ನಾನ್‌ವೆಜ್ ಪ್ರಿಯರಿಗಾಗಿ ಈ ಸುದ್ದಿ: ಇಲ್ಲಿದೆ ಬೆಂಗಳೂರಿನ ಬೆಸ್ಟ್ ಮಿಲಿಟರಿ ಹೋಟೆಲ್‌ಗಳ ಪಟ್ಟಿ
ಮಿಲಿಟರಿ ಹೋಟೆಲ್‌ಗಳು ಮನೆಯ ಊಟದ ಅನುಭವವನ್ನು ನೀಡುತ್ತವೆ. ರುಚಿಕರವಾದ, ಹಬೆಯಾಡುವ ಬಿರಿಯಾನಿಗಳು, ಕೈಮಾ ಉಂಡೆಗಳು ಮತ್ತು ರಾಗಿ ಮುದ್ದೆಗಳು ಭೋಜನ ಪ್ರಿಯರನ್ನು ಸದಾ ತನ್ನತ್ತ ಸೆಳೆಯುತ್ತಿರುತ್ತದೆ. ಬೆಂಗಳೂರಿನಲ್ಲಿ ಪಕ್ಕಾ ನಾಟಿ ಸ್ಟೈಲ್ ಊಟವನ್ನು ಸವಿಯಬೇಕೆಂದರೆ ನೀವು ಮಿಲಿಟರಿ ಹೋಟೆಲ್‌ಗಳಿಗೆ ಭೇಟಿ ನೀಡಬೇಕು.
ಬೆಂಗಳೂರಿನ ಮಿಲಿಟರಿ ಹೋಟೆಲ್‌ಗಳಿಗೆ ಸುಧೀರ್ಘ ಇತಿಹಾಸವಿದೆ. 17ನೇ ಶತಮಾನದಲ್ಲಿ ಮರಾಠ ಯೋಧರು ಮಾಂಸಾಹಾರವನ್ನು ಬಯಸಿದಾಗ ತೆರೆದ ಹೋಟೆಲ್ ಇದು ಎನ್ನಲಾಗಿದೆ. ಸ್ಥಳೀಯರ ಪ್ರಕಾರ, ಕಾಟನ್‌ಪೇಟೆಯಲ್ಲಿರುವ ಎಸ್‌ಜಿ ರಾವ್ ಮಿಲಿಟರಿ ಹೋಟೆಲ್ ನಗರದ ಮೊದಲ ಮಿಲಿಟರಿ ಹೋಟೆಲ್ ಆಗಿದ್ದು, ಇದನ್ನು 1908ರಲ್ಲಿ ಮರಾಠರಾದ ಎಸ್.ಗೋವಿಂದ ರಾವ್ ರನ್ನೋರ್ ಸ್ಥಾಪಿಸಿದರು ಎನ್ನಲಾಗುತ್ತದೆ.
ನೂರಾರು ವರ್ಷಗಳ ಹಿಂದೆ ಆರಂಭವಾದ ಮಿಲಿಟರಿ ಹೋಟೆಲ್‌ಗಳ ಸೇವೆಗೆ ಸರಿಸಮಾನವಾದ ರುಚಿ ಬೇರೊಂದಿಲ್ಲ. ನೀವು ಈಗಾಗಲೇ ಮಿಲಿಟರಿ ಹೋಟೆಲ್‌ಗಳ ಗ್ರಾಹಕರಾಗಿದ್ದರು ಕೂಡ ಈ ಕೆಳಗಿನ ಹೋಟೆಲ್‌ಗಳ ರುಚಿಯನ್ನು ನೀವು ಸವಿಯಲೇಬೇಕು. ಭೋಜನ ಪ್ರಿಯರಿಗಾಗಿ ರುಚಿರುಚಿಯಾದ ನಾನ್ ವೆಜ್ ಖಾದ್ಯಗಳನ್ನು ನೀಡುವ ಬೆಂಗಳೂರಿನ ಮಿಲಿಟರಿ ಹೋಟೆಲ್‌ಗಳ ಪಟ್ಟಿ ಇಲ್ಲಿದೆ.

1. ರಂಗಣ್ಣ ಮಿಲಿಟರಿ ಹೋಟೆಲ್
ರುಚಿ ರುಚಿಯಾದ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಕಾಲ್ ಸೂಪ್, ಇಡ್ಲಿ, ದೋಸೆ ಮತ್ತು ಮಟನ್ ಕೈಮಾವನ್ನು ಸವಿಯಬೇಕೆಂದರೆ ರಂಗಣ್ಣ ಮಿಲಿಟರಿ ಹೋಟೆಲ್‌ಗೆ ಭೇಟಿ ನೀಡಿ. ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಸಾಕು ನೀವು ಕೂಡ ಖಾಯಂ ಗಿರಾಕಿಯಾಗುತ್ತಿರಿ. ನಾನ್‌ವೆಜ್ ಪ್ರಿಯರು ಇಲ್ಲಿ ಊಟ ಮಾಡುವಾಗ ಸ್ವರ್ಗದಲ್ಲಿದ್ದಂತೆ ನಿಮಗೆ ಭಾಸವಾಗುದಂತೂ ಗ್ಯಾರಂಟಿ. ಇಲ್ಲಿನ ಊಟದ ಬಳಿಕ ಕೊನೆಯಲ್ಲಿ ಬಿಸಿ ಬಿಸಿ ಹಬೆಯಾಡುವ ರಸಂ ಕುಡಿಯಲು ಮಾತ್ರ ಮರೆಯದಿರಿ. ಜಯನಗರದ ಏಳನೇ ಬ್ಲಾಕ್‌ನಲ್ಲಿ ಈ ಹೋಟೆಲ್ ಇದ್ದು, ಬೆಳಗ್ಗೆ 7:30ರಿಂದ ಸಂಜೆ 4ಗಂಟೆವರೆಗೆ ತೆರೆದಿರುತ್ತದೆ ಹಾಗೂ ಸಂಜೆ 7 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ತೆರೆದಿರುತ್ತದೆ. ಇನ್ನು ಈ ಹೋಟೆಲ್ ಸೋಮವಾರ ರಜೆ ಇರುತ್ತದೆ.

2.ಎಸ್‌ಜಿಎಸ್ ನಾನ್‌ವೆಜ್ ಗುಂಡು ಪಲಾವ್
ಸುಮಾರು ಮೂರು ದಶಗಳಿಂದ ಗ್ರಾಹಕರಿಗೆ ಅತ್ಯುತ್ತಮವಾದ ಸೇವೆ ನೀಡುತ್ತಿರುವ ಎಸ್‌ಜಿಎಸ್ ನಾನ್‌ವೆಜ್ ಗುಂಡು ಪಲಾವ್‌ಗೆ ನಾನ್ ವೆಜ್‌ಪ್ರಿಯರು ಭೇಟಿ ನೀಡಲೇಬೇಕು. ಬೆಳ್ಳಂಬೆಳಗ್ಗೆಯೇ ಬಿರಿಯಾನಿ ತಿನ್ನಬೇಕು ಎನ್ನುವವರ ಆಸೆ ಇಲ್ಲಿ ಈಡೇರುತ್ತದೆ. ಬೆಳಗ್ಗೆ ಬಹುಬೇಗ ಆರಂಭವಾಗುವ ಈ ಹೋಟೆಲ್ ಬೇಗ ಮುಚ್ಚುತ್ತದೆ ಕೂಡ. ಇನ್ನು ಭಾನುವಾರದ ಸಮಯದಲ್ಲಿ ಜನರಿಂದ ತುಂಬಿ ತುಳುಕುತ್ತಿರುತ್ತದೆ. ಬೆಂಗಳೂರು ನಿವಾಸಿಗಳು ಮಾತ್ರವಲ್ಲದೇ, ಬೆಂಗಳೂರಿನ ಸುತ್ತಮುತ್ತಲಿನ ಊರಿನ ಜನರು ಸಹ ಇಲ್ಲಿನ ರುಚಿ ನೋಡಲು ಬರುತ್ತಾರೆ. ಎಸ್‌ಜಿಎಸ್ ನಾನ್‌ವೆಜ್ ಗುಂಡು ಪಲಾವ್ ಚಿಕನ್ ಬಿರಿಯಾನಿ ಮತ್ತು ಮಟನ್ ಗುಂಡು ಪಲಾವ್‌ಗೆ ಹೆಸರುವಾಸಿಯಾಗಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಈ ಹೋಟೆಲ್ ಇದೆ.

3. ಶಿವಾಜಿ ಮಿಲಿಟರಿ ಹೋಟೆಲ್
ಬೆಂಗಳೂರಿನ ಜನಪ್ರಿಯವಾದ ಹೋಟೆಲ್‌ಗಳಲ್ಲಿ ಶಿವಾಜಿ ಮಿಲಿಟರಿ ಹೋಟೆಲ್ ಕೂಡ ಒಂದು. ಮಟನ್ ಬಿರಿಯಾನಿ, ಮಟನ್ ಡ್ರೈ, ಚಿಕನ್ ಚಾಪ್ಸ್, ಚಿಕನ್ ಬಿರಿಯಾನಿ ಎಲ್ಲವೂ ಇಲ್ಲಿ ರುಚಿಕರವಾಗಿರುತ್ತದೆ. ಆದರೆ ಈ ಹೋಟೆಲ್ ದೊನ್ನೆ ಬಿರಿಯಾನಿಗೆ ಹೆಚ್ಚು ಹೆಸರುವಾಸಿಯಾಗಿದೆ. 1930ರ ಆರಂಭದಲ್ಲಿ ಮಾಂಜಿ ರಾವ್ ಈ ಹೋಟೆಲ್ ಸ್ಥಾಪಿಸಿದರು. ಇಲ್ಲಿ ಮರಾಠ ಪಾಕ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಸದಾ ಜನರಿಂದ ತುಂಬಿ ತುಳುಕುವ ಈ ಹೋಟೆಲ್‌ನಲ್ಲಿ ನೀವು ನಿಮ್ಮ ಖಾದ್ಯ ಪಡೆಯಲು ಕನಿಷ್ಠ 30 ನಿಮಿಷ ಕಾಯಬೇಕು. ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ನೀವು ಈ ಹೋಟೆಲ್‌ಅನ್ನು ಕಾಣಬಹುದು.

4. ನ್ಯೂ ಗೋವಿಂದ್ ರಾವ್ ಮಿಲಿಟರಿ ಹೋಟೆಲ್
ನ್ಯೂ ಗೋವಿಂದ್ ರಾವ್ ಮಿಲಿಟರಿ ಹೋಟೆಲ್ ನಾನ್ ವೆಜ್ ಪ್ರಿಯರ ಪ್ರಮುಖ ಆಯ್ಕೆಗಳಲ್ಲಿ ಒಂದು. 108 ವರ್ಷ ಹಳೆಯದಾದ ಈ ಹೋಟೆಲ್ ಇಡ್ಲಿ, ಕೈಮಾ ಕರಿ ಹಾಗೂ ಮಟನ್ ಪಲಾವ್‌ಗೆ ಹೆಚ್ಚು ಜನಪ್ರಿಯತೆ ಪಡೆದಿದೆ. ಈ ಖಾದ್ಯಗಳನ್ನು ಅರಸಿ ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿನ ಖಾದ್ಯಗಳಲ್ಲಿ ಚಿಲ್ಲಿ ಮತ್ತು ಪೆಪ್ಪರ್ ಅಂಶ ಹೆಚ್ಚಾಗಿರುತ್ತದೆ. ಹೀಗಾಗಿ ನಾಲಿಗೆಗೆ ಹೆಚ್ಚು ರುಚಿಯನ್ನು ಕೊಡುತ್ತದೆ.

5. ನಾಯ್ಡು ಮಿಲಿಟರಿ ಹೋಟೆಲ್
ಮಟನ್ ಪಾಯ, ಮಟನ್ ಫ್ರೈ, ಮಟನ್ ಕೀಮಾ, ಮಟನ್ ಲಿವರ್ ಮತ್ತು ಚಿಕನ್ ಫ್ರೈ ಸೇರಿದಂತೆ ವಿವಿಧ ನಾನ್‌ವೆಜ್ ಖಾದ್ಯಕ್ಕೆ ನಾಯ್ಡು ಮಿಲಿಟರಿ ಹೋಟೆಲ್ ಹೆಸರುವಾಸಿ. ಇಲ್ಲಿನ ಮಟನ್ ಬಿರಿಯಾನಿ ಮತ್ತು ಚಿಕನ್ ಬಿರಿಯಾನಿಯಂತೂ ಗ್ರಾಹಕರ ಮೆಚ್ಚಿನ ಆಯ್ಕೆ. ನಾನ್‌ವೆಜ್ ಪ್ರಿಯರು ಈ ಹೋಟೆಲ್‌ಗೆ ಒಮ್ಮೆ ಭೇಟಿ ನೀಡಲೇಬೇಕು. ಇಲ್ಲಿಗೆ ಬಂದ ಮೇಲೆ ಮಟನ್ ಪೆಪ್ಪರ್, ಮಟನ್ ಕೈಮಾ, ಚಿಕನ್ ಗ್ರೀನ್ ಮಸಾಲಾ ಮತ್ತು ಚಿಕನ್ ಫ್ರೈ ಆರ್ಡರ್ ಮಾಡಲು ಮರೆಯದಿರಿ. ಇಲ್ಲಿ ಕಾಲ್ ಸೂಪ್ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ.
6. ಚಂದೂಸ್ ಮಿಲಿಟರಿ ಹೋಟೆಲ್
ಮಲ್ಲೇಶ್ವರ ಬೆಂಗಳೂರಿನಲ್ಲಿರುವ ಪ್ರಸಿದ್ಧ ಮಿಲಿಟರಿ ಹೋಟೆಲ್‌ಗಳಲ್ಲಿ ಚಂದೂಸ್ ಮಿಲಿಟರಿ ಹೋಟೆಲ್ ಒಂದಾಗಿದೆ. ಮಟನ್ ಚಾಪ್ಸ್, ರಾಗಿ ಮುದ್ದೆ ಮತ್ತು ಪೆಪ್ಪರ್ ಫ್ರೈ ಇಲ್ಲಿನ ಜನಪ್ರಿಯ ಖಾದ್ಯವಾಗಿದ್ದು, ನಾನ್ ವೆಜ್ ಪ್ರಿಯರ ಮೆಚ್ಚಿನ ತಾಣವಾಗಿದೆ. ಇಲ್ಲಿಗೆ ಒಮ್ಮೆ ಭೇಟಿ ನೀಡಿ ಇಲ್ಲಿನ ರುಚಿ ಸವಿದವರು ಮತ್ತೆ ಇಲ್ಲಿನ ಖಾಯಂ ಗಿರಾಕಿಗಳಾಗುತ್ತಾರೆ. ಮಲ್ಲೇಶ್ವರದಲ್ಲಿ ಶಾಪಿಂಗ್ ಮುಗಿಸಿ ಚಂದೂಸ್ ಮಿಲಿಟರಿ ಹೋಟೆಲ್‌ಗೆ ಭೇಟಿ ನೀಡಿ ಒಂದೊಳ್ಳೆ ನಾನ್‌ವೆಜ್ ಊಟ ಸವಿಯಿರಿ.
7. ಗೌಡ್ರು ಮಿಲಿಟರಿ ಹೋಟೆಲ್
ಗೌಡ್ರು ಮಿಲಿಟರಿ ಹೋಟೆಲ್ ಪಕ್ಕಾ ಬೆಂಗಳೂರು ಹಾಗೂ ಮಂಡ್ಯ ಶೈಲಿಯ ನಾಟಿ ಖಾದ್ಯಗಳು ಸಿಗುತ್ತದೆ. ಇಲ್ಲಿನ ಬೋಟಿ ಫ್ರೈ, ಕೈಮಾ, ಚಾಪ್ಸ್ ಮತ್ತು ಮಟನ್ ಬಿರಿಯಾನಿಯನ್ನು ಮಿಸ್ ಮಾಡದೇ ಟೇಸ್ಟ್ ಮಾಡಿ. ನಾಟಿ ಸ್ಟೈಲ್ ಆಹಾರ ಸವಿಯಲು ಅತ್ಯುತ್ತಮ ಸ್ಥಳಗಳಲ್ಲಿ ಗೌಡ್ರು ಮಿಲಿಟರಿ ಒಂದಾಗಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಈ ಹೋಟೆಲ್ ಇರುತ್ತದೆ.
8. ಸಂಗಮ್ ಮಿಲಿಟರಿ ಹೋಟೆಲ್
2004 ರಲ್ಲಿ ಪ್ರಾರಂಭವಾದ ಈ ಹೋಟಲೆ ತನ್ನ ಅಸಾಮಾನ್ಯ ರುಚಿ ಹಾಗೂ ಮಸಾಲೆ ಘಮಕ್ಕೆ ನೂರಾರು ಖಾಯಂ ಗ್ರಾಹಕರನ್ನು ಹೊಂದಿದೆ. ಇಲ್ಲಿ ಸಾಂಪ್ರದಾಯಿಕ ನಾಟಿ ಪಾಕ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಮಟನ್ ಅಥವಾ ಚಿಕನ್ ಸಾರು ಜೊತೆಗೆ ಮುದ್ದೆಯನ್ನು ಇಲ್ಲಿ ಮಿಸ್ ಮಾಡದೇ ಸವಿಯಬೇಕು. ಬೇರೆ ಮಿಲಿಟರಿ ಹೋಟೆಲ್‌ಗೆ ಹೋಲಿಸಿದರೆ ಇಲ್ಲಿ ಬೆಲೆ ಸ್ವಲ್ಪ ಹೆಚ್ಚು ಎನಿಸಬಹುದು ಆದರೆ ಬೆಲೆಗೆ ನ್ಯಾಯವೆನಿಸುವ ಆಹಾರ ಇಲ್ಲಿ ಸಿಗುತ್ತದೆ.












Click it and Unblock the Notifications