ವಂದೇ ಮಾತರಂ ಕದನ; 'ಮೊದಲು ಹಾಡಿದ್ದೇ ಕಾಂಗ್ರೆಸ್' ಎಂದ ಸಚಿವ ತಂಗಡಗಿ,1896ರ ಇತಿಹಾಸ ನೆನಪಿಸಿದ ಸಚಿವ
ಬೆಂಗಳೂರು: 'ವಂದೇ ಮಾತರಂ' ಗೀತೆಯ ಎರಡು ಚರಣ ಮಾತ್ರ ಹಾಡುವಂತೆ ಆದೇಶ ಮಾಡಿದೆ. ಇದು ನಮ್ಮ ಸರ್ಕಾರದ ತೀರ್ಮಾನವಲ್ಲ. ಈ ಗೀತೆಯನ್ನು ಮೊದಲ ಬಾರಿಗೆ 1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಅಂದರೆ ವಂದೇ ಮಾತರಂ ಮೊದಲು ಹಾಡಿದ್ದೇ ಕಾಂಗ್ರೆಸ್ಸಿನವರು' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರಿಗೆ ತಿರುಗೇಟು ನೀಡಿದ್ದಾರೆ
ಇತ್ತೀಚೆಗೆ ಮತ್ತೆ ವಂದೇ ಮಾತರಂ' ಬಗ್ಗೆ ಚರ್ಚೆ ಆಗುತ್ತಿದೆ. ಮುಂದುವರಿದು ಸಚಿವರು ಎರಡು ಚರಣಕ್ಕಿಂತ ಹೆಚ್ಚು ಹಾಡಿದರೆ ಕ್ರಮ ಎಂದು ಹೇಳಿದ್ದ ವಿಡಿಯೋವನ್ನು ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಎಕ್ಸ್ ಪೋಸ್ಟ್ ಮಾಡಿ, 'ವಂದೇ ಮಾತರಂ' ಕುರಿತು ಯಾವುದೇ ಮಾತುಕತೆ ಅಥವಾ ರಾಜಿಗಿಲ್ಲ. ಎರಡಕ್ಕಿಂತ ಹೆಚ್ಚು ಚರಣಗಳನ್ನು ಹಾಡಿದರೆ ಕ್ರಮ ಕೈಗೊಳ್ಳುವುದಾಗಿ ಬೆದರಿಸಲು ಬಯಸುತ್ತೀರಾ? ಹಾಗಾದರೆ ಪ್ರಯತ್ನಿಸಿ ನೋಡಿ. ನಾವು ನಿನ್ನೆ ಹಾಡಿದೆವು, ಇಂದು ಹಾಡುತ್ತಿದ್ದೇವೆ ಮತ್ತು ಮುಂದೆಯೂ ಹಾಡುತ್ತಲೇ ಇರುತ್ತೇವೆ, ಏನೇ ಆದರೂ ಸರಿ. ನಿಮ್ಮ ಸವಾಲನ್ನು ನಾವು ಸ್ವೀಕರಿಸಿದ್ದೇವೆ' ಎಂದು ಹೇಳಿದ್ದರು. ಅದಕ್ಕೀಗ ಸಚಿವರು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಶಿವರಾಜ್ ತಂಗಡಗಿ ಅವರು, '1875 ರಲ್ಲಿ ಜನರಲ್ಲಿ ದೇಶ ಪ್ರೇಮ ಉಕ್ಕಿಸುವಂತೆ ಮಾಡಲು ಬಂಕಿಮ ಚಂದ್ರ ಚಟರ್ಜಿ ಅವರು 'ವಂದೇ ಮಾತರಂ' ಎರಡೇ ಚರಣ ರಚಿಸಿದ್ದರು. ಅದನ್ನು ಬಂಗಾಳದ ನಾಡಗೀತೆ ರಚನೆ ವೇಳೆ ಪರಿಷ್ಕರಣೆ ಮಾಡಲಾಗಿತ್ತು. ಬಳಿಕ ಸುಭಾಷ್ ಚಂದ್ರ ಬೋಸ್ ಅವರ ಒತ್ತಾಸೆಯಂತೆ ವಂದೇ ಮಾತರಂ ಎಷ್ಟು ಹಾಡಬೇಕು ಎಂಬ ಬಗ್ಗೆ ತೀರ್ಮಾನಿಸಲು ಕಾಂಗ್ರೆಸ್ ವರ್ಕಿಂಗ್ ಕಮಿಟಿ ರವೀಂದ್ರನಾಥ ಠಾಗೂರ್ ಅವರಿಗೆ ಜವಾಬ್ದಾರಿ ನೀಡಿತ್ತು.
1937 ರಲ್ಲಿ ಎರಡು ಚರಣ ಹಾಡಲು ತೀರ್ಮಾನ
1937 ರಲ್ಲಿ ರವೀಂದ್ರನಾಥ ಠಾಗೂರ್ ಅವರ ಸಲಹೆಯಂತೆ ದೇಶದ ಏಕತೆಗೆ ಧಕ್ಕೆ ಬರದಂತೆ ಬಂಕಿಮಚಂದ್ರ ಚಟರ್ಜಿ ಅವರು ಬರೆದಿದ್ದ ಎರಡು ಚರಣ ಮಾತ್ರ ಹಾಡಲು ತೀರ್ಮಾನಿಸಲಾಯಿತು. ಅದು ನೂರು ವರ್ಷಕ್ಕೂ ಹೆಚ್ಚು ಕಾಲದಿಂದ ಹಾಗೆಯೇ ಇದೆ' ಎಂದರು.
'ಇತಿಹಾಸದ ಅರಿವು ಇಲ್ಲದಿದ್ದರೆ ಅರಿತು ಬಾಳಬೇಕು. ಅದು ಬಿಟ್ಟು ವಂದೇ ಮಾತರಂ ಬಗ್ಗೆ ನೀವು ಕಾಂಗ್ರೆಸ್ಸಿಗರಿಗೆ ಬೋಧನೆ ಮಾಡುವುದು ಗುರುವಿಗೇ ಪಾಠ ಹೇಳುವಷ್ಟು ಅಜ್ಞಾನ ಮಾತ್ರವಲ್ಲ, ಅಹಂಕಾರದ ಪ್ರದರ್ಶನ ಕೂಡ.
ನಿಮಗೆ ಮಾರುಕಟ್ಟೆಯಲ್ಲಿ ಹುಂಡಿ ಕಳ್ಳರ ವಕ್ತಾರ ಎಂಬ ಒಳ್ಳೆಯ ಹೆಸರಿದೆ. ಶ್ರೀರಾಮನ ಹಣ ಕೊಳ್ಳೆ ಹೊಡೆದವರ ನಿಷ್ಠ ಸೇವಕ, ಆಸ್ಥಾನ ವಾಗ್ಮಿ ಎಂಬ ಬಿರುದಾಂಕಿತರು ತಾವು. ನಿಮಗೆ ಹೊಸದಾಗಿ ಕೊತ್ವಾಲರ ಕನವರಿಕೆ ಯಾಕೆ ಶುರುವಾಯಿತು ಅರ್ಥವಾಗುತ್ತಿಲ್ಲ' ಎಂದು ಟಾಂಗ್ ನೀಡಿದ್ದಾರೆ.
'ನಿಮ್ಮ ಮಿಥ್ಯಕತೆಗಳಿಗೆ ಅಂಧಭಕ್ತರು ತಟ್ಟುವ ಚಪ್ಪಾಳೆಗೆ ಮರುಳಾಗಿ ಸರ್ಕಾರಿ ಆದೇಶಗಳ ಬಗ್ಗೆ ತಿರುಚಿ ಹೇಳುವುದು ಬೇಡ. ಸಚಿವರಾದವರ ಹೇಳಿಕೆಗಳಿಗೆ ಅಪಾರ್ಥ ಕಲ್ಪಿಸುವ ವ್ಯರ್ಥ ಪ್ರಯತ್ನ ಬೇಡವೇ ಬೇಡ. ನಮ್ಮ ಸರ್ಕಾರ 'ವಂದೇ ಮಾತರಂ 'ಎರಡು ಚರಣ ಮಾತ್ರ ಹಾಡುವಂತೆ ಆದೇಶ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿ ಆ ಆದೇಶ ಪಾಲನೆ ನನ್ನ ಆದ್ಯ ಕರ್ತವ್ಯ' ಎಂದು ಹೇಳಿದರು.
'ಕಳೆದ ವಾರ ಗಂಗಾವತಿಯ ಸರ್ಕಾರಿ ಕಾರ್ಯಕ್ರಮದಲ್ಲಿ ಸರ್ಕಾರಿ ಆದೇಶದಂತೆ ಅಧಿಕಾರಿಗಳು ವಂದೇ ಮಾತರಂ ಎರಡು ಚರಣ ಮಾತ್ರ ಹಾಡಿಸಿದ್ದರು. ಆಗ ಶಾಸಕ ಗಾಲಿ ಜನಾರ್ದನರಡ್ಡಿ ಬಲವಂತವಾಗಿ 'ವಂದೇ ಮಾತರಂ' ಗೀತೆಯನ್ನು ಸಂಪೂರ್ಣ ಹಾಡಿಸಿದ್ದರು. ಹೀಗಾಗಿ ಸರ್ಕಾರ ಆದೇಶ ಪಾಲನೆ ಮಾಡದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದೆ. ನನ್ನ ಮಾತು, ಸೂಚನೆ ಸರ್ಕಾರಿ ಅಧಿಕಾರಿಗಳಿಗೆ ಸೀಮಿತ ಎಂದು ತಮ್ಮ ಕ್ರಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದರು.
ಇದೇ ವೇಳೆ ನಾನು, ' ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿರುವುದರಿಂದ ಸರ್ಕಾರದ ನೀತಿ-ನಿಯಮಗಳನ್ನು ಪಾಲಿಸುವುದು ನನ್ನ ಜವಾಬ್ದಾರಿ. ವಂದೇ ಮಾತರಂ ಗೀತೆಯನ್ನು ಪೂರ್ಣ ಚರಣಗಳೊಂದಿಗೆ ಹಾಡುವಂತೆ ಸರ್ಕಾರ ಆದೇಶ ನೀಡಿದರೆ ಯಾವುದೇ ಅಭ್ಯಂತರವಿಲ್ಲ. ಶಾಸಕರು ಸದನದಲ್ಲಿ ಈ ಕುರಿತು ಒತ್ತಾಯಿಸಿದರೆ ಚರ್ಚೆ ನಡೆಸಿ ಸಮಿತಿ ರಚಿಸಲಾಗುವುದು ಎಂದೂ ಹೇಳಿದ್ದೆ.' ಇದನ್ನು ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಎಲ್ಲ ಅಂಧ ಭಕ್ತರೂ ಅರಿಯಬೇಕು.
ನನ್ನ ಬಳಿ ನಿಮ್ಮ ತಾಕತ್ತು ನಡೆಯಲ್ಲ!
ನನ್ನ ಸವಾಲು ಸ್ವೀಕರಿಸಿ ವಂದೇಮಾತರಂ ಹಾಡಿರುವುದಾಗಿ ತಿಳಿಸಿದ್ದೀರಿ. ನನ್ನ ತಾಕತ್ತನ್ನೂ ಪ್ರಶ್ನಿಸಿದ್ದೀರಿ.
ಗಂಡು ಮೆಟ್ಟಿದ ನಾಡು ಕೊಪ್ಪಳದ ಮಣ್ಣಿನ ಮಗ ನಾನು. ನನ್ನ ಬಳಿ ನಿಮ್ಮ ತಾಕತ್ತು ನಡೆಯುವುದಿಲ್ಲ. ತಾಕತ್ತು ತೋರಿಸುವ ಚಟ ನಿಮಗೆ ಇದ್ದರೆ ಆರ್.ಎಸ್.ಎಸ್.ನ 'ಗಂಡು' ಬಳಿ ಹೋಗಿ ಅದೇನು ತೋರಿಸುತ್ತಿರೋ ತೋರಿಸಿ ಎಂದು ಸವಾಲೆಸೆದರು.
'ವಂದೇ ಮಾತರಂ' ಸಮಾನ ಸ್ಥಾನಮಾನ, ರಕ್ಷಣೆ
'ನಿಮ್ಮದೇ ಕೇಂದ್ರ ಸರ್ಕಾರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ- 2026 ಅನ್ನು ಅಂಗೀಕರಿಸಿ 'ವಂದೇ ಮಾತರಂ'ಗೆ ರಾಷ್ಟ್ರಗೀತೆಯಂತೆ ಸಮಾನ ಕಾನೂನು ಸ್ಥಾನಮಾನ ಮತ್ತು ರಕ್ಷಣೆ ನೀಡಿದೆ. ಹಾಗಾದರೆ ತಾವು ಯಾವಾಗಿನಿಂದ ಸದಾ ವತ್ಸಲೇ, ವಂದೇ ಮಾತರಂ ಜೊತೆಗೆ ಸಂಘದಲ್ಲಿ ರಾಷ್ಟ್ರಗೀತೆ ಹಾಡುತ್ತೀರಿ ಎಂಬ ಪ್ರಶ್ನೆಗೆ ಮೊದಲು ಉತ್ತರಿಸಿ' ಎಂದು ಆಗ್ರಹಿಸಿದರು.
'ಆರ್‌ಎಸ್‌ಎಸ್‌ನ ಐಟಿಸಿ (ಪ್ರಾಥಮಿಕ ಶಿಕ್ಷಾ ವರ್ಗ), ಒಟಿಸಿ (ಸಂಘ ಶಿಕ್ಷಾ ವರ್ಗ) ಸೇರಿದಂತೆ ನಿಮ್ಮ ತರಬೇತಿ ಶಿಬಿರಗಳಲ್ಲಿ ತಾಕತ್ತಿದ್ದರೆ ರಾಷ್ಟ್ರಗೀತೆ ಹಾಡಿ, ದಲಿತರಿಗೆ ಅವಕಾಶ ನೀಡಿ, ಮಹಿಳೆಯರಿಗೆ ಆದ್ಯತೆ ನೀಡಿ. ಅದರಲ್ಲಿ ನಿಮ್ಮ ತಾಕತ್ತು ಪ್ರದರ್ಶನ ಮಾಡಿ. ಮಲ್ಲಿಕಾರ್ಜುನ ಖರ್ಗೆ ಅವರಂತಹ ದೇಶದ ಪ್ರಮುಖ ರಾಷ್ಟ್ರೀಯ ನಾಯಕರೊಬ್ಬರು ಭಾಷಣ ಮಾಡಿದ ಸ್ಥಳವನ್ನು 'ಶುದ್ಧೀಕರಣ' ಮಾಡಿದ ದಲಿತ ದ್ರೋಹಿ ಸಂತತಿಯವರು ನೀವು. ನಿಮ್ಮಂತಹವರ ತಾಕತ್ತು, ಸವಾಲು ನನಗೆ ಹೊಸದೇನಲ್ಲ. ಯಾವುದಕ್ಕೂ ಆಡುವ ಮಾತಿನ ಮೇಲೆ ಹಿಡಿತವಿರಲಿ' ಎಂದು ಗುಡುಗಿದರು.


Click it and Unblock the Notifications
