ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ, 8 ರೈಲುಗಳ ಸಂಚಾರ ರದ್ದು
ಬೆಂಗಳೂರು, ಜು.2: ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ 8 ರೈಲುಗಳ ಸಂಚಾರ ಸ್ಥಗಿತಗೊಂಡ ಘಟನೆ ಸೋಮವಾರ ನಡೆದಿದೆ.
ಹಾಗೆಯೇ ನಾಲ್ಕು ಟ್ರಿಪ್ಗಳನ್ನು ಕ್ಯಾನ್ಸಲ್ ಮಾಡಲಾಗಿತ್ತು. ನಾಯಂಡಹಳ್ಳಿ-ಬೈಯಪ್ಪನಹಳ್ಳಿ ಮಧ್ಯೆ ಸಂಚರಿಸುವ ಮೆಟ್ರೋ ರೈಲಿನಲ್ಲಿ ಸೋಮವಾರ ಕಂಡು ಬಂದ ತಾಂತ್ರಿಕ ದೋಷದಿಂದಾಗಿ ಪ್ರಯಾಣಿಕರು ತೊಂದರೆಗೆ ಒಳಗಾದರು. ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ಸಾಗುತ್ತಿದ್ದ ಆರು ಬೋಗಿಗಳ ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.
ಮೆಟ್ರೋ ಸ್ಮಾರ್ಟ್ಕಾರ್ಡ್ಗೆ ಡಿಮ್ಯಾಂಡೋ ಡಿಮ್ಯಾಂಡು, ಪ್ರಯಾಣಿಕರೂ ಹೆಚ್ಚಳ
ಹಾಗಾಗಿ ಮೆಟ್ರೋ ರೈಲನ್ನು ಟ್ರಿನಿಟಿ ನಿಲ್ದಾಣದಲ್ಲಿ ನಿಲ್ಲಿಸಿ ಅಲ್ಲಿಯೇ ಪ್ರಯಾಣಿಕರನ್ನು ಇಳಿಸಲಾಯಿತು. ಎಂಟು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದ ನಡುವೆ ನಾಲ್ಕು ಟ್ರಿಪ್ ರೈಲು ಸಂಚಾರವನ್ನು ರದ್ದುಪಡಿಸಲಾಗಿತ್ತು.
ವಿಧಾನಸೌಧ ಸಮೀಪದ ಡಾ. ಬಿ.ಆರ್. ಅಂಬೇಸ್ಕರ್ ಮೆಟ್ರೋ ನಿಲ್ದಾಣದಲ್ಲಿಯೇ ದೋಷ ಕಾಣಿಸಿಕೊಂಡಿತ್ತು. ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮಾರ್ಗವಾಗಿ ಟ್ರಿನಿಟಿ ಮೆಟ್ರೋ ನಿಲ್ದಾಣದ ಕಡೆಗೆ ಸಾಗುವಾಗ ಪದೇ ಪದೇ ದೋಷ ಕಂಡುಬರುತ್ತಿತ್ತು ಹಾಗಾಗಿ ಪ್ರಯಾಣಿಕರನ್ನು ಟ್ರಿನಿಟಿ ನಿಲ್ದಾಣದಲ್ಲಿಯೇ ಇಳಿಸಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.