಿದ್ದೇನು?
"ಬೆಂಗಳೂರಿನಲ್ಲಿ 33 ವರ್ಷ ಹಳೆಯದಾದ ಅಪಾರ್ಟ್ಮೆಂಟ್ ಖರೀದಿಸುವುದು ಉತ್ತಮ ಹೂಡಿಕೆಯೇ?" ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ತಾವು ಹಳೆಯ ಮದ್ರಾಸ್ ರಸ್ತೆಯ ಟಿನ್ ಫ್ಯಾಕ್ಟರಿ ಬಳಿ ಇರುವ, ಮುಖ್ಯ ರಸ್ತೆಗೆ ಮುಖಮಾಡಿರುವ 33 ವರ್ಷದ ಹಳೆಯ ಅಪಾರ್ಟ್ಮೆಂಟ್ ಖರೀದಿಸಲು ಯೋಚಿಸುತ್ತಿರುವುದಾಗಿ ಅವರು ಬರೆದುಕೊಂಡಿದ್ದಾರೆ.

ಈ ಪ್ರಾಪರ್ಟಿಯ ಒಟ್ಟು ವಿಸ್ತೀರ್ಣ 1,400 ಚದರ ಅಡಿಗಳಾಗಿದ್ದು, ಇದರ ಬೆಲೆಯನ್ನು 1.4 ಕೋಟಿ ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಇದಲ್ಲದೆ, ಈ ಫ್ಲ್ಯಾಟ್ ಅನ್ನು ನವೀಕರಿಸಲು ಹೆಚ್ಚುವರಿಯಾಗಿ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಖರೀದಿದಾರರ ಲೆಕ್ಕಾಚಾರವೇನು?
"ಈ ಅಪಾರ್ಟ್ಮೆಂಟ್ ಮುಖ್ಯ ರಸ್ತೆಯಲ್ಲೇ ಇರುವುದರಿಂದ, ಭವಿಷ್ಯದಲ್ಲಿ ಕಟ್ಟಡ ಮತ್ತೆ ಅಭಿವೃದ್ಧಿ ಹಂತಕ್ಕೆ ಹೋದಾಗ, ಇದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇದರಿಂದ ಉತ್ತಮ ಲಾಭ ಸಿಗಬಹುದು ಎಂಬುದು ನನ್ನ ಲೆಕ್ಕಾಚಾರ" ಎಂದು ಅವರು ಹೇಳಿಕೊಂಡಿದ್ದಾರೆ. ಇದರ ಜೊತೆಗೆ, ಈ ಹಳೆಯ ಕಟ್ಟಡದ ಉಳಿದ ಜೀವಿತಾವಧಿ ಎಷ್ಟು? ಭವಿಷ್ಯದಲ್ಲಿ ಅಭಿವೃದ್ಧಿ ಪ್ರಕ್ರಿಯೆಗೆ ಹೋದರೆ ಎದುರಾಗಬಹುದಾದ ಅಪಾಯಗಳೇನು? ಎಂಬ ಬಗ್ಗೆ ನೆಟ್ಟಿಗರ ಸಲಹೆ ಕೇಳಿದ್ದಾರೆ.
ಸಾಮಾಜಿಕ ಜಾಲತಾಣಗಳ ಪ್ರತಿಕ್ರಿಯೆ ಹೇಗಿತ್ತು?
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅನೇಕರು ತಮ್ಮ ರಿಯಲ್ ಎಸ್ಟೇಟ್ ಬಗ್ಗೆ ತಿಳಿದಿರುವ ಆಧಾರದ ಮೇಲೆ ಕಮೆಂಟ್ ಮಾಡಿದ್ದಾರೆ. ಬಹುತೇಕರು ಈ ಹೂಡಿಕೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, "ಕೋರಮಂಗಲ ಅಥವಾ ಜಯನಗರದಂತಹ ಅತ್ಯಂತ ಪ್ರಮುಖ ಪ್ರದೇಶಗಳಲ್ಲಿದ್ದರೆ ಮಾತ್ರ ಇಂತಹ ಹಳೆಯ ಕಟ್ಟಡಗಳ ಖರೀದಿಗೆ ಇಷ್ಟು ಹಣ ಕೊಡುವುದು ಸರಿ, ಇಲ್ಲದಿದ್ದರೆ ಇದು ಖಂಡಿತಾ ಯೋಗ್ಯವಲ್ಲ" ಎಂದು ಹೇಳಿದ್ದಾರೆ.
ಮತ್ತೊಬ್ಬ ಬಳಕೆದಾರರು "ಹೆಚ್ಚಿನ ಸಂದರ್ಭಗಳಲ್ಲಿ, ಕಟ್ಟಡದ ಮರು-ಅಭಿವೃದ್ಧಿ ಪ್ರಕ್ರಿಯೆಯು ವರ್ಷಗಳ ಕಾಲ ಕಾನೂನು ಮತ್ತು ಅಧಿಕೃತ ತೊಡಕುಗಳಲ್ಲಿ ಸಿಲುಕಿಕೊಳ್ಳುತ್ತದೆ. ಒಂದು ವೇಳೆ ಕಟ್ಟಡವು ವಾಸಕ್ಕೆ ಯೋಗ್ಯವಾಗಿಲ್ಲ ಎಂದು ಸರ್ಕಾರ ಘೋಷಿಸಿದರೆ, ಅಲ್ಲಿಯವರೆಗೆ ನಿಮಗೆ ಬರುತ್ತಿದ್ದ ಬಾಡಿಗೆ ಆದಾಯವೂ ಸಂಪೂರ್ಣವಾಗಿ ನಿಂತುಹೋಗುತ್ತದೆ" ಎಂದು ಎಚ್ಚರಿಸಿದ್ದಾರೆ.
"ಕೆಲವೊಮ್ಮೆ ಬಿಲ್ಡರ್‌ಗಳು ನಿಮ್ಮನ್ನು ಕಡಿಮೆ ಬೆಲೆಗೆ ಪ್ರಾಪರ್ಟಿ ಮಾರಾಟ ಮಾಡುವಂತೆ ಒತ್ತಾಯಿಸಬಹುದು. ಅಥವಾ ಒಂದು ಫ್ಲ್ಯಾಟ್ ಬೆಲೆಗೆ ಬದಲಾಗಿ 1-2 ಸಣ್ಣ ಯುನಿಟ್‌ಗಳನ್ನು ನೀಡುವ ಭರವಸೆ ನೀಡಬಹುದು. ಆದರೆ, ಅದು ಕೂಡ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡರಷ್ಟೇ ನಿಮ್ಮ ಕೈಸೇರುತ್ತದೆ. ಬಿಲ್ಡರ್ ಎಷ್ಟೇ ದೊಡ್ಡವರಾದರೂ, ನಿರ್ಮಾಣದ ಸಮಯದಲ್ಲಿ ನೀಡಲಾಗುವ ಬಾಡಿಗೆ ಪರಿಹಾರವು ಕೆಲವು ತಿಂಗಳುಗಳ ನಂತರ ಬರುವುದೇ ಇಲ್ಲ. ನಿಮ್ಮ ಬಳಿ ಸಾಕಷ್ಟು ಸಮಯ ಮತ್ತು ಹಣವಿದ್ದರೆ ಮಾತ್ರ, ನೀವು ಇದನ್ನು 10-20 ವರ್ಷಗಳ ನಂತರ ಆದಾಯ ತರಬಲ್ಲ 'ಸ್ಥಿರ ಹೂಡಿಕೆ' ಎಂದು ಪರಿಗಣಿಸಬಹುದು" ಎಂದು ವಾಸ್ತವದ ಚಿತ್ರಣವನ್ನು ವಿವರಿಸಿದ್ದಾರೆ.












Click it and Unblock the Notifications