ಅಮೆರಿಕಕ್ಕಿಂತ ಭಾರತದಲ್ಲೇ ಜಾಬ್ ಇಂಟರ್ವ್ಯೂವ್ ತುಂಬ ಕಷ್ಟ: ಅರ್ಧ ಸಂಬಳಕ್ಕೆ ಐಟಿ ಉದ್ಯೋಗಿಗಳ ಪರದಾಟ, ಪೋಸ್ಟ್ ವೈರಲ್
ಟೆಕ್ಕಿಯೊಬ್ಬರು ಸೋಶಿಯಲ್ ಮೀಡಿಯಾ ರೆಡ್ಡಿಟ್‌ನಲ್ಲಿ ಮಾಡಿರುವ ಈ ಒಂದು ಪೋಸ್ಟ್ ಇದೀಗ ಐಟಿ ವಲಯದಲ್ಲಿ ದೊಡ್ಡ ಚರ್ಚೆಯನ್ನ ಹುಟ್ಟುಹಾಕಿದೆ ನೋಡಿ. ಅಮೆರಿಕದ ಕಂಪನಿಗಳಿಗೆ ಹೋಲಿಸಿದರೆ ಭಾರತದಲ್ಲಿ ಜಾಬ್ ಇಂಟರ್ವ್ಯೂವ್ ತುಂಬ ಕಷ್ಟವಾಗಿರುತ್ತವೆ ಮತ್ತು ಮಾನಸಿಕ ಒತ್ತಡದಿಂದ ಕೂಡಿರುತ್ತವೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಚ್ಚರಿಯ ವಿಷಯವೆಂದರೆ, ಇಷ್ಟೆಲ್ಲಾ ಕಷ್ಟದ ಇಂಟರ್ವ್ಯೂವ್ ಮೂಲಕ ಆಯ್ಕೆಯಾದರೂ ಸಿಗುವ ವೇತನ ಮಾತ್ರ ಅಮೆರಿಕದ ಹುದ್ದೆಗಳಿಗೆ ಹೋಲಿಸಿದರೆ ಕೇವಲ ಅರ್ಧದಷ್ಟು ಮಾತ್ರ ಎಂಬುದು ಆ ಟೆಕ್ಕಿಯ ವಾದ. ಇದು ಭಾರತದ ಸಂದರ್ಶನ ಪ್ರಕ್ರಿಯೆಗಳ ಬಗ್ಗೆ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ.

ಈ ವೈರಲ್ ಆದ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವಂತೆ, ಅಮೆರಿಕದಲ್ಲಿ ನಡೆಯುವ ಸಂದರ್ಶನಗಳು ಅಭ್ಯರ್ಥಿ ನಿಜವಾದ ಸಮಸ್ಯೆ ಪರಿಹರಿಸುವ ಕೌಶಲ್ಯ ಮತ್ತು ಸಿಸ್ಟಮ್ ಡಿಸೈನ್ ಮೇಲೆ ಹೆಚ್ಚು ಗಮನ ಹರಿಸುತ್ತವೆ. ಇದು ಅಭ್ಯರ್ಥಿಯ ಸಾಮರ್ಥ್ಯವನ್ನ ಅಳೆಯುವ ಒಂದು ಸಹಜ ಗೇಟಿಂಗ್ ಪ್ರಕ್ರಿಯೆಯಾಗಿರುತ್ತದೆ.
ಆದರೆ, ಭಾರತದಲ್ಲಿ ಪರಿಸ್ಥಿತಿ ಸಂಪೂರ್ಣ ಬೇರೆ. ಇಲ್ಲಿನ ಸಂದರ್ಶನಗಳು ಅಭ್ಯರ್ಥಿಗಳನ್ನ ಉದ್ದೇಶಪೂರ್ವಕವಾಗಿಯೇ ಗೊಂದಲಕ್ಕೆ ತಳ್ಳುವ, ಕಠಿಣ ಕೋಡಿಂಗ್ ಸಮಸ್ಯೆಗಳನ್ನ ನೀಡಿ ಒತ್ತಡ ಹೇರುವ ತಂತ್ರಗಳನ್ನ ಅನುಸರಿಸುತ್ತವೆ. ಜೊತೆಗೆ ಅನಗತ್ಯವಾಗಿ ಹಲವು ಸುತ್ತಿನ ಸಂದರ್ಶನಗಳನ್ನ ನಡೆಸಿ ಅಭ್ಯರ್ಥಿಗಳನ್ನು ಹೈರಾಣಾಗಿಸಲಾಗುತ್ತದೆ ಎಂದು ಟೆಕ್ಕಿ ವಿವರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಟೆಕ್ಕಿಯ ಈ ಅಭಿಪ್ರಾಯಕ್ಕೆ ರೆಡ್ಡಿಟ್‌ನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಅನೇಕ ಐಟಿ ಉದ್ಯೋಗಿಗಳು ತಮ್ಮ ಸಂದರ್ಶನದ ಅನುಭವಗಳನ್ನ ಹಂಚಿಕೊಂಡಿದ್ದಾರೆ. ಉದ್ಯೋಗಿಯೊಬ್ಬರು ಪ್ರತಿಕ್ರಿಯಿಸುತ್ತಾ, "ನಾನು ಸ್ಟಾಫ್ ಎಂಜಿನಿಯರ್ ಹುದ್ದೆಗೆ ಸಂದರ್ಶನ ಎದುರಿಸುತ್ತಿದ್ದೆ. ಮೊದಲ ನಾಲ್ಕು ಸುತ್ತುಗಳಲ್ಲಿ ಥೈಲ್ಯಾಂಡ್ ಮೂಲದ ಸಂದರ್ಶಕರು ಅತ್ಯಂತ ಸ್ನೇಹಮಯಿಯಾಗಿ ಮಾತನಾಡಿದರು. ಆದರೆ ಐದನೇ ಸುತ್ತಿನಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಂದರ್ಶನಕ್ಕೆ ಬಂದರು. ಅವರಿಗೆ ನನ್ನ ಜೊತೆ ಮಾತನಾಡಲು ಕನಿಷ್ಠ ಸೌಜನ್ಯವೂ ಇರಲಿಲ್ಲ. ಒಂದು ಗಂಟೆಯ ಸಂದರ್ಶನವನ್ನ ಕೇವಲ 43 ನಿಮಿಷಕ್ಕೆ ಮೊಟಕುಗೊಳಿಸಿದರು. ಭಾರತೀಯ ಸಂದರ್ಶಕರು ಏಕಿಷ್ಟು ಕಠಿಣವಾಗಿರುತ್ತಾರೆ ಎಂಬುದು ಅರ್ಥವಾಗುವುದಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಐಟಿ ಉದ್ಯೋಗಕ್ಕೆ ಲಕ್ಷಾಂತರ ಅರ್ಜಿ
ಭಾರತದಲ್ಲಿ ಸಂದರ್ಶನಗಳು ಇಷ್ಟೊಂದು ಕಠಿಣವಾಗಿರಲು ಪ್ರಮುಖ ಕಾರಣ ಇಲ್ಲಿನ ಪೈಪೋಟಿ. ಒಂದು ಉತ್ತಮ ಐಟಿ ಉದ್ಯೋಗ ಖಾಲಿ ಇದ್ದರೆ, ಅದಕ್ಕೆ ಸಾವಿರಾರು ಅರ್ಜಿಗಳು ಬರುತ್ತವೆ. ಇಷ್ಟೊಂದು ಅರ್ಜಿಗಳನ್ನ ಶೋಧಿಸಲು ಕಂಪನಿಗಳಿಗೆ ಅಗ್ಗದ ಮತ್ತು ವೇಗದ ಫಿಲ್ಟರ್ ಪ್ರಕ್ರಿಯೆ ಬೇಕಿರುತ್ತದೆ.
ಇದಕ್ಕಾಗಿ ಹಿರಿಯ ಅಧಿಕಾರಿಗಳ ಸಮಯ ವ್ಯರ್ಥ ಮಾಡದೆ, ಲೀಟ್‌ಕೋಡ್‌ನಂತಹ ಕಠಿಣ ಸಮಸ್ಯೆಗಳನ್ನ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಇದು ಅಭ್ಯರ್ಥಿಯ ನೈಜ ಕೆಲಸದ ಸಾಮರ್ಥ್ಯವನ್ನು ಅಳೆಯದಿದ್ದರೂ, ಅರ್ಜಿಗಳನ್ನು ಕಡಿತಗೊಳಿಸಲು ಸಹಾಯ ಮಾಡುತ್ತದೆ ಎಂದು ಮತ್ತೊಬ್ಬ ಬಳಕೆದಾರರು ವಿಶ್ಲೇಷಿಸಿದ್ದಾರೆ.
ಭಾರತದಲ್ಲಿ ಉದ್ಯೋಗ ಸಂದರ್ಶನಗಳೆಂದರೆ ಕೇವಲ ಟೆಕ್ನಿಕಲ್ ಜ್ಞಾನದ ಪರೀಕ್ಷೆ ಮಾತ್ರವಲ್ಲ, ಅಭ್ಯರ್ಥಿಯ ಮಾನಸಿಕ ಸ್ಥೈರ್ಯದ ಪರೀಕ್ಷೆಯಾಗಿ ಬದಲಾಗಿದೆ. ವಿದೇಶದಲ್ಲಿ ಉದ್ಯೋಗ ಮಾಡಿದ ಅನುಭವವಿರುವ ಮತ್ತೊಬ್ಬ ವ್ಯಕ್ತಿ, "ನಾನು ಏಷ್ಯಾದಲ್ಲಿ ಕೆಲಸ ಮಾಡಿದ್ದೇನೆ. ಸಂದರ್ಶನ ಮಾಡುವ ವ್ಯಕ್ತಿ ಭಾರತೀಯನಾಗಿದ್ದರೆ ಉದ್ಯೋಗ ಸಿಗುವ ಭರವಸೆಯನ್ನು ಬಿಟ್ಟುಬಿಡಬೇಕು ಎಂಬ ಮಾತಿದೆ.
ಇದೀಗ ನಾನು ಮರಳಿ ಭಾರತಕ್ಕೆ ಬಂದಿದ್ದು, ಉದ್ಯೋಗ ಹುಡುಕಾಟ ತೀವ್ರ ನಿರಾಸೆ ಮೂಡಿಸುತ್ತಿದೆ. ಸಂದರ್ಶನಕ್ಕೆ ಕರೆ ಬರುವುದೇ ಅಪರೂಪ. ಆ ಕರೆಗಳು ಬಂದರೂ ಕೆಲಸ ಗಿಟ್ಟಿಸಿಕೊಳ್ಳುವುದು ಅತಿ ದೊಡ್ಡ ಸವಾಲಾಗಿದೆ" ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಭಾರತದ ಸಂದರ್ಶನ ಸಂಸ್ಕೃತಿಯ ಈ ನ್ಯೂನತೆಗಳ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯವಿದೆ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.


Click it and Unblock the Notifications
