ಚಕ್ರವರ್ತಿ ಸೂಲಿಬೆಲೆ ತಂದೆ ದೇವಿದಾಸ್ ಸುಬ್ರಾಯ ಶೇಟ್ ನಿಧನ
ಯುವ ಬ್ರಿಗೇಡ್ ಸಂಸ್ಥಾಪಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ತಂದೆ ದೇವಿದಾಸ್ ಸುಬ್ರಾಯ ಶೇಟ್ ಅವರು ಇಂದು ನಿಧನರಾಗಿದ್ದಾರೆ. ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ದೀರ್ಘಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ದೇವದಾಸ್ ಸುಬ್ರಾಯ ಶೇಟ್ ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ತಮ್ಮ ಜೀವನವನ್ನು ಶಿಕ್ಷಣ ಸೇವೆಗೆ ಮೀಸಲಿಟ್ಟಿದ್ದರು. ತಂದೆಯ ನಿಧನಕ್ಕೆ ಚಕ್ರವರ್ತಿ ಸೂಲಿಬೆಲೆ ಅವರು ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
"ಬದುಕಿನ ಪಯಣದಲ್ಲಿ ಶಾಶ್ವತವಾಗಿ ಯಾರೂ ಜೊತೆಗಿರಲಾರರು. ಆದರೆ ಕೆಲವರ ವಿಯೋಗ ಅನಿರೀಕ್ಷಿತ ಮತ್ತು ದುಃಖಮಯ ಎಂದು ಚಕ್ರವರ್ತಿ ಬರೆದುಕೊಂಡಿದ್ದಾರೆ. ಅಪ್ಪ ಇಂದು ಬೆಳಿಗ್ಗೆಯಷ್ಟೇ ಯಾತ್ರೆ ಮುಗಿಸಿ ಅಗಲಿದರು. ಕೆಲದಿನಗಳ ಶ್ವಾಸಕೋಶದ ಸಮಸ್ಯೆ ಅವರನ್ನು ಈ ಹಂತಕ್ಕೆ ಒಯ್ಯುವುದೆಂದು ನಾನು ಭಾವಿಸಿರಲಿಲ್ಲ. ಅವರನ್ನು ಪ್ರೀತಿಸುವವರು ಬಹಳ ಮಂದಿ. ಎಲ್ಲರಿಗೂ ವಿಷಯ ಮುಟ್ಟಿಸುವುದು ಹೇಗೆ? ಅದಕ್ಕೇ ಇಲ್ಲಿ ಹಂಚಿಕೊಳ್ಳುತ್ತಿರುವೆ. ಅವರ ಸದ್ಗತಿಗೆ ಪ್ರಾರ್ಥಿಸಿಕೊಳ್ಳಿ" ಎಂದು ಚಕ್ರವರ್ತಿ ಸೂಲಿಬೆಲೆ ಸಾವಿನ ವಿಚಾರವನ್ನು ಖಚಿತಪಡಿಸಿದ್ದಾರೆ.

ದೇವಿದಾಸ್ ಸುಬ್ರಾಯ ಶೇಟ್ ಅವರ ನಿಧನಕ್ಕೆ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ. ನಾಡಿನ ಖ್ಯಾತ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಅವರ ತಂದೆಯವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಶ್ರೀಯುತರ ಆತ್ಮಕ್ಕೆ ಶಾಂತಿ, ಸದ್ಗತಿ ಕೋರಿ, ಕುಟುಂಬದ ಸದಸ್ಯರಿಗೆ ನೋವನ್ನು ಸಹಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂಸದ ತೇಜಸ್ವಿ ಸೂರ್ಯ ಕಂಬನಿ ಮಿಡಿದಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಅವರ ಪೂಜ್ಯ ತಂದೆಯವರಾದ ದೇವಿದಾಸ್ ಸುಬ್ರಾಯ ಶೇಟ್ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ, ಓಂ ಶಾಂತಿ ಎಂದು ಪ್ರತಾಪ್ ಸಿಂಹ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ತಂದೆಯವರು ಇಹಲೋಕ ತ್ಯಜಿಸಿದರು ಎಂಬ ವಿಷಯ ತಿಳಿದು ಅತ್ಯಂತ ದುಃಖವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರಿಗೆ ಈ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಬಸನಗೌಡ ಪಾಟೀಲ್ ಯತ್ನಾಳ್ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಸಿ.ಟಿ.ರವಿ ಕೂಡ ಪೋಸ್ಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಆತ್ಮೀಯ ಸ್ನೇಹಿತರು, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರ ಅಪ್ಪಾಜಿ ದೇವಿದಾಸ್ ಸುಬ್ರಾಯ ಶೇಟ್ ಅವರು ದೈವಾಧೀನರಾದ ವಿಷಯ ತಿಳಿದು ಅತ್ಯಂತ ದುಃಖವಾಯಿತು. ಗುರುಗಳಾಗಿ ಅನೇಕ ಆದರ್ಶ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಮೂಲಕ ಸಮಾಜಕ್ಕೆ ಅವರು ನೀಡಿದ ಸೇವೆ ಸದಾ ಸ್ಮರಣೀಯ. ಇಹಕಾಯವನ್ನಗಲಿದ ಅವರಾತ್ಮಕ್ಕೆ ಭಗವಂತನು ಮೋಕ್ಷವನ್ನು ಕರುಣಿಸಲಿ. ಅವರ ಅಗಲಿಕೆಯ ದುಃಖವನ್ನು ಸ್ಮರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬವರ್ಗ, ಶಿಷ್ಯವರ್ಗ ಹಾಗೂ ಆತ್ಮೀಯರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.












Click it and Unblock the Notifications