ಸಿಸ್ಕೊ ಕಂಪನಿಯ ಕೈತುಂಬಾ ಸಂಬಳದ ಕೆಲಸ ಬಿಟ್ಟು IAS ಅಧಿಕಾರಿಯಾದ ವಂಶಿಕಾ ಯಾದವ್ ಬಗ್ಗೆ ನಿಮಗೆಷ್ಟು ಗೊತ್ತು?
ಬೆಂಗಳೂರಿನಂಥ ಮಹಾನಗರದಲ್ಲಿ, ಪ್ರತಿಷ್ಠಿತ ಸಿಸ್ಕೊ ಕಂಪನಿಯಲ್ಲಿ ಕೈತುಂಬಾ ಸಂಬಳ ತರುವ ಐಟಿ ಉದ್ಯೋಗ. ಒಳ್ಳೆ ನಿರಾಳವಾದ ಜೀವನ. ಇಷ್ಟೆಲ್ಲಾ ಇದ್ದರೂ, ಈ ಸೌಕರ್ಯಗಳೆಲ್ಲವನ್ನೂ ಬಿಟ್ಟು ಯಾವುದೇ ಸೇಪ್ಟಿಯಿಲ್ಲದ, ಅತ್ಯಂತ ಕಠಿಣವಾದ ದಾರಿಯನ್ನ ಆಯ್ಕೆ ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೆ, ತನ್ನ ಕನಸಿಗಾಗಿ ಆ ಸಾಹಸಕ್ಕೆ ಕೈಹಾಕಿದವರು ವಂಶಿಕಾ ಯಾದವ್.
ಸುಲಭದ ಹಾಗೂ ಸುರಕ್ಷಿತ ವಲಯದಲ್ಲಿ ಇರುವುದು ಯಾರಿಗಾದರೂ ಇಷ್ಟವೇ. ಆದರೆ ವಂಶಿಕಾ ಅವರ ಗುರಿ ಹಾಗೂ ಆಸೆ ಬೇರೆಯದೇ ಆಗಿತ್ತು. ದೇಶಸೇವೆ ಮಾಡಬೇಕು, ಒಬ್ಬ ಐಎಎಸ್ ಅಧಿಕಾರಿಯಾಗಬೇಕು ಎಂಬುದು ಅವರ ಅತಿದೊಡ್ಡ ಕನಸಾಗಿತ್ತು. ಆ ಕನಸನ್ನ ನನಸಾಗಿಸಿಕೊಳ್ಳಲು ಅವರು ಸವೆಸಿದ ಹಾದಿ, ಯುವಜನತೆಗೆ ನಿಜಕ್ಕೂ ಸ್ಫೂರ್ತಿ.

ಕಾರ್ಪೊರೇಟ್ ವಲಯದಿಂದ ಸಿವಿಲ್ ಸರ್ವಿಸ್‌ಗೆ
ಮೂಲತಃ ದೆಹಲಿಯವರಾದ ವಂಶಿಕಾ ಯಾದವ್, ಓದಿನಲ್ಲಿ ಮೊದಲಿನಿಂದಲೂ ಮುಂದಿದ್ದರು. ದೆಹಲಿ ಟೆಕ್ನಾಲಜಿಕಲ್ ಯೂನಿವರ್ಸಿಟಿಯಲ್ಲಿ ತಮ್ಮ ಇಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ, ಅವರಿಗೆ ಬೆಂಗಳೂರಿನ ಖ್ಯಾತ ಟೆಕ್ ಕಂಪನಿಯಾದ ಸಿಸ್ಕೊದಲ್ಲಿ ಉದ್ಯೋಗ ದೊರೆಯಿತು. ಒಂದು ಸಾಮಾನ್ಯ ವೃತ್ತಿಜೀವನದಲ್ಲಿ ಏನೆಲ್ಲಾ ಇರಬೇಕೋ ಅವೆಲ್ಲವೂ ಅಲ್ಲಿತ್ತು. ಅಂದರೆ ಉತ್ತಮ ಸಂಬಳ, ಆರ್ಥಿಕ ಭದ್ರತೆ ಹಾಗೂ ವೃತ್ತಿ ಭವಿಷ್ಯದ ಸ್ಪಷ್ಟ ಚಿತ್ರಣ.
ಆದರೆ, ಸ್ಥಿರವಾದ ಉದ್ಯೋಗವೇ ಬೇರೆ, ಮನಸ್ಸಿಗೆ ತೃಪ್ತಿ ನೀಡುವ ಗುರಿಯೇ ಬೇರೆ ಎಂಬುದನ್ನು ಅವರು ಬೇಗನೇ ಅರ್ಥವಾಗಿತ್ತು. ತಾನು ಈ ದೇಶಕ್ಕಾಗಿ ಏನಾದರೂ ಸೇವೆ ಮಾಡಬೇಕು ಎಂಬ ತುಡಿತ ಅವರಲ್ಲಿತ್ತು. ಒಂದು ವೇಳೆ ಈಗ ರಿಸ್ಕ್ ತೆಗೆದುಕೊಳ್ಳದಿದ್ದರೆ, ಮುಂದೊಂದು ದಿನ ಅವತ್ತು ಪ್ರಯತ್ನಿಸಿದ್ದರೆ ಏನಾಗುತ್ತಿತ್ತೋ ಎಂದು ಜೀವನಪೂರ್ತಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎನ್ನುವುದು ಅವರಿಗೆ ಸ್ಪಷ್ಟವಾಗಿತ್ತು.
ಹೀಗಾಗಿ, ಯಾವುದೇ ಹಿಂಜರಿಕೆಯಿಲ್ಲದೆ ಸಿಸ್ಕೊ ಕಂಪನಿಯ ಕೆಲಸಕ್ಕೆ ರಿಸೈನ್ ಮಾಡಿ, ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯ ಸಿದ್ಧತೆಗೆ ಪೂರ್ತಿ ತಮ್ಮನ್ನ ತಾವು ತೊಡಗಿಸಿಕೊಂಡರು.
ಯುಪಿಎಸ್‌ಸಿಯಲ್ಲಿ ಸತತ ವೈಫಲ್ಯ
ಉದ್ಯೋಗ ಬಿಟ್ಟು ಯುಪಿಎಸ್‌ಸಿ ಓದಲು ಆರಂಭಿಸಿದ ತಕ್ಷಣ ಅವರಿಗೆ ಯಶಸ್ಸು ಒಲಿಯಲಿಲ್ಲ. ಅವರಿಗೆ ಈ ಹಾದಿಯಲ್ಲಿ ಕಠಿಣ ಸವಾಲುಗಳು ಎದುರಾಗಿತ್ತು. ಮೊದಲ ಪ್ರಯತ್ನದಲ್ಲಿಯೇ ಅವರು ಪ್ರಿಲಿಮ್ಸ್ ಪರೀಕ್ಷೆಯಲ್ಲಿ ವಿಫಲರಾದರು. ಎದೆಗುಂದದೆ ಮತ್ತೆ ಓದಿ ಎರಡನೇ ಬಾರಿ ಪರೀಕ್ಷೆ ಬರೆದರೂ, ಫಲಿತಾಂಶ ಮತ್ತೆ ಶೂನ್ಯ. ಸತತ ಎರಡು ಬಾರಿ ಪ್ರಿಲಿಮ್ಸ್ ಹಂತದಲ್ಲೇ ಸೋಲನುಭವಿಸಿದ್ದು ಯಾರನ್ನಾದರೂ ಮಾನಸಿಕವಾಗಿ ಕುಗ್ಗಿಸಬಹುದಿತ್ತು.
ಆದರೆ ವಂಶಿಕಾ ಅವರು ಈ ಸೋಲಿನಿಂದ ತಾವು ಅಸಮರ್ಥರು ಎಂದು ನೋಡೆಯಿಲ್ಲ. ಬದಲಾಗಿ, ಅವೆಲ್ಲವನ್ನೂ ತಮ್ಮ ಸಿದ್ಧತೆಯನ್ನ ಉತ್ತಮಪಡಿಸಿಕೊಳ್ಳಲು ಸಿಕ್ಕ ಪ್ರತಿಕ್ರಿಯೆ ಎಂದು ಪರಿಗಣಿಸಿದರು. ತಮ್ಮ ಓದುವ ವಿಧಾನವನ್ನ ಮರುಪರಿಶೀಲಿಸಿದರು. ತಮ್ಮಲ್ಲಿರುವ ನ್ಯೂನತೆಗಳನ್ನ ಗುರುತಿಸಿಕೊಂಡು, ಇನ್ನಷ್ಟು ಶಿಸ್ತಿನಿಂದ ಹೊಸ ಕಾರ್ಯತಂತ್ರದೊಂದಿಗೆ ಓದಲು ಆರಂಭಿಸಿದರು.
ಯುಪಿಎಸ್‌ಸಿ ಸಿದ್ಧತೆಯ ಸಂದರ್ಭದಲ್ಲಿ ಅವರ ಕುಟುಂಬ ಅವರಿಗೆ ಬೆನ್ನೆಲುಬಾಗಿ ನಿಂತಿತು. ಸಹಾಯಕ ಸಬ್-ಇನ್ಸ್‌ಪೆಕ್ಟರ್ ಆಗಿರುವ ಅವರ ತಂದೆ ರಾಜಕುಮಾರ್ ಯಾದವ್ ಹಾಗೂ ತಾಯಿ ಸರಿತಾ ಯಾದವ್ ಮಗಳ ನಿರ್ಧಾರವನ್ನ ಸಂಪೂರ್ಣವಾಗಿ ಬೆಂಬಲಿಸಿದರು.
ಸತತ ಪರಿಶ್ರಮ, ದೃಢಸಂಕಲ್ಪ ಹಾಗೂ ಕುಟುಂಬದ ಪ್ರೋತ್ಸಾಹ ಕೊನೆಗೂ ಫಲ ನೀಡಿತು. 2019ರಲ್ಲಿ, ತಮ್ಮ ಮೂರನೇ ಪ್ರಯತ್ನದಲ್ಲಿ ವಂಶಿಕಾ ಯಾದವ್ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 6ನೇ ರ‍್ಯಾಂಕ್ (AIR 6) ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು.
ಬೆಂಗಳೂರಿನಲ್ಲಿ ಲಕ್ಷ ಲಕ್ಷ ಸಂಬಳದ ಕಾರ್ಪೊರೇಟ್ ವೃತ್ತಿಯನ್ನ ಬಿಟ್ಟು ಬಂದ ಆ ಯುವತಿ, ತಾನು ಯಾವುದಕ್ಕಾಗಿ ಅದೆಲ್ಲವನ್ನೂ ಬಿಟ್ಟು ಬಂದಿದ್ದಳೋ ಆ ಕನಸನ್ನ ಕೊನೆಗೂ ನನಸಾಗಿಸಿಕೊಂಡಿದ್ದಳು. ಎರಡು ಬಾರಿ ಪ್ರಿಲಿಮ್ಸ್ ಸೋಲಿನಿಂದ, 6ನೇ ರ‍್ಯಾಂಕ್ ವಿಜೇತ ಐಎಎಸ್ ಅಧಿಕಾರಿಯಾಗಿ ಬದಲಾದ ಅವರ ಕಥೆ ಅಸಾಮಾನ್ಯವಾದದ್ದು.
ಕೆಲವೊಮ್ಮೆ, ನಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರಬರದಿರುವುದೇ ನಾವು ತೆಗೆದುಕೊಳ್ಳುವ ಅತಿದೊಡ್ಡ ರಿಸ್ಕ್ ಆಗಿರಬಹುದು. ಅದನ್ನು ಮೀರಿ ಹೊರಬಂದಾಗ ಮಾತ್ರ ನಮ್ಮ ನಿಜವಾದ ಸಾಮರ್ಥ್ಯ ಏನು ಎಂಬುದು ನಮಗೆ ಅರಿವಾಗುತ್ತದೆ ಎಂಬುದಕ್ಕೆ ವಂಶಿಕಾ ಯಾದವ್ ಅವರೇ ಜೀವಂತ ಉದಾಹರಣೆ.


Click it and Unblock the Notifications
