ಇದೇನಿದು ಸರಕಾರಿ ನೌಕರರಿಗೂ ಡ್ರೆಸ್ ಕೋಡು!
ಬೆಂಗಳೂರು, ಸೆ. 14: ಇದೇನಿದು ಶಾಲಾ ಮಕ್ಕಳಂತೆ ಸರಕಾರಿ ಅಧಿಕಾರಿಗಳು, ನೌಕರರಿಗೂ ಡ್ರೆಸ್ ಕೋಡು ಬಂತಾ! ಹೌದು ಈ ತಕ್ಷಣದಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಸರಕಾರಿ ಸಿಬ್ಬಂದಿ ಫಾರ್ಮಲ್ಲುಗಳನ್ನು ಬಿಚ್ಚಿಟ್ಟು ಯೂನಿಫಾರಂ ತೊಟ್ಟು ಕಚೇರಿಗೆ ಬರಬೇಕು.
ಯಾಕಾಗಿ/ ಯಾರಿಗಾಗಿ ಈ ವಸ್ತ್ರಸಂಹಿತೆ? ಇದನ್ನು ಜಾರಿಗೊಳಿಸಿದವರು ಯಾರು ಎಂದು ಕೆದಕಿದಾಗ... ರಾಜ್ಯ ಸರಕಾರ ತನ್ನ ಎಲ್ಲ ಇಲಾಖೆಯ ಅಧಿಕಾರಿ ಹಾಗೂ ನೌಕರರಿಗೂ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದೆ. ಈ ಬಗ್ಗೆ ಇಂದಿನ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ವಿಸ್ತ್ರುತ ವರದಿ ಪ್ರಕಟವಾಗಿದೆ.
ತಕ್ಷಣದಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಸರಕಾರಿ ಕಚೇರಿಗೆ ಬರುವ ಪುರುಷ ಹಾಗೂ ಮಹಿಳಾ ಅಧಿಕಾರಿ/ನೌಕರರು ಸಭ್ಯ ಉಡುಗೆ ತೊಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಸೆ. 12ರಂದು ಸುತ್ತೋಲೆ ಹೊರಬಿದ್ದಿದೆ.

ಹಾಗಂತ ಈ ಡ್ರೆಸ್ ಕೋಡ್ ನಿಯಮವನ್ನು ಸರಕಾರವೇ ಏಕಾಏಕಿ ಜಾರಿಗೆ ತಂದಿಲ್ಲ. ಈ ಸಂಬಂಧ ಸಚಿವಾಲಯ ನೌಕರರ ಸಂಘವೇ ಪ್ರಸ್ತಾವನೆ ಸಲ್ಲಿಸಿತ್ತು. ಸಚಿವಾಲಯದ ಸಿಬ್ಬಂದಿ ವರ್ಗ, ಅದರಲ್ಲೂ ಹೊಸದಾಗಿ ಸರಕಾರಿ ಸೇವೆಗೆ ಸೇರ್ಪಡೆಗೊಂಡವರು ಶೋಭೆ ತರದಿರುವಂತಹ ಉಡುಪುಗಳನ್ನು ಧರಿಸಿ ಕಚೇರಿಗೆ ಬರುತ್ತಿರುವುದು ಇಡೀ ವಾತಾವರಣವನ್ನು ಹಾಳುಮಾಡುತ್ತಿದೆ.
ಕಚೇರಿಗೆ ಬರುವಾಗ ಗೌರವ ತರುವ ವಸ್ತ್ರಗಳನ್ನು ಧರಿಸಲು ಅನುಕೂಲ ಆಗುವಂತೆ ಡ್ರೆಸ್ ಕೋಡ್ ನಿಯಮ ಜಾರಿಗೆ ತರಬೇಕೆಂದು ಸಚಿವಾಲಯದ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ, ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಕೋರಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾರ್ಯದರ್ಶಿಗಳು, ನೌಕರ ಸಂಘಟನೆಗಳ ಜತೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಹೊಸ ನಿಯಮ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಮ್ಮತಿಸಿದ್ದಾರೆ.
ಹೊಸ ನಿಯಮದಂತೆ ಪುರುಷ ಅಧಿಕಾರಿ ಮತ್ತು ನೌಕರರು ಪ್ಯಾಂಟ್-ಶರ್ಟ್, ಪೈಜಾಮ ಇಲ್ಲವೇ ಖುರ್ತಾ ಧರಿಸಬೇಕು. ಮಹಿಳಾ ಅಧಿಕಾರಿ ಮತ್ತು ನೌಕರರು ಸೀರೆ ಇಲ್ಲವೇ ಚೂಡಿದಾರದಂತಹ ಉಡುಪುಗಳನ್ನು ಧರಿಸಿ ಕಚೇರಿ ಕೆಲಸಕ್ಕೆ ಹಾಜರಾಗಬೇಕು.
ಮಹಿಳಾ ಅಧಿಕಾರಿ ಹಾಗೂ ನೌಕರರು ಟೀಶರ್ಟ್, ಸ್ಕರ್ಟ್, ಮಿಡಿ ಮೊದಲಾದ ಫ್ಯಾಷನಬಲ್ ಉಡುಪುಗಳನ್ನು ತೊಟ್ಟು ಕಚೇರಿಗೆ ಬರುವಂತಿಲ್ಲ. ಪುರುಷರು ಕೂಡ ಟೀಶರ್ಟ್ ಧರಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ ಎಂದು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಸರಕಾರದ ಹಾಲಿ ನಿಯಮದಂತೆ ವಾಹನ ಚಾಲಕರು ಹಾಗೂ ಗ್ರೂಪ್ 'ಡಿ' ಸಿಬ್ಬಂದಿ ಮಾತ್ರ ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೂ ಬಹುತೇಕರು ಈ ನಿಯಮ ಪಾಲನೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಡಿ ದರ್ಜೆ ನೌಕರರು ಸಹ ಇನ್ನು ಮುಂದೆ ನಿಗದಿಪಡಿಸಿರುವ ಸಮವಸ್ತ್ರ ಧರಿಸಲೇಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.












Click it and Unblock the Notifications