ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್: ನಟಿ ಸಂಜನಾ ಗಲ್ರಾನಿಗೆ ಮತ್ತೆ ಬಿಗ್ ಶಾಕ್
ಬೆಂಗಳೂರು, ಜನವರಿ 11: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ನಿಟ್ಟುಸಿರು ಬಿಟ್ಟಿದ್ದ ಕನ್ನಡ ಚಿತ್ರರಂಗದ ನಟಿ ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ ಎದುರಾಗಿದೆ. 2020ರಲ್ಲಿ ನಡೆದ ಪ್ರಕರಣ ಮತ್ತೆ ಮರುಜೀವ ಪಡೆದುಕೊಳ್ಳುತ್ತಿದ್ದು, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಬೆಂಗಳೂರು ನಗರ ಪೊಲೀಸರು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಾದಕ ವಸ್ತು ಪ್ರಕರಣದಲ್ಲಿ ಕನ್ನಡದ ನಟಿ ಸಂಜನಾ ಗಲ್ರಾನಿ ವಿರುದ್ಧ ಆರೋಪ ಕೇಳಿಬಂದಿತ್ತು. ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದರು. ಸುಮಾರು ನಾಲ್ಕು ತಿಂಗಳುಗಳ ಕಾಲ ಸಂಜನಾ ಗಲ್ರಾನಿ ಈ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದರು.

ನಾಲ್ಕು ತಿಂಗಳು ಜೈಲುವಾಸದ ಬಳಿಕ ಕರ್ನಾಟಕದ ಹೈ ಕೋರ್ಟ್ ನಟಿ ಸಂಜನಾ ಗಲ್ರಾನಿಗೆ ಜಾಮೀನು ಮಂಜೂರು ಮಾಡಿತ್ತು. ಅನಾರೋಗ್ಯ ಹಿನ್ನೆಲೆಯಲ್ಲಿ ಜಾಮೀನು ಪಡೆದಿದ್ದ ಸಂಜನಾ ಗಲ್ರಾನಿ ತನ್ನ ಮೇಲಿನ ಪ್ರಕರಣವನ್ನು ರದ್ದು ಮಾಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ಹೈಕೋರ್ಟ್ ಅವರ ಮೇಲಿದ್ದ ಎಫ್‌ಐಆರ್‌ರನ್ನು ರದ್ದು ಗೊಳಿಸಿತ್ತು.
ಆದರೆ ಇದೀಗ ಪ್ರಕರಣ ಮತ್ತೆ ಮುನ್ನೆಲೆಗೆ ಬರುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಬೆಂಗಳೂರು ನಗರ ಪೊಲೀಸರು ಮುಂದಾಗಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿಕೆ ನೀಡಿದ್ದಾರೆ.

ಜೈಲಿನಿಂದ ಹೊರ ಬಂದ ಬಳಿಕ ವೈಯಕ್ತಿಕ ಜೀವನದಲ್ಲಿ ಬ್ಯೂಸಿಯಾಗಿರುವ ನಟಿ ಸಂಜನಾ ಗಲ್ರಾನಿ ಸದ್ಯ ತಮ್ಮ ಪತಿ ಹಾಗೂ ಮಗನೊಂದಿಗೆ ಸಮಯ ಕಳೆಯುತ್ತಿದ್ದಾರೆ. ಆದರೆ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿರುವುದು ಮತ್ತೆ ನಟಿಯ ಜೀವನದಲ್ಲಿ ಆತಂಕ ಆವರಿಸಿದೆ.
ಸದ್ಯ ಹೈಕೋರ್ಟ್ ಆದೇಶದ ಪ್ರತಿ ಪಡೆದುಕೊಂಡಿರುವ ಪೊಲೀಸ್ ಅಧಿಕಾರಿಗಳು, ಹಿಂದಿನ ತನಿಖೆ ವೇಳೆ ಆಗಿರುವ ಪ್ರಮುಖ ಲೋಪದೋಷದ ಬಗ್ಗೆ ಗಮನ ಹರಿಸಿದ್ದು, ಪ್ರಕರಣದ ತನಿಖಾಧಿಕಾರಿ ಮರು ಪರಿಶೀಲನೆ ಆರಂಭಿಸಿದ್ದಾರೆ. ಇನ್ನು ಸುಪ್ರೀಂ ಕೋರ್ಟ್ ಪ್ರಕರಣ ಸಂಬಂಧ ಎಸ್‌ಎಲ್‌ಪಿ ಸಲ್ಲಿಕೆ ಮಾಡಲು ಅಂತಿಮ ಹಂತದ ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿದೆ.












Click it and Unblock the Notifications