ವಿಡಿಯೋ ಕಾಲ್ ಸೆಕ್ಸ್ ಜಾಲಕ್ಕೆ ಸಿಕ್ಕಿ 31 ಸಾವಿರ ರೂ. ಕಳೆದುಕೊಂಡ ಚಿ. ನಾ. ರಾಮು!
ಬೆಂಗಳೂರು, ಆ. 22: ಬಿಜೆಪಿ ಮುಖಂಡ ಹಾಗೂ ದಲಿತ ಪರ ಸಂಘಟನೆಯ ನಾಯಕ ಚಿ.ನಾ ರಾಮು ನ್ಯೂಡ್ ವಿಡಿಯೋ ಕಾಲ್ ಸೆಕ್ಸ್ ಜಾಲಕ್ಕೆ ಸಿಕ್ಕಿ ಬಿದ್ದು 31 ಸಾವಿರ ರೂ. ಕಳೆದುಕೊಂಡಿದ್ದಾರೆ. ಅಪರಿಚಿತ ಮಹಿಳೆ ಬೀಳಿಸಿದ ವಿಡಿಯೋ ಕಾಲ್ ಖೆಡ್ಡಾಗೆ ಬಿದ್ದಿರುವ ಚಿ. ನಾ. ರಾಮು ಬ್ಲಾಕ್ ಮೇಲ್ ಗೆ ಒಳಗಾಗಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಚಿ.ನಾ. ರಾಮು ದಲಿತ ಪರ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರೆ. ಬಿಜೆಪಿ ಪಕ್ಷದ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಆ. 13 ರಿಂದ ಆ. 15 ರ ನಡುವೆ ಅಪರಿಚಿತ ಮಹಿಳೆಯೊಬ್ಬಳು ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಪರಿಚಯವಾಗಿದ್ದಾಳೆ. ಆನಂತರ ವಾಟ್ಸಪ್ ನಂಬರ್ ಪಡೆದು ವಿಡಿಯೋ ಕಾಲ್ ಮಾಡಿದ್ದಾಳೆ. ಬೆತ್ತಲೆ ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಆ ನಂತರ ವ್ಯಕ್ತಿಯೊಬ್ಬ ಬೇರೆ ಮೊಬೈಲ್‌ನಿಂದ ಕರೆ ಮಾಡಿ, ನಿನ್ನದು ಬೆತ್ತಲೆ ವಿಡಿಯೋ ಇದೆ. ನೀನು ಈಗ ಕೇಳಿದಷ್ಟು ದುಡ್ಡು ಕೊಟ್ಟಿಲ್ಲ ಅಂದರೆ ನಿನ್ನ ವಿಡಿಯೋ ಫೇಸ್‌ಬುಕ್, ಯು ಟ್ಯೂಬ್ ಸಾಮಾಜಿಕ ಜಾಲ ತಾಣದಲ್ಲಿ ಬಿಡುಗಡೆ ಮಾಡುವುದಾಗಿ ಹೆದರಿಸಿದ್ದಾರೆ. ಇದಕ್ಕೆ ಹೆದರಿದ ಚಿ. ನಾ. ರಾಮು ಅವರು ಮೊದಲು ಹತ್ತು ಸಾವಿರ ಕೊಟ್ಟಿದ್ದಾರೆ. ನಂತರ ಎಚ್.ಡಿ. ಎಫ್. ಸಿ. ಬ್ಯಾಂಕ್‌ನಿಂದ 20 ಸಾವಿರ ಕೊಟ್ಟಿದ್ದಾರೆ. ಹೀಗೆ ಹಂತ ಹಂತವಾಗಿ 31,500 ರೂ. ಕೊಟ್ಟಿದ್ದಾನೆ. ಇದಾಗಿ ಮತ್ತೆ ಅವರು ಹೆಚ್ಚು ಹಣ ಕೊಟ್ಟಿಲ್ಲ ಅಂದ್ರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಹೆದರಿಸಿದ್ದಾರೆ.
ಇದರಿಂದ ರೋಸಿಯೋದ ಚಿ. ನಾ. ರಾಮು ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ ಆಪ್ತರಾದ ಶಿವಕುಮಾರ್ ಎಂಬುವರ ಮೂಲಕ ದೂರು ನೀಡಿದ್ದು, ಬ್ಲಾಕ್‌ಮೇಲ್ ಮಾಡಿದ ಆರೋಪಿಗಳ ಮೊಬೈಲ್ ನಂಬರ್‌ಗಳನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ. ಕೇಂದ್ರ ವಿಭಾಗದ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ಚಿ. ನಾ. ರಾಮು ದೂರು ನೀಡಿ ಒಂದು ವಾರ ಕಳೆದಿದೆ. ಎಫ್ಐಆರ್‌ನಲ್ಲಿ ಉಲ್ಲೇಖಿಸಿರುವ ಎರಡೂ ನಂಬರ್ ಸಕ್ರಿಯವಾಗಿವೆ.

ಹೊಸ ರೀತಿಯ ಜಾಲ
ಲಾಡ್ಜ್ ಗಳಿಗೆ ಸೀಮಿತವಾಗಿದ್ದ ಸೆಕ್ಸ್ ರಾಕೆಟ್ ದಂಧೆ ಇದೀಗ ಹೊಸ ಸ್ವರೂಪ ಪಡೆದುಕೊಂಡಿದೆ. ತಂತ್ರಜ್ಞಾನ ಬೆಳೆದಂತೆ ಸೆಕ್ಸ್ ರಾಕೆಟ್ ಆನ್ ಲೈನ್ ಅವತರಣಿಕೆ ಪಡೆದುಕೊಂಡಿದೆ. ಲೊಕ್ಯಾಂಟೋ ಸೇರಿದಂತೆ ಅನೇಕ ಸಾಮಾಜಿಕ ಜಾಲ ತಾಣಗಳೇ ವೇದಿಕೆ ಕಲ್ಪಿಸಿಕೊಟ್ಟಿವೆ. ಆನ್‌ಲೈನ್‌ನಲ್ಲೆ ಸೆಕ್ಸ್ ಹುಟ್ಟಿಕೊಂಡಿರುವ ಸೆಕ್ಸ್ ರಾಕೆಟ್ ದಂಧೆಯನ್ನೇ ಬಳಸಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯವಾಗಿರುವ ಪ್ರತಿಷ್ಠಿತ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಬ್ಲಾಕ್ ಮೇಲ್ ಮಾಡುವ ಹೊಸ ಜಾಲವೂ ಸೃಷ್ಟಿಯಾಗಿದೆ. ಈ ಜಾಲಕ್ಕೆ ಬಿದ್ದು ಅನೇಕರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ದೂರು ಕೊಟ್ಟರೆ ಮರ್ಯಾದೆ ಹೋಗುತ್ತದೆ ಎಂದು ಹೆದರಿ ಅನೇಕರು ದೂರು ಕೊಟ್ಟಿಲ್ಲ.

ಏನಿದು ನ್ಯೂಡ್ ಕಾಲ್ ಜಾಲ
ಅಂತರ್ಜಾಲದಲ್ಲಿ ಗಂಟೆಗೆ ಇಂತಿಷ್ಟು ಹಣ ಪಾವತಿ ಮಾಡಿದರೆ ವಿಡಿಯೋ ಕಾಲ್ ಮಾಡಿ ಯುವತಿಯರು ಬೆತ್ತಲೆಯಾಗುವ ಸೇವೆಯಿದೆ. ಇದನ್ನೇ ನ್ಯೂಡ್ ವಿಡಿಯೋ ಕಾಲ್ ಸೇವೆ ಎಂದು ಕರೆಯುತ್ತಾರೆ. ಲಾಕ್ ಡೌನ್ ಸಮಯದಲ್ಲಿ ಹೆಚ್ಚು ಚಾಲ್ತಿಗೆ ಬಂದಿರುವ ಜಾಲವಿದು! ಯಾರಾದರೂ ಈ ವಿಡಿಯೋ ಕಾಲ್ ಸಹವಾಸಕ್ಕೆ ಹೋದ್ರೆ ಬೆತ್ತಲೆ ಸೇವೆ ಒದಗಿಸಿ ನೋಡುವರ ಬಟ್ಟೆಯನ್ನು ಬಿಚ್ಚಿಸುತ್ತಾರೆ. ಇದನ್ನು ನಂಬಿ ಬಟ್ಟೆ ಬಿಚ್ಚಿದ್ದಲ್ಲಿ ಆತ್ತ ವಿಡಿಯೋ ಕಾಲ್ ಮಾನನಿಯರು ವಿಡಿಯೋ ಕಾಲ್ ಮಾಡಿಕೊಳ್ಳುತ್ತಾರೆ.

ಕನಿಷ್ಠ 5 ರಿಂದ 10 ಸಾವಿರ ರೂ. ಕೇಳುತ್ತಾರೆ
ಇದಾಗಿ ಎರಡು- ಮೂರು ದಿನದ ಬಳಿಕ ಜಾಲದ ಸದಸ್ಯರು ಸಂಪರ್ಕಿಸಿ, ನಿಮ್ಮದು ಬೆತ್ತಲೆ ವಿಡಿಯೋ ಇದೆ. ಇಷ್ಟು ಹಣ ಕೊಡಲಿಲ್ಲ ಎಂದರೆ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹಾಕುವುದಾಗಿ ಹೆದರಿಸುತ್ತಾರೆ. ಆರಂಭದಲ್ಲಿ ಕನಿಷ್ಠ 5 ರಿಂದ 10 ಸಾವಿರ ರೂ. ಕೇಳುತ್ತಾರೆ. ಕೊಟ್ಟ ನಂತರ ಮತ್ತೆ ಕರೆ ಮಾಡಿ ದುಪ್ಪಟ್ಟು ಕೇಳುತ್ತಾರೆ. ಅದನ್ನೂ ಕೊಟ್ಟ ನಂತರ ಪದೇ ಪದೇ ಕೇಳುತ್ತಲೇ ಇರುತ್ತಾರೆ. ಭಯವನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುತ್ತಲೇ ಇರುತ್ತಾರೆ. ಮರ್ಯಾದೆಗೆ ಅಂಜಿ ಬಹುತೇಕರು ಹಣ ಕೊಟ್ಟು ಸುಮ್ಮನಾಗುತ್ತಾರೆ. ಆದರೆ ಒಮ್ಮೆ ವಿಡಿಯೋ ಕಾಲ್ ಜಾಲಕ್ಕೆ ಬಿದ್ದ ನಂತರ ಅವರು ಮಾತ್ರ ಸುಮ್ಮನಾಗಲ್ಲ.
Recommended Video

ಪೊಲೀಸರು ಪತ್ತೆ ಮಾಡುವುದು ಕಷ್ಟ
ಇತ್ತೀಚೆಗೆ ಈ ರೀತಿಯ ಸೆಕ್ಸ್ ರಾಕೆಟ್ ಜಾಲ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಇತ್ತೀಚೆಗೆ ವೈಟ್ ಫೀಲ್ಡ್ ಪೊಲೀಸರು ಇಂತಹ ಜಾಲವನ್ನು ಪತ್ತೆ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ವಿಭಾಗದ ಪೊಲೀಸರು ಪತ್ತೆ ಮಾಡಿದ ಉದಾಃರಣೆಗಳು ಇಲ್ಲ. ಯಾಕೆಂದರೆ ಈ ಜಾಲ ಸಕ್ರಿಯವಾಗಿರುವುದು ಜಾರ್ಖಂಡ್ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಂದ ನಿರ್ವಹಣೆ ಮಾಡುತ್ತಾರೆ. ಒಬ್ಬ ಅರೋಪಿಯನ್ನು ಹಿಡಿದು ಕರೆ ತರಬೇಕಾದರೆ ಪೊಲೀಸರು ಲಕ್ಷಾಂತರ ರೂಪಾಯಿಯನ್ನು ತನಿಖೆಗಾಗಿ ವ್ಯಯಿಸಬೇಕು. ವೆಚ್ಚ ಮಾಡಿದರೂ ಸೈಬರ್ ವಂಚಕರನ್ನು ಪತ್ತೆ ಆಗುವುದು ಕಷ್ಟ ಸಾಧ್ಯ. ಹೀಗಾಗಿ ಸಹಜವಾಗಿ ಈ ನ್ಯೂಡ್ ವಿಡಿಯೋ ಕಾಲ್ ಜಾಲವನ್ನು ನಿಯಂತ್ರಣ ಮಾಡಲಾಗಿಲ್ಲ. ವಂಚಕರನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟ. ಹೀಗಾಗಿ ಈ ಜಾಲಕ್ಕೆ ಬಲಿಯಾಗದೇ ಎಚ್ಚರಿಕೆಯಿಂದ ಇರುವುದೇ ಪರಿಹಾರ ಮಾರ್ಗ.












Click it and Unblock the Notifications