ತೆರಿಗೆ ವಸೂಲಿಗೆ ಮನೆಮುಂದೆ ಬಂದು ತಮಟೆ ಬಾರಿಸಲು ಬಿಬಿಎಂಪಿ ನಿರ್ಧಾರ
ಬೆಂಗಳೂರು, ಅಕ್ಟೋಬರ್ 15: ತೆರಿಗೆ ಕಟ್ಟದವರ ಮನೆ ಬಾಗಿಲಿಗೆ ಬಂದು ತಮಟೆ ಬಾರಿಸುವ ಮೂಲಕ ತೆರಿಗೆ ಪಾವತಿ ಕುರಿತು ಜಾಗೃತಿ ಮೂಡಿಸಲು ಬಿಬಿಎಂಪಿ ಮುಂದಾಗಿದೆ.
ತೆರಿಗೆ ವ್ಯಾಪ್ತಿಗೆ ಒಳಪಟ್ಟರೂ ತೆರಿಗೆ ಪಾವತಿಸದೆ ಕೋಟ್ಯಂತರ ಹಣವನ್ನು ಇನ್ನೂ ಬಾಕಿ ಉಳಿಸಿಕೊಂಡಿದ್ದಾರೆ, ಆರು ವರ್ಷಗಳ ಹಿಂದೆ ಇದೇ ಮಾದರಿಯಲ್ಲಿ ತೆರಿಗೆ ಪಾವತಿಸದವರ ಮನೆ ಮುಂದೆ ಹೋಗಿ ತಮಟೆ ಬಾರಿಸುವ ಮೂಲಕ ತೆರಿಗೆ ಪಾವತಿಸುವಂತೆ ಸೂಚನೆ ನೀಡಲಾಗಿತ್ತು.
ಬಿಬಿಎಂಪಿಯು ನೀಡಿದ ಗಡುವಿನೊಳಗೆ ತೆರಿಗೆ ಪಾವತಿಸಿದವರಿಗೆ ಶೇ.5ರಷ್ಟು ರಿಯಾಯ್ತಿಯನ್ನು ಘೋಷಿಸಿತ್ತು. ಆದರೂ ಕೆಲವರು ತೆರಿಗೆ ಪಾವತಿಸಿಲ್ಲ. ಈ ಸಾಲಿನಲ್ಲಿ ಬಿಬಿಎಂಪಿ 1904 ಕೋಟಿ ರೂ ಆಸ್ತಿ ತೆರಿಗೆ ಸಂಗ್ರಹಿಸಿದ್ದು, 14.17 ಲಕ್ಷ ಆಸ್ತಿದಾರರು ತೆರಿಗೆ ಪಾವತಿಸಿದ್ದಾರೆ.

ಇನ್ನೂ 5 ಲಕ್ಷ ಆಸ್ತಿಗಳಿಂದ ತೆರಿಗೆ ಪಾವತಿಯಾಗಬೇಕಿದೆ. ಒಂದು ಕೋಟಿ ರೂಗೂ ಹೆಚ್ಚಿನ ತೆರಿಗೆ ಉಳಿಸಿಕೊಂಡವರ ಸಂಖ್ಯೆಯೇ ಹೆಚ್ಚಿದೆ. ಅದರಿಂದ ಬಿಬಿಎಂಪಿಗೆ ನಷ್ಟ ಉಂಟಾಗಿದ್ದು, ಸಂಗ್ರಹಿಸುವ ಸಲುವಾಗಿ ತಮಟೆ ಚಳವಳಿಯನ್ನು ಆಯೋಜಿಸಿದೆ.
ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ಅಡಿಯಲ್ಲಿ ಹೆಚ್ಚಿನವರು ತಪ್ಪು ಮಾಹಿತಿ ನೀಡಿದ್ದಾರೆ. ಈ ಕುರಿತು ದೂರು ಬಂದಿರುವ ಹಿನ್ನೆಲೆಯಲ್ಲಿ 97 ಬೃಹತ್ ಟೆಕ್‌ಪಾರ್ಕ್, ಮಾಲ್ ಹಾಗೂ ವಾಣಿಜ್ಯ ಕಟ್ಟಡಗಳನ್ನು ಟೋಟಲ್ ಸ್ಟೇಷನ್ ಸರ್ವೆಗೆ ಒಳಪಡಿಸಲಾಗಿದೆ.












Click it and Unblock the Notifications