ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಡಗೀತೆ ಕತ್ತರಿ ಪ್ರಯೋಗಕ್ಕೆ ಭುಗಿಲೆದ್ದ ಆಕ್ರೋಶ

By Prasad
|
Google Oneindia Kannada News

ಬೆಂಗಳೂರು, ನ. 11 : ನಮ್ಮ ಅನುಕೂಲಕ್ಕೆ ತಕ್ಕಂತೆ, ಸಮಯಕ್ಕೆ ಹೊಂದಿಕೊಳ್ಳುವಂತೆ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ವಿರಚಿತ ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ'ಯನ್ನು ಮೊಟಕುಗೊಳಿಸುವ ಪ್ರಕ್ರಿಯೆಗೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

'ಕಿಶೋರಚಂದ್ರವಾಣಿ' ಎಂಬ ಕಾವ್ಯನಾಮದಡಿ ಕುವೆಂಪು ಅವರು 1924ರಲ್ಲಿ ರಚಿಸಿದ್ದ, ಗುಂಪುಗುಂಪಾಗಿ, ಸರಿಯಾದ ವೇಗದಲ್ಲಿ, ಸಂಪೂರ್ಣವಾಗಿ ಹಾಡಿದರೆ ಹೆಚ್ಚೂಕಡಿಮೆ ಮೂರುವರೆ ನಿಮಿಷ ತೆಗೆದುಕೊಳ್ಳುವ ನಾಡಗೀತೆಯನ್ನು ತಿದ್ದುಪಡಿ ಮಾಡುವುದು ಎಷ್ಟು ಸರಿ? ಇದರ ಅಗತ್ಯವಿತ್ತೆ?

ಇಂತಹ ವಿವಾದ ಎದ್ದಿರುವುದು ಇದು ಮೊದಲೇನಲ್ಲ. ನಾಡಗೀತೆಯಲ್ಲಿ ಎಲ್ಲ ಕನ್ನಡ ನಾಡಿನ ಎಲ್ಲ ಮಹನೀಯರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಆದರೆ, ದ್ವೈತ ಸಿದ್ಧಾಂತದ ಹರಿಕಾರ ಮಧ್ವಾಚಾರ್ಯರ ಹೆಸರನ್ನು ಬೇಕೆಂತಲೇ ಕೈಬಿಟ್ಟಿದ್ದಾರೆ, ಅದನ್ನೂ ಸೇರಿಸಿ ಎಂದು ಮಾಧ್ವರು ತಕರಾರೆತ್ತಿದ್ದರು. ಕುವೆಂಪು ಅವರ ಮಗ ಪೂರ್ಣಚಂದ್ರ ತೇಜಸ್ವಿ ಅವರು ಸಾಧ್ಯವೇ ಇಲ್ಲ ಎಂದು ಕಡ್ಡಿಮುರಿದಂತೆ ಉತ್ತರಿಸಿದ್ದರು. [ನಾಡಗೀತೆಗೆ ಕತ್ತರಿ]

Students Federation of India opposes trimming state anthem

ಜೀವಪಡೆದ ವಿವಾದ : ಹೊತ್ತಿಕೊಂಡಿದ್ದ ಕಿಡಿ ಅಲ್ಲೇ ತಣ್ಣಗಾಗಿತ್ತು. ಈಗ ನಾಡಗೀತೆಯ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. ಕವಿ 'ನಾಡೋಜ' ಚೆನ್ನವೀರ ಕಣವಿ ಅವರ ನೇತೃತ್ವದಲ್ಲಿ ಅಧ್ಯಯನ ನಡೆಸಿದ ತಂಡ, ನಾಡಗೀತೆಯನ್ನು 1 ನಿಮಿಷ 26 ಸೆಕೆಂಡುಗಳನ್ನು ಹಾಡುವಂತೆ ತಿದ್ದುಪಡಿ ಮಾಡಿ, ಅದನ್ನು ವೈ.ಕೆ. ಮುದ್ದುಕೃಷ್ಣ ಅವರ ಮಧುರ ಕಂಠದಿಂದ ಕೂಡ ಹಾಡಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ.

ಅದರಿಂದ ಯಾವ್ಯಾವ ಸಾಲುಗಳಿಂದ ಯಾವ್ಯಾವ ಮಹನೀಯರನ್ನು ಯಾವ ಆಧಾರದ ಮೇಲೆ ತೆಗೆದಿದ್ದಾರೋ? ಕಾರಣ ಇನ್ನೂ ನಿಗೂಢವಾಗಿದೆ. ಸದ್ಯಕ್ಕೆ, ಈ ಕತ್ತರಿ ಪ್ರಯೋಗ ಪಂಗಡ-ಪಂಗಡಗಳ ನಡುವೆ ವೈಷಮ್ಯ ತಂದಿಡದಿದ್ದರೆ, ಕುವೆಂಪು ಅಭಿಮಾನಿಗಳಲ್ಲಿ ಕಿಚ್ಚುಹಚ್ಚದಿದ್ದರೆ, ನಾಡಿನ ಸಾಮರಸ್ಯ ಕದಡದಿದ್ದರೆ ಸಾಕು! ಸರಕಾರ ಇದರ ಬಗ್ಗೆ ಯಾವುದೇ ನಿಲುವು ಇನ್ನೂ ಪ್ರಕಟಿಸಿಲ್ಲ. [ಸಂಪೂರ್ಣ ನಾಡಗೀತೆ]

ಎಸ್ಎಫ್ಐ ತೀವ್ರ ವಿರೋಧ : ನಾಡಗೀತೆಯ ತಿದ್ದುಪಡಿಗೆ ಭಾರತ ವಿದ್ಯಾರ್ಥಿ ಫೆಡರೇಷನ್‌ನ ಕರ್ನಾಟಕ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶಾಂತಿ ಸೌಹಾರ್ದತೆಯ ಪ್ರತೀಕವಾಗಿರುವ ನಾಡಗೀತೆಯಲ್ಲಿರುವ 'ಸರ್ವ ಜನಾಂಗದ ಶಾಂತಿ ತೋಟ' ಸಾಲನ್ನು ನಾಡಗೀತೆಯಿಂದ ಕತ್ತರಿಸಿದ್ದೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕುವೆಂಪು ಅವರ ಮೂಲ ಆಶಯವೂ ಕೂಡ ಈ ಸಾಲಿನಲ್ಲಿದೆ ಎಂಬುವುದನ್ನು ಸಮಿತಿಯು ಮರೆತಿರುವುದು ಖೇದಕರ. ನಾಡಗೀತೆಯು ವಿದ್ಯಾರ್ಥಿಗಳಲ್ಲಿ ಈ ನೆಲದ ಸಾಂಸ್ಕೃತಿಕ ಹಿರಿಮೆಯನ್ನು ಹಾಗೂ ಸಾಂವಿಧಾನಿಕ ಆಶಯವಾದ ಪ್ರಜೆಗಳಲ್ಲೆರೂ ಸಮಾನರೆನ್ನುವ ತಿಳಿವಳಿಕೆಯನ್ನು ಮೂಡಿಸುವಂತಿದೆ. ಈ ಸಾಲುಗಳನ್ನು ತೆಗೆದು ಹಾಕುವಂತೆ ಮಾಡಿರುವ ಶಿಫಾರಸ್ಸನ್ನು ರಾಜ್ಯ ಸರಕಾರ ಮಾನ್ಯತೆ ನೀಡದೆ ತಿರಸ್ಕರಿಸಬೇಕು ಎಂದು ಒಕ್ಕೊರಲಿನಿಂದ ಕೂಗಿದೆ.

ಈ ವಿಷಯಕ್ಕೆ ರಾಜ್ಯದ ಪ್ರಗತಿಪರ ಬುದ್ದಿಜೀವಿಗಳು ಧ್ವನಿ ಎತ್ತಿ ಒಕ್ಕೊರಲಿನಿಂದ ವಿರೋಧಿಸಬೇಕಿದೆ. ಒಂದು ವೇಳೆ ಈ ಸಾಲುಗಳನ್ನು ಕಡಿತಗೊಳಿಸಲು ಮುಂದಾದರೆ ವಿದ್ಯಾರ್ಥಿಗಳು ಸಾಹಿತಿಗಳು, ಶಿಕ್ಷಕ-ಉಪನ್ಯಾಸಕರು ರಾಜ್ಯ ಸರಕಾರದ ವಿರುದ್ಧ ತೀವ್ರತರನಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ)ನ ರಾಜ್ಯಾಧ್ಯಕ್ಷ ವಿ. ಅಂಬರೀಷ ಮತ್ತು ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಅವರು ಎಚ್ಚರಿಕೆ ನೀಡಿದ್ದಾರೆ.

English summary
Karnataka unit of Students Federation of India has strongly opposed trimming of State anthem (naada geete) by poet Chennaveera Kanavi lead committee. The state anthem was written by Kuvempu in 1924 under pen name Kishorachandravani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X