ಕಸ, ರಸ್ತೆ ಗುಂಡಿ, ಇ-ಖಾತಾ ಸಮಸ್ಯೆಗೆ ಕೊನೆ ಹಾಡಲು ಮುಂದಾದ ಪಾಲಿಕೆ: ಶುಕ್ರವಾರ ಫೋನ್ ಇನ್ ಪ್ರೋಗ್ರಾಮ್
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಜನರ ಕುಂದು ಕೊರತೆ ಆಲಿಸಲು ಆಯುಕ್ತರು ಪ್ರತೀ ಶುಕ್ರವಾರ ಫೋನ್-ಇನ್ ಕಾರ್ಯಕ್ರಮಕ್ಕೆ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಉತ್ತರ ನಗರ ಪಾಲಿಕೆಯಲ್ಲಿ ನಾಗರಿಕರ ಸೇವಾ ಸುಧಾರಣೆಗಾಗಿ ಪ್ರತೀ ಶುಕ್ರವಾರ ಫೋನ್-ಇನ್ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದೆ. ವಿಶೇಷವೆಂದರೆ ಈ ಫೋನ್ ಇನ್ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಸ, ತ್ಯಾಜ್ಯ ವಿಲೇವಾರಿ ಸಂಬಂಧ ದೂರುಗಳು ಹೆಚ್ಚಾಗಿ ಬರುತ್ತಿವೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಆಲಿಸುವ ಉದ್ದೇಶದಿಂದ ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರು ಪ್ರತೀ ಶುಕ್ರವಾರ ಸಾರ್ವಜನಿಕರೊಂದಿಗೆ ಫೋನ್-ಇನ್ ಕಾರ್ಯಕ್ರಮ ಆರಂಭಿಸಿದ್ದು, ಈ ವಾರದ ಫೋನ್-ಇನ್ ಕಾರ್ಯಕ್ರಮವು 2026 ರ ನವೆಂಬರ್ 6 ರಂದು (ಶುಕ್ರವಾರ) ಬೆಳಿಗ್ಗೆ 7.00ರಿಂದ 9.00 ಗಂಟೆಯವರೆಗೆ ನಡೆಯಲಿದೆ.

ಈ ಅವಧಿಯಲ್ಲಿ ನಾಗರಿಕರು ರಸ್ತೆ ಗುಂಡಿಗಳು ಹಾಗೂ ದುರಸ್ತಿ ಕಾರ್ಯಗಳು, ಬೀದಿ ದೀಪಗಳ ನಿರ್ವಹಣೆ, ಮನೆಮನೆ ಕಸ ಸಂಗ್ರಹಣೆ ಮತ್ತು ವಿಲೇವಾರಿ, ಅಪಾಯಕಾರಿಯಾದ ಮರಗಳು/ಕೊಂಬೆಗಳ ತೆರವು, ಸೊಳ್ಳೆ ನಿಯಂತ್ರಣ ಕ್ರಮಗಳು, ಬೀದಿ ನಾಯಿಗಳ ನಿಯಂತ್ರಣ, ಉದ್ಯಾನವನಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ, ಅನಧಿಕೃತ ಬ್ಯಾನರ್ ಮತ್ತು ಪೋಸ್ಟರ್ ಗಳ ತೆರವು, ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ನಿವಾರಣೆ, ಇ-ಖಾತಾ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳ ಕುರಿತು ಆಯುಕ್ತರೊಂದಿಗೆ ನೇರವಾಗಿ ಮಾತನಾಡಬಹುದಾಗಿದೆ.
ಪೋರ್ಟಲ್ ನಲ್ಲಿ ಅರ್ಹವಾಲು ದಾಖಲಿಸಿ
ಫೋನ್-ಇನ್ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಎಲ್ಲಾ ಅಹವಾಲುಗಳನ್ನು 'ಸಹಾಯ 2.0' ಪೋರ್ಟಲ್ ನಲ್ಲಿ ದಾಖಲಿಸಿ, ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ತಕ್ಷಣವೇ ಕಳುಹಿಸಲಾಗುತ್ತದೆ. ದೂರು ದಾಖಲಾಗಿರುವ ವಿವರಗಳು ಹಾಗೂ ಸಂಬಂಧಿತ ಅಧಿಕಾರಿಗಳ ಮಾಹಿತಿಯನ್ನು ನಾಗರಿಕರಿಗೆ ಎಸ್.ಎಂ.ಎಸ್ ಮೂಲಕ ತಿಳಿಸಲಾಗುವುದು.
ಸಾರ್ವಜನಿಕರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಮೊಬೈಲ್ / ವಾಟ್ಸಪ್: 9480685705, ಲ್ಯಾಂಡ್‌ಲೈನ್: 080-22975936 / 080-23636671 ಗೆ ಸಂಪರ್ಕಿಸುವಂತೆ ಕೋರಲಾಗಿದೆ.
'ವಾರ್ಡ್ ಒನ್' ಅಭಿಯಾನದ ಪ್ರಗತಿ
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ 'ವಾರ್ಡ್ ಒನ್' ಅಭಿಯಾನದ ಅಂಗವಾಗಿ ಬನ್ನೇರುಘಟ್ಟ ರಸ್ತೆಯಿಂದ ಬೇಗೂರು ಸಂಪರ್ಕಿಸುವ ಕೋಡಿಚಿಕ್ಕನಹಳ್ಳಿ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚುವ ಕಾಮಗಾರಿಯನ್ನು ಪಾಲಿಕೆ ಆಯುಕ್ತರಾದ ಕೆ. ಎನ್. ರಮೇಶ್ ರವರು ಇಂದು ಪರಿಶೀಲನೆ ನಡೆಸಿ, ಈವರೆಗೆ ಮಾಡಿದ ಸಾಧನೆಯ ಮಾಹಿತಿ ಕೊಟ್ಟರು.
ಕೋಡಿಚಿಕ್ಕನಹಳ್ಳಿ ರಸ್ತೆ ಅಭಿವೃದ್ಧಿಗೆ ಸೂಚನೆ
ಬನ್ನೇರುಘಟ್ಟ ರಸ್ತೆಯಿಂದ ಕೋಡಿಚಿಕ್ಕನಹಳ್ಳಿ ಸಂಪರ್ಕ ಕಲ್ಪಿಸುವ ಮಾರ್ಗದ ರಸ್ತೆಯಲ್ಲಿರುವ ಗುಂಡಿಗಳು ಹಾಗೂ ಹಾಳಾಗಿರುವ ರಸ್ತೆ ಭಾಗಗಳನ್ನು ತಕ್ಷಣವೇ ಸರಿಪಡಿಸಿ ವಾಹನ ಸಂಚಾರ ಸುಗಮವಾಗುವಂತೆ ಡಾಂಬರೀಕರಣ ಪೂರ್ಣಗೊಳಿಸಲು ಹಾಗೂ ಪಾದಚಾರಿಗಳ ಹಿತದೃಷ್ಟಿಯಿಂದ ಅಗತ್ಯವಿರುವ ಎರಡೂ ಬದಿಗಳಲ್ಲಿ ಸೇರಿ ಸುಮಾರು 500 ಮೀಟರ್ ದೂರದವರೆಗೆ ಪಾದಚಾರಿ ಮಾರ್ಗ ನಿರ್ಮಿಸಿ, ರಸ್ತೆ ಇಕ್ಕೆಲಗಳನ್ನು ಸುಂದರಗೊಳಿಸಲು ಸೂಚನೆ ನೀಡಿದರು.
ಮುಂದುವರೆದು, ಮಳೆಯ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ರಾಜಕಾಲುವೆ ಹಾಗೂ ಚರಂಡಿಗಳಲ್ಲಿರುವ ಕಟ್ಟಡ ತ್ಯಾಜ್ಯ (ಡೆಬ್ರಿಸ್) ಮತ್ತು ಹೂಳನ್ನು ಕೂಡಲೇ ತೆರವುಗೊಳಿಸುವಂತೆ ಹಾಗೂ ರಸ್ತೆಯ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಸೂಕ್ತ ಚರಂಡಿ ಸಂಪರ್ಕ ಹಾಗೂ ಗ್ರೇಟಿಂಗ್ಸ್ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡಿದರು.
ಶೇ. 80 ರಷ್ಟು ಯಶಸ್ವಿ ಇತ್ಯರ್ಥ
ಒಟ್ಟಾರೆ ಪ್ರಗತಿ ನೋಡುವುದಾದರೆ ನಗರ ಪಾಲಿಕೆಯ 6 ವಿಭಾಗಗಳ 9 ವಾರ್ಡ್‌ಗಳ 56.8 ಕಿ.ಮೀ ರಸ್ತೆಗಳಲ್ಲಿ ಗುರುತಿಸಲಾಗಿದ್ದ ಒಟ್ಟು 2,148 ಸಮಸ್ಯೆಗಳ ಪೈಕಿ ಶೇ. 80 ರಷ್ಟು (1,712 ಸಮಸ್ಯೆಗಳು) ಯಶಸ್ವಿಯಾಗಿ ಇತ್ಯರ್ಥಗೊಂಡಿವೆ.


Click it and Unblock the Notifications
