ಜಾತಿ, ಧರ್ಮದ ಹೆಸರಲ್ಲಿ ದ್ವೇಷ ಹುಟ್ಟುಹಾಕುವ ಶಕ್ತಿಗಳಿಗೆ ಮಹತ್ವ ನೀಡಬಾರದು: ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದೇಕೆ?
ಬೆಂಗಳೂರು, ಜೂನ್ 29: ನಾವೆಲ್ಲಾರೂ ವಿವಿಧ ಧರ್ಮ, ಜಾತಿಗೆ ಸೇರಿದ್ದರೂ ನಾವೆಲ್ಲ ಮನುಷ್ಯರು. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಕರೆ ನೀಡಿದರು.
ಇಂದು ಬಕ್ರೀದ್ ಹಬ್ಬದ ಅಂಗವಾಗಿ ಸಿಎಂ ಸಿದ್ದರಾಮಯ್ಯ ಅವರು ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮ ನಮ್ಮಲ್ಲೇ ದ್ವೇಷ ಹುಟ್ಟುಹಾಕುವ ಅನೇಕ ಶಕ್ತಿಗಳಿವೆ. ಆ ಶಕ್ತಿಗಳು ಉದ್ದೇಶಪೂರ್ವಕವಾಗಿಯೇ ಇದನ್ನು ಮಾಡುತ್ತವೆ. ಅದಕ್ಕೆ ನಾವು ಸೊಪ್ಪು ಹಾಕುವುದಾಗಲಿ, ಮಹತ್ವ ನೀಡುವುದಾಗಲಿ ಮಾಡಬಾರದು ಎಂದರು.

ಮನುಷ್ಯರು ಪ್ರೀತಿ, ವಿಶ್ವಾಸದಿಂದ ಮನುಷ್ಯರಂತೆ ಬದುಕುವ ವಾತಾವರಣ ನಿರ್ಮಾಣ ಮಾಡಬೇಕಿದೆ. ರಾಜ್ಯದ ಅಭಿವೃದ್ಧಿಯ ಜೊತೆಗೆ ಜನತೆಯೂ ಅಭಿವೃದ್ಧಿ ಆಗಬೇಕು. ದೇವರು ಎಲ್ಲರಿಗೂ ಸದ್ಭುದ್ದಿ ನೀಡಿ ಮನುಷ್ಯರಾಗಿ ಬಾಳುವ ಗುಣವನ್ನು ನೀಡಲಿ ಎಂದು ಪ್ರಾರ್ಥನೆ ಮಾಡಿದರು.
ಬಕ್ರೀದ್ ಹಬ್ಬ ತ್ಯಾಗದ ಸಂಕೇತ
ಹಾಗೆಯೇ ಇದೇ ವೇಳೆ ಅವರು ರಾಜ್ಯದ ಮುಸಲ್ಮಾನ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಬಕ್ರೀದ್ ಹಬ್ಬ ತ್ಯಾಗದ ಸಂಕೇತವಾಗಿದೆ. ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿರುವುದಾಗಿ ತಿಳಿಸಿದರು.
ಬಳ್ಳಾರಿಯಲ್ಲಿ ಬ್ರಕ್ರೀದ್ ಹಬ್ಬದ ಆಚರಣೆ
ಅದೇ ರೀತಿ ಬ್ರಕ್ರೀದ್ ಹಬ್ಬವನ್ನ ಗಣಿನಾಡು ಬಳ್ಳಾರಿಯಲ್ಲಿ ಮುಸ್ಲಿಂ ಭಾಂದವರು ಶ್ರದ್ಧೆ ಭಕ್ತಿಯಿಂದ ಆಚರಿಸಿದರು. ಬಳ್ಳಾರಿಯ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿಂ ಭಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆಯ ಬಳಿಕ ಮುಸ್ಲಿಂ ಭಾಂದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆಯಲ್ಲಿ ಸಚಿವ ನಾಗೇಂದ್ರ ಅವರು ಕೂಡ ಬಿಳಿ ಟೋಪಿಯನ್ನು ಧರಿಸಿದ್ದು ವಿಶೇಷವಾಗಿತ್ತು .
ಅಲ್ಲದೆ ಸಚಿವ ನಾಗೇಂದ್ರ ಅವರು ಮುಸ್ಲಿಂ ಭಾಂದವರಿಗೆ ಶುಭಾಶಯ ಕೋರಿ ಗಮನ ಸೆಳೆದರು. ಇನ್ನು ಸಾಮೂಹಿಕ ಪ್ರಾರ್ಥನೆಯಲ್ಲಿ ಮಕ್ಕಳು ಕೂಡ ಭಾಗಿಯಾಗಿ ನಮಾಜ್ ಮಾಡಿದರು. ಹಾಗೆಯೇ ಬಕ್ರಿದ್ ಹಬ್ಬದ ಹಿನ್ನೆಲೆ ಈದ್ಗಾ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಒದಗಿಸಲಾಗಿತ್ತು.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ
ಇನ್ನು ಇಂದು ಬಕ್ರೀದ್ ಹಬ್ಬದ ನಿಮಿತ್ತವಾಗಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ನಮಾಝ್ ಮಾಡುವುದರ ಮೂಲಕ ತಮ್ಮ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದರು.












Click it and Unblock the Notifications