ಬೆಂಗಳೂರಿಗೆ ಬಂತು ರೊಬೊಟಿಕ್ ಯಂತ್ರ! ರಾಜಕಾಲುವೆ ಸ್ವಚ್ಛತೆ ಬಳಕೆ, ಮುಂದೆ ಪ್ಲ್ಯಾನ್ ಏನು?
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಜಕಾಲುವೆ ಹೂಳು ತುಂಬಿ ಮಳೆ ಬಂದಾಗ ಪ್ರವಾಹದಂತಹ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ಹೂಳು ತೆಗೆಯಲು ಸಾಕಷ್ಟು ಸಮಯ ಆಗುತ್ತಿತ್ತು. ಇದೀಗ ಅದರ ನಿವಾರಣೆಗಾಗಿ ರೊಬೊಟಿಕ್ ಯಂತ್ರ ಬೆಂಗಳೂರಿಗೆ ಆಗಮಿಸಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ರಾಜಕಾಲುವೆಯ ಹೂಳು ತೆರವುಗೊಳಿಸುವ ಯಂತ್ರದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ ಅವರು ಮಾತನಾಡಿದರು.ಲೇಔಟ್‌ನಲ್ಲಿ ಸೂಪರ್ ಸೆಕ್ಷನ್ ರೊಬೊಟಿಕ್ ಯಂತ್ರದ ಮೂಲಕ ರಾಜಕಾಲುವೆಯಲ್ಲಿ ಹೂಳು ತೆರವುಗೊಳಿಸುವ ಪ್ರಾಯೋಗಿಕ ಕಾರ್ಯ ನಡೆಸಲಾಗಿದೆ. ಇದರ ಪ್ರಗತಿ ಪರಿಶೀಲಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು, ಯಂತ್ರವು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದಲ್ಲಿ ಅದನ್ನು ಬಳಕೆಗೆ ತರುವಂತೆ ಸೂಚನೆ ನೀಡಿದ್ದಾರೆ.

ಸೂಪರ್ ಸೆಕ್ಷನ್ ರೊಬೊಟಿಕ್ ಯಂತ್ರದ ಮೂಲಕ ರಾಜಕಾಲುವೆಗಳ ಸ್ವಚ್ಛತಾ ಕಾರ್ಯವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಈ ಯಂತ್ರವು ಸಮರ್ಪಕವಾಗಿ ಕೆಲಸ ಮಾಡಿದಲ್ಲಿ, ಅದನ್ನು ಅಳವಡಿಸಿಕೊಂಡು ರಾಜಕಾಲುವೆಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು ಎಂದರು. ಯಂತ್ರದ ಕಾರ್ಯ ವಿಸ್ತರಣೆ ಆಗಿದ್ದೇ ಆದಲ್ಲಿ ರಾಜಕಾಲುವೆ ಹೂಳು ಕಡಿಮೆ ಸಮಯದಲ್ಲಿ ತೆಗೆಯಲು ಸಾಧ್ಯವಾಗಲಿದೆ.
ರಾಜಕಾಲುವೆಯಲ್ಲಿ ಭಾರೀ ಹೂಳು
ಹೆಚ್‌ಎಸ್‌ಆರ್ ಲೇಔಟ್‌ನ ರಾಜಕಾಲುವೆಯಲ್ಲಿ ಸುಮಾರು 6 ಅಡಿ ಅಗಲ ಹಾಗೂ 30 ಅಡಿ ಉದ್ದದ ಪ್ರದೇಶದಲ್ಲಿ 2 ಅಡಿಗೂ ಹೆಚ್ಚು ಪ್ರಮಾಣದ ಹೂಳು ಸಂಗ್ರಹವಾಗಿತ್ತು. ನಿನ್ನೆ ಸುಮಾರು 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸಂಪೂರ್ಣ ಹೂಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹೆಚ್‌ಎಸ್‌ಆರ್ ಲೇಔಟ್ 7ನೇ ಸೆಕ್ಟರ್ 17ನೇ ಕ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶ ರಾಜಕಾಲುವೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರೆ ಪ್ರವಾಹ ಆಗುವುದನ್ನು ತಪ್ಪಿಸಬಹುದಾಗಿದೆ. ಈ ಸಂಬಂಧ ಎಲ್ಲೆಲ್ಲಿ ಹೂಳೆತ್ತಬೇಕು ಪರಿಶೀಲಿಸಿ ತೆರವುಗೊಳಿಸುವ ಕೆಲಸ ಮಾಡಬೇಕೆಂದು ಸೂಚಿಸಿದರು.
ಯಂತ್ರಕ್ಕೆ 30 ಮೀ.ವರೆಗೆ ಸ್ವಚ್ಛಗೊಳಿಸುವ ಸಾಮರ್ಥ್ಯ, ಕಾರ್ಯ ವಿಧಾನ
ಆರ್ಯನ್ ಎಂಬ ಸಂಸ್ಥೆಯ ಸೂಪರ್ ಸೆಕ್ಷನ್ ರೊಬೊಟಿಕ್ ಯಂತ್ರವು ಮುಚ್ಚಿದ ರಾಜಕಾಲುವೆಗಳ ಒಳಭಾಗದಲ್ಲಿ ಕಾರ್ಯನಿರ್ವಹಿಸಿ, ಸುಮಾರು 30 ಮೀಟರ್ ದೂರದವರೆಗೆ ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ. ಯಂತ್ರವನ್ನು ರಾಜಕಾಲುವೆಯೊಳಗೆ ಇಳಿಸಿ, ವೈರ್‌ಲೆಸ್ ರಿಮೋಟ್ ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ. ಯಂತ್ರದಲ್ಲಿರುವ ವ್ಯವಸ್ಥೆಯ ಮೂಲಕ ಹೂಳನ್ನು ಸಡಿಲಗೊಳಿಸಿ, ವ್ಯಾಕ್ಯೂಮ್ ಪೈಪ್ ಮೂಲಕ ಹೀರಿಕೊಳ್ಳಲಾಗುತ್ತದೆ.
8,000 ಲೀ. ಸಂಗ್ರಹಣಾ ಕೆಪಾಸಿಟಿ
ಈ ಯಂತ್ರವು ಒಟ್ಟು 8,000 ಲೀಟರ್ ಸಾಮರ್ಥ್ಯದ ಸಂಗ್ರಹಣಾ ವ್ಯವಸ್ಥೆಯನ್ನು ಹೊಂದಿದ್ದು, ಇದರಲ್ಲಿ 6,000 ಲೀಟರ್ ಹೂಳು/ಕೆಸರು ಹಾಗೂ 2,000 ಲೀಟರ್ ನೀರನ್ನು ಸಂಗ್ರಹಿಸಬಹುದಾಗಿದೆ. ರಾಜಕಾಲುವೆಯಿಂದ ಹೀರಿಕೊಳ್ಳುವ ಹೂಳು ಮತ್ತು ನೀರನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ಇದೆ.
ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ:
ರಾಜಕಾಲುವೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ರೊಬೊಟಿಕ್ ಯಂತ್ರದೊಂದಿಗೆ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಹೊಸ ಪೈಪ್ ಡ್ರೈನ್ ಅಳವಡಿಸಲು ಸೂಚನೆ
ಮಳೆಗಾಲದಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಚ್‌ಎಸ್‌ಆರ್ ಲೇಔಟ್ ಮಾರ್ಗವಾಗಿ ಉಂಟಾಗುವ ಜಲಾವೃತ ಸಮಸ್ಯೆಯನ್ನು ತಡೆಗಟ್ಟುವ ಉದ್ದೇಶದಿಂದ, ಹೊಸದಾಗಿ ಕೈಗೆತ್ತಿಕೊಳ್ಳುತ್ತಿರುವ ಮಳೆನೀರು ಚರಂಡಿ ಕಾಮಗಾರಿಯಲ್ಲಿ ಬಾಕ್ಸ್ ಡ್ರೈನ್ ನಿರ್ಮಿಸುವ ಬದಲು 3 ಮೀಟರ್ ವ್ಯಾಸದ ಪೈಪ್‌ಲೈನ್ ಅಳವಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.


Click it and Unblock the Notifications
