ಇನ್ನೇನು ಬೆಂಗಳೂರಲ್ಲಿ ವಾಹನಗಳ ಸಂಖ್ಯೆ 75ಲಕ್ಷ ದಾಟಲಿದೆ!
ಬೆಂಗಳೂರು, ಮಾರ್ಚ್ 09: ನಾಗಾಲೋಟದಿಂದ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ದಿನನಿತ್ಯ 1900 ನೂತನ ವಾಹನಗಳು ನೋಂದಣಿಯಾಗುತ್ತಿವೆ.
ಪರಿಣಾಮವಾಗಿ ಹದಗೆಟ್ಟಿರುವ ರಸ್ತೆ ದಿನದಿಂದ ದಿನಕ್ಕೆ ಮತ್ತಷ್ಟು ಬಿಗಡಾಯಿಸುತ್ತಿದ್ದು, ವಾಹನಗಳ ಸಂಖ್ಯೆ ಜನಸಂಖೆಯನ್ನೂ ಮಿತಿಮೀರಿಸುವಷ್ಟು ಬೆಳೆದಿದೆ. ಬೆಂಗಳೂರು ನಗರದ ಸಧ್ಯದ ವಾಹನಗಳ ಸಂಖ್ಯೆ 72.58ಲಕ್ಷಗಳನ್ನು ತಲುಪಿದ್ದು ಈ ಪೈಕಿ 50 ಲಕ್ಷ ವಾಹನಗಳು ದ್ವಿಚಕ್ರ ವಾಹನಗಳಾಗಿದ್ದು 14 ಲಕ್ಷ ಕಾರುಗಳು ಸೇರಿವೆ ಎಂದು ಸಾರಿಗೆ ಇಲಾಖೆಯ ದಾಖಲೆಗಳು ಹೇಳುತ್ತಿವೆ.
ಕಳೆದ ವರ್ಷಾಂತ್ಯದ ದಾಖಲೆಗಳನ್ನು ಗಮನಿಸಿದರೆ ಪ್ರತಿನಿತ್ಯ ಸಾವಿರ 1900 ನೂತನ ವಾಹನಗಳು ಬೆಂಗಳೂರು ನಗರದಲ್ಲಿ ನೋಂದಣಿಯಾಗುತ್ತಿವೆ. ಇನ್ನು ಕೆಲವೇ ತಿಂಗಳುಗಳಲ್ಲಿ ವಾಹನಗಳ ಸಂಖ್ಯೆ 75 ಲಕ್ಷವನ್ನು ಮೀರಲಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

2012ರ ಮಾರ್ಚ್ ತಿಂಗಳಿಗೆ ಹೋಲಿಸಿದರೆ ವಾಹನಗಳ ಸಂಖ್ಯೆ ಹೆಚ್ಚು ಕಡಿಮೆ ದುಪ್ಪಟ್ಟು ಆಗಿದ್ದು, 2012 ಮಾರ್ಚ್ ನಲ್ಲಿ 40.56 ಲಕ್ಷ ವಾಹನಗಳು ನೋಂದಣಿಯಾಗಿದ್ದವು. ಈ ಪೈಕಿ ದ್ವಿಚಕ್ರ ವಾಹನಗಳ ಸಂಖ್ಯೆ ವಿಪರೀತ ಹೆಚ್ಚಿದ್ದು 2012ರ ಮಾರ್ಚ್ ನಲ್ಲಿ 28 ಲಕ್ಷ 68 ಸಾವಿರ ದಷ್ಟಿದ್ದ ದ್ವಿಚಕ್ರ ವಾಹನಗಳ ಸಂಖ್ಯೆ 2017 ಡಿಸೆಂಬರ್ ನಲ್ಲಿ 50.30ನ್ನು ತಲುಪಿದೆ.
ಬೆಂಗಳೂರು ನಗರದ ರಸ್ತೆಯನ್ನು ಎಷ್ಟು ಅಭಿವೃದ್ಧಿ ಪಡಿಸಿದರೂ ಮುಂಬರುವ ದಿನಗಳಲ್ಲಿ ತಕ್ಕಂತೆ ರಸ್ತೆಗಳನ್ನು ನಿರ್ಮಿಸುವುದು ಕಷ್ಟವಾಗಿದೆ ಎಂದು ಸಂಚಾರ ತಜ್ಞ ಆಶಿಶ್ ವರ್ಮಾ ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ವಾಹನಗಳ ನೋಂದಣಿಗೆ ಪ್ರತಿವರ್ಷ ಇಂತಿಷ್ಟೇ ಎಂದು ನಿಗದಿಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆಯನ್ನು ನಿಯಂತ್ರಿಸಲು ಕೈಗೊಳ್ಳಬಹುದಾದ ಮತ್ತೊಂದು ಪ್ರಮುಖ ಅವಕಾಶವೇನೆಂದರೆ ವಾಹನಗಳ ಮೇಲಿನ ಲೈಫ್ ಟ್ಯಾಕ್ಸ್ ನ್ನು ದುಪ್ಪಟ್ಟುಗೊಳಿಸಬಹುದು. ಜತೆಗೆ ಸೆಂಟ್ರಲ್ ಬೆಂಗಳೂರು ಡಿಸ್ಟ್ರಿಕ್ಟ್ ಪ್ರದೇಶದಲ್ಲಿ ಹೊಸ ವಾಹನಗಳ ನೋಂದಣಿಯನ್ನು ಸಂಪೂರ್ಣ ನಿಷೇಧಿಸಿ ವಾಹನಗಳ ಪ್ರವೇಶಕ್ಕೆ ಕೆಲವು ಕಟ್ಟು ಪಾಡುಗಳನ್ನು ವಿಧಿಸಿದರೆ ಮಾತ್ರ ಹೆಚ್ಚುತ್ತಿರುವ ವಾಹನಗಳ ನೋಂದಣಿ ನಿಯಂತ್ರಿಸಬಹುದು ಎಂದಿದ್ದಾರೆ.











Click it and Unblock the Notifications