ವಾಹನ ಮಾಲೀಕರಿಗೆ ಶಾಕ್! ಇನ್ಮುಂದೆ ನಿಮ್ಮ ಗಾಡಿ ಹುಷಾರು ಕಣ್ರೀ..
ಬೆಂಗಳೂರಿನಲ್ಲಿ ಜನರ ದೊಡ್ಡ ಸಮಸ್ಯೆ ಎಂದರೆ ಅದು ಪಾರ್ಕಿಂಗ್. ನೆಮ್ಮದಿಯಾಗಿ ಗಾಡಿಯಲ್ಲಿ ಹೊರಗೆ ಬರೋಣ ಅಂದ್ರೆ ಮೊದಲಿಗೆ ಅಲ್ಲಿ ಪಾರ್ಕಿಂಗ್ ಇರುತ್ತೋ ಇಲ್ವೋ? ಅನ್ನೋ ಗೊಂದಲದಲ್ಲೇ ಶಾಪಿಂಗ್ ಅದೂ ಇದೂ ಅಂತ ಬರೋ ಸ್ಥಿತಿ ಇದೆ. ಯಾಕಂದ್ರೆ ನಗರದ ಬಹುತೇಕ ಸ್ಥಳಗಳಲ್ಲಿ ನೋ ಪಾರ್ಕಿಂಗ್ ಬೋರ್ಡ್ ಇದ್ದೇ ಇರುತ್ತೆ.
ಶಾಪಿಂಗ್ ಮುಗಿಸಿ ಬರುವಷ್ಟರಲ್ಲಿ ಟ್ರಾಫಿಕ್ ಪೊಲೀಸರು ಗಾಡಿಯನ್ನ ಎತ್ತಾಕೊಂಡು ಹೋಗ್ತಿತ್ತು ಅನ್ನೋ ಭಯ ಬಹುತೇಕ ಎಲ್ಲರಲ್ಲೂ ಇದ್ದೇ ಇರುತ್ತಿತ್ತು. ಈ ಸಮಸ್ಯೆ ಇತ್ತೀಚೆಗೆ ಕಡಿಮೆಯಾಗಿತ್ತು ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ವಾಹನ ಮಾಲೀಕರಿಗೆ ಶಾಕಿಂಗ್ ವಿಚಾರವೊಂದನ್ನು ಪೊಲೀಸರು ನೀಡಿದ್ದಾರೆ.

ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ವಾಹನ ಟೋಯಿಂಗ್ ಅನ್ನು ಪೊಲೀಸರು ಸದ್ದಿಲ್ಲದೆ ಮತ್ತೆ ಶುರು ಮಾಡಿದ್ದಾರೆ. ಇದರಿಂದ ವಾಹನ ಮಾಲೀಕರಿಗೆ ಮತ್ತೆ ತಲೆನೋವು ಶುರುವಾಗಿದೆ. ನಗರದ ಕೇಂದ್ರಭಾಗವಾದ ಮೆಜೆಸ್ಟಿಕ್ ಸುತ್ತಮುತ್ತ ಈಗಾಗಲೇ ಪೊಲೀಸರ ಟೋಯಿಂಗ್ ವಾಹನಗಳು ಅಖಾಡಕ್ಕೆ ಇಳಿದಿವೆ ಎಂದು ವರದಿಯಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಅಂದ ಕೂಡಲೇ ಅಲ್ಲಿ ಜನಜಂಗುಳಿ, ವಾಹನ ದಟ್ಟಣೆಗೆ ಹೆಸರುವಾಸಿ. ಹಾಗಾಗಿ, ಟ್ರಾಫಿಕ್ ಕಂಟ್ರೋಲ್ ಮಾಡುವ ಉದ್ದೇಶದ ಮೇರೆಗೆ ಟೋಯಿಂಗ್ ವಾಹನಗಳು ಕಾರ್ಯಾಚರಣೆಗೆ ಇಳಿದಿವೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ಲಿಮಿಟ್‌ನಲ್ಲಿ ಮಾತ್ರ ನೋ ಪಾರ್ಕಿಂಗ್ ವಾಹನಗಳ ಟೋಯಿಂಗ್ ನಡೆಯಲಿದೆ.
ಇನ್ನು ಈ ಭಾಗದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಹಾಗಾಗಿ ಈ ಒಂದು ಏರಿಯಾದಲ್ಲಿ ಮಾತ್ರವೇ ಟೋಯಿಂಗ್ ಶುರು ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈಗಾಗಲೇ ಟೋಯಿಂಗ್ ವಾಹನಗಳ ಎತ್ತಂಗಡಿ ಕೆಲಸ ಶುರುವಾಗಿದ್ದು, ಟೋಯಿಂಗ್ ವಾಹನದಲ್ಲಿ ಒಬ್ಬರು ಎಎಸ್‌ಐ ಹಾಗೂ ಟೋಯಿಂಗ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ಒಂದು ವೇಳೆ ನಿಮ್ಮ ವಾಹನ ಎಲ್ಲೆಂದರಲ್ಲಿ ನಿಲ್ಲಿಸಿದರೆ ಪೊಲೀಸ್ ಅಧಿಕಾರಿ ಮೊದಲು ಮೈಕ್ ಮೂಲಕ ಸೂಚನೆ ನೀಡುತ್ತಾರೆ. ಆದರೂ ವಾಹನ ಅಲ್ಲಿಯೇ ನಿಲ್ಲಿಸಿದರೆ ಸೀದಾ ಟೋಯಿಂಗ್ ಮಾಡಲಾಗುತ್ತದೆ ಎಂದು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಹಿಂದೆ ನಗರದೆಲ್ಲೆಡೆ ಟೋಯಿಂಗ್ ವಾಹನಗಳು ಕಾರ್ಯಾಚರಣೆಯಲ್ಲಿದ್ದವು. ಪೊಲೀಸರು ಕ್ಷಣಾರ್ಧದಲ್ಲಿ ವಾಹನಗಳನ್ನು ಎತ್ತಾಕೊಂಡು ಹೋಗುತ್ತಿದ್ದರು. ಈ ವೇಳೆ ವಾಹನ ಸವಾರರು ಹಾಗೂ ಪೊಲೀಸರ ನಡುವೆ ವಾಗ್ವಾದವೂ ನಡೆಯುತ್ತಿತ್ತು. ಕೊನೆಗೆ ಪೊಲೀಸರು ವಿಧಿಸುವ ಭಾರಿ ಮೊತ್ತದ ದಂಡ ಪಾವತಿಸಲು ಒದ್ದಾಡುತ್ತಿದ್ದರು.
ಇದರಿಂದ ಸಾರ್ವಜನಿಕರು ಬೇಸತ್ತಿದ್ದರು. ಬಳಿಕ ಟೋಯಿಂಗ್ ಮಾಡುವುದಕ್ಕೆ ನಗರದಲ್ಲಿ ಬ್ರೇಕ್ ಹಾಕಲಾಗಿತ್ತು. ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸುವ ವಾಹನಗಳ ಮೇಲೆ ದಂಡ ವಿಧಿಸುವಂತೆ ಮಾತ್ರವೇ ಪೊಲೀಸರಿಗೆ ಸೂಚಿಸಲಾಗಿತ್ತು. ಈಗ ಮತ್ತೆ ಟೋಯಿಂಗ್ ಶುರುವಾಗಿರುವುದು ಉದ್ಯಾನನಗರಿಯ ಜನರಿಗೆ ಆತಂಕ ಮೂಡಿಸುವಂತಿದೆ. ಬಹುದಿನಗಳ ನಂತರ ಟೋಯಿಂಗ್ ವಾಹನ ಕಂಡು ಬೆಚ್ಚಿಬಿದ್ದಿದ್ದಾರೆ. ಇದು ನಗರದೆಲ್ಲೆಡೆ ಮತ್ತೆ ಬರದಿದ್ದರೆ ಸಾಕು ಎಂದೂ ಬೇಡಿಕೊಳ್ಳುತ್ತಿದ್ದಾರೆ.












Click it and Unblock the Notifications