ವಾಯು ನೆಲೆ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಆ ಕೆಂಪು ದೀಪದ ಅಸಲಿ ಕಥೆ
ಬೆಂಗಳೂರು, ಸೆ. 02: ಜಾಲಹಳ್ಳಿ ವಾಯು ನೆಲೆಯ ಕಾಂಪೌಂಡ್ ಗೋಡೆ ಮೇಲೆ ಕಾಣಿಸಿಕೊಂಡಿರುವ ರೆಡ್ ಲೈಟ್ ಸ್ಥಳೀಯ ಪೊಲೀಸರ ಹಾಗೂ ವಾಯು ನೆಲೆ ಅಧಿಕಾರಿಗಳ ನಿದ್ದೆ ಗೆಡಿಸಿದೆ. ನಲವತ್ತು ದಿನಗಳ ಹಿಂದೆ ಜಾಲಹಳ್ಳಿ ವಾಯು ನೆಲೆಯ ಕಾಂಪೌಂಡ್ ಗೋಡೆ ಮೇಲೆ ಕಾಣಿಸಿದ ಕೆಂಪು ದೀಪ ವಾಯು ನೆಲೆ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿತ್ತು. ಕಳೆದ ಹದಿನೈದು ದಿನಗಳಿಂದ ವಾಯು ನೆಲೆ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ಲೈಟ್‌ನ ಮೂಲ ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಜಾಲಹಳ್ಳಿ ವಾಯು ನೆಲೆ ಮೇಲೆ ಡ್ರೋನ್ ಹಾರಾಟ ಕುರಿತು ಗಂಗಮ್ಮನಗುಡಿ ಪೊಲೀಸರು ಕಳೆದ ಒಂದು ತಿಂಗಳಿನಿಂದ ಸೀಕ್ರೇಟ್ ತನಿಖೆ ನಡೆಸಿದ್ದಾರೆ. ರಹಸ್ಯವಾಗಿ ನಡೆದ ತನಿಖೆಯಲ್ಲಿ ಯಾವುದೇ ಡ್ರೋನ್ ಹಾರಾಟವಾಗಿಲ್ಲ. ಬದಲಿಗೆ ವಿಮಾನದ ಲೈಡ್ ಬ್ಲಿಂಕ್ ಆಗಿರುವುದರ ಪ್ರತಿಬಿಂಬ ಎಂಬ ಸಂಗತಿ ಹೊರ ಬಿದ್ದಿದೆ. ಸದ್ಯಕ್ಕೆ ಜಾಲಹಳ್ಳಿ ವಾಯುನೆಲೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ 40 ದಿನಗಳ ಹಿಂದೆ ವಾಯು ನೆಲೆಯಲ್ಲಿ ಡ್ರೋನ್ ಹಾರಾಡುವಾಗ ಕಾಣುವ ಲೈಟ್ ಕಾಣಿಸಿಕೊಂಡಿತ್ತು. ಭದ್ರತೆಗೆ ನಿಯೋಜಿಸಿದ್ದ ಗಾರ್ಡ್‌ಗಳು ನೀಡಿದ ಮಾಹಿತಿ ಮೇರೆಗೆ ವಾಯುನೆಲೆ ಅಧಿಕಾರಿಗಳು ಆತಂಕಕ್ಕೀಡಾಗಿದ್ದರು. ವಾಯು ನೆಲೆ ಅಧಿಕಾರಿಗಳು ರಾತ್ರಿ ಗಸ್ತು ಮಾಡಿ ವಾಯು ನೆಲೆ ಮೇಲೆ ಬಿದ್ದಿರುವ ಲೈಟ್‌ನ ಮೂಲ ಯಾವುದು? ಖಾಸಗಿ ಏಜೆನ್ಸಿಗಳು ಡ್ರೋನ್ ಬಿಟ್ಟು ವಾಯು ನೆಲೆಯನ್ನು ಚಿತ್ರೀಕರಣ ಮಾಡಿ ಭದ್ರತೆಗೆ ಪೆಟ್ಟು ನೀಡಿದರೇ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಕುರಿತು ಸ್ಥಳೀಯ ಗಂಗಮ್ಮನಗುಡಿ ಪೊಲೀಸರಿಗೆ ದೂರು ನೀಡಿದ್ದರು.

ಕಳೆದ 40 ದಿನಗಳಿಂದ ಗಂಗಮ್ಮನ ಗುಡಿ ಪೊಲೀಸರು ಹಾಗೂ ವಾಯು ನೆಲೆ ಅಧಿಕಾರಿಗಳು ರಹಸ್ಯವಾಗಿ ಗಸ್ತು ತಿರಿಗಿದ್ದಾರೆ. ವಾಯು ನೆಲೆಯಲ್ಲಿ ರಾತ್ರಿ ವೇಳೆ ಕಾಣಿಸಿಕೊಂಡಿದ್ದ ಲೈಟ್ ಮೂಲ ಕುರಿತು ತನಿಖೆ ನಡೆಸಿದ್ದಾರೆ. ಅಕ್ಕ ಪಕ್ಕದ ಅಪಾರ್ಟ್‌ಮೆಂಟ್ ನಿವಾಸಿಗಳ ಮೇಲೆ ನಿಗಾ ವಹಿಸಿ ಶೋಧ ನಡೆಸಿದ್ದಾರೆ. ಆದರೆ ಇಲ್ಲಿಯ ವರೆಗೂ ಆ ರೀತಿಯ ಘಟನೆ ಮತ್ತೆ ಬೆಳಕಿಗೆ ಬಂದಿಲ್ಲ. ಸ್ಥಳೀಯರು ಡ್ರೋನ್ ಓಡಿಸಿರುವ ಬಗ್ಗೆ ಅನೇಕರ ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಆದರೆ ಈವರೆಗೂ ಸ್ಥಳೀಯವಾಗಿ ಡ್ರೋನ್ ಹಾರಿಸಿರುವ ಬಗ್ಗೆ ಯಾವುದೇ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ. ಜುಲೈ ತಿಂಗಳಲ್ಲಿ ವಿಮಾನ ಹಾರಾಟದ ವೇಳೆ ಲೈಟ್ ಬಂದಿರಬಹುದು. ಅದರ ಪ್ರತಿಬಿಂಬ ಕಾಣಿಸಿಕೊಂಡಿರಬಹುದು ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಇದರಿಂದ ಸದ್ಯಕ್ಕೆ ವಾಯುನೆಲೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಡಿಸಿಪಿ ಪ್ರತಿಕ್ರಿಯೆ: ಕಳೆದ ನಲವತ್ತು ದಿನಗಳ ಹಿಂದೆ ಜಾಲಹಳ್ಳಿ ವಾಯು ನೆಲೆಯ ರಾತ್ರಿ ಭದ್ರತಾ ಸಿಬ್ಬಂದಿಯೊಬ್ಬರು "ವಾಯು ನೆಲೆಯ ಕಾಂಪೌಂಡ್ ಗೋಡೆ ಮೇಲೆ ಕೆಂಪು ಬಣ್ಣದ ಲೈಟ್ ಬ್ಲಿಂಕ್ ಆಗಿರುವುದು ಗಮನಿಸಿದ್ದರು. ಅದು ಏನಿರಬಹುದು ಎಂದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ ಕತ್ತಲು ಆಗಿದ್ದರಿಂದ ಸರಿಯಾಗಿ ವೀಕ್ಷಣೆ ಮಾಡಲು ಸಾಧ್ಯವಿಲ್ಲ. ಈ ವಿಚಾರವನ್ನು ಭದ್ರತಾ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದರು. ಯಾವುದೋ ಡ್ರೋನ್ ಹಾರಾಟ ಮಾಡಿರುವ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದರು. ಈ ಕುರಿತು ಸ್ಥಳೀಯ ಗಂಗಮ್ಮನಗುಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಾಯುನೆಲೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಸತತ ಹದಿನೈದು ದಿನಗಳಿಂದ ಸ್ಥಳೀಯ ಪೊಲೀಸರು ಮತ್ತೆ ಆ ಘಟನೆ ಮರುಕಳಿಸಬಹುದೇ ಎಂಬುದರ ಬಗ್ಗೆ ಗಸ್ತು ತಿರುಗಿದ್ದಾರೆ. ಇಲ್ಲಿಯವರೆಗೂ ಆ ಥರ ಕೆಂಪು ಲೈಟ್ ಕಾಣಿಸಿಕೊಂಡಿಲ್ಲ. ಡ್ರೋನ್ ಹಾರಾಟದ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ. ಈ ಕುರಿತು ವಾಯು ನೆಲೆ ಅಧಿಕಾರಿಗಳ ಸಹಕಾರದೊಂದಿಗೆ ಪ್ರತಿ ನಿತ್ಯವೂ ವಾಯು ನೆಲೆಯ ಸುತ್ತ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ಭದ್ರತಾ ವಿಚಾರ ಆಗಿರುವುದರಿಂದ ಪೊಲೀಸರ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧಮೇಂದ್ರ ಮೀನಾ ಅವರು ಸ್ಪಷ್ಟನೆ ನೀಡಿದ್ದಾರೆ.

ಜಾಲಹಳ್ಳಿ ವಾಯು ನೆಲೆ ಮೇಲೆ ಕಣ್ಣ?: ಜಾಲಹಳ್ಳಿ ವಾಯು ನೆಲೆ ದೇಶದ ಭದ್ರತೆಗೆ ಸಂಬಂಧಿಸಿದ್ದು. ಉಗ್ರರು, ಎದುರಾಳಿ ಶತ್ರು ರಾಷ್ಟ್ರಗಳು ಗೂಢಚರ್ಯೆ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಕಳೆದ 40 ದಿನಗಳಿಂದ ರೆಡ್ ಲೈಟ್ ಜಾಲಹಳ್ಳಿ ವಾಯುನೆಲೆ ಅಧಿಕಾರಿಗಳ ನಿದ್ದೆ ಗೆಡಿಸಿದೆ. ಆದರೆ ಪೊಲೀಸರ ತನಿಖೆಯಿಂದ ತಾತ್ಕಾಲಿಕವಾಗಿ ಜಾಲಹಳ್ಳಿ ವಾಯು ನೆಲೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications