ಭಾನುವಾರ ಬೆಂಗಳೂರಿನಲ್ಲಿ ಆರ್‌ಸಿಬಿ & ಡೆಲ್ಲಿ ನಡುವೆ ಹೈ ವೋಲ್ಟೇಜ್ ಪಂದ್ಯ-ವಾಹನ ಸವಾರರು ಗಮನಿಸಬೇಕಾದ ಅಂಶಗಳು
ಬೆಂಗಳೂರು, ಮೇ, 11: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 12) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಗಳು ಕಾದಾಡಲಿವೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಂಚಾರ ಪೊಲೀಸರು ನಗರದಲ್ಲಿ ಸಂಚಾರ ಮಾರ್ಗಗಳನ್ನು ಬದಲಾವಣೆ ಮಾಡಿದ್ದಾರೆ. ಹಾಗಾದರೆ ಎಲ್ಲೆಲ್ಲಿ ಪಾರ್ಕಿಂಗ್ ಹಾಗೂ ಎಲ್ಲೆಲ್ಲಿ ನಿರ್ಬಂಧ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ 12ರಲ್ಲಿ 6 ಗೆದ್ದು, ಉಳಿದ 6ರಲ್ಲಿ ಸೋಲನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ 6ನೇ ಸ್ಥಾನವನ್ನು ಅಲಂಕರಿಸಿದೆ. ಇನ್ನು ಆರ್‌ಸಿಬಿ ಆಡಿರುವ 12 ಪಂದ್ಯಗಳಲ್ಲಿ 5 ಗೆದ್ದು, 7 ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಅಂಕಪಟ್ಟಿಯಲ್ಲಿ 10 ಅಂಕಗಳನ್ನು ಪಡೆಯುವ ಮೂಲಕ 7ನೇ ಸ್ಥಾನದಲ್ಲಿದೆ. ಮೊದಲಿಂದಲೂ ಸೋಲುತ್ತಲೇ ಬಂದಿದ್ದ ಆರ್‌ಸಿಬಿ ಇದೀಗ ಕೊನೇ ಗಳಿಗೆಯಲ್ಲಿ ಸತತವಾಗಿ ಗೆಲುವು ಸಾಧಿಸುತ್ತಲೇ ಬಂದಿದೆ.

ಇನ್ನು ನಾಳೆ ತವರು ಅಂಗಳ ಬೆಂಗಳೂರಿನಲ್ಲಿ ಡೆಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ 13ನೇ ಪಂದ್ಯದಲ್ಲಿ ಸೆಣಸಾಡಲು ಸಜ್ಜಾಗಿದ್ದು, ಗೆಲುವಿನ ನಿರೀಕ್ಷೆಯಲ್ಲಿದೆ. ರಾಯಲ್ ಚಾಲೆಂಜರ್ಸ್ ಮೊದಲಿಗೆ ಕಳಪೆ ಪ್ರದರ್ಶನ ತೋರುವ ಮೂಲಕ ಸೋಲನುಭವಿಸುತ್ತಾ ಬಂದಿತು. ಆದರೆ ಇದೀಗ ಗೆಲುವಿನ ಹಾದಿಗೆ ಮರಳುವ ಮೂಲಕ ಅಭಿಮಾನಿಗಳ ಬೇಸರನ್ನು ಹೋಗಲಾಡಿಸಿ ಮತ್ತಷ್ಟು ಉತ್ಸಾಹದ ಕುತೂಹಲ ಕೆರಳಿಸುವಂತೆ ಮಾಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯಕ್ಕೆ ಮುಂಚಿತವಾಗಿ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಹೊಸ ಸಂಚಾರ ಸಲಹೆಯನ್ನು ನೀಡಿದೆ.
ಮಧ್ಯಾಹ್ನ 3ರಿಂದ ರಾತ್ರಿ 11 ರವರೆಗೆ ನಿಗದಿ ಆಗಿರುವ ಐಪಿಎಲ್ ಕ್ರಿಕೆಟ್ ಪಂದ್ಯದ ಸಮಯದಲ್ಲಿ ವಾಹನಗಳ ಸಂಚಾರವನ್ನು ದಟ್ಟಣೆಯಾಗದಂತೆ ಸುಗಮಗೊಳಿಸಲು ಪರ್ಯಾಯ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿದೆ. ಈ ಕ್ರೀಡಾಂಗಣವು ನಗರದ ಕಬ್ಬನ್ ಪಾರ್ಕ್ ಬಳಿ ಎಂಜಿ ರಸ್ತೆಯಲ್ಲಿದೆ.
ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯ ನಡೆಯುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಕೆಳಗಿನ ಸ್ಥಳಗಳಲಗಲಿ ಯಾವುದೇ ಪಾರ್ಕಿಂಗ್‌ಗೆ ಅನುಮತಿಸಲಾಗುವುದಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಇಲ್ಲಿದೆ ಗಮನಿಸಿ.
ವಾಹನಗಳ ಪಾರ್ಕಿಂಗ್‌ಗೆ ನಿರ್ಬಂಧ: ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಕಬ್ಬನ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ,
ಕಸ್ತೂರಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ಒಳಗಡೆ, ಲ್ಯಾವೆಲ್ಲೆ ರಸ್ತೆ, ವಿಠ್ಠಲ ಮಲ್ಯ ರಸ್ತೆ, ಕಿಂಗ್ಸ್ ರಸ್ತೆ ಮತ್ತು ನೃಪತುಂಗ ರಸ್ತೆಗಳಲ್ಲಿ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿಲ್ಲ.
ಎಲ್ಲೆಲ್ಲಿ ಪಾರ್ಕಿಂಗ್ ಮಾಡಬಹುದು?: ಸೇಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಗ್ರೌಂಡ್, ಯುಬಿ ಸಿಟಿ ಪಾರ್ಕಿಂಗ್ ಸ್ಥಳ, ಬಿಎಂಟಿಸಿ ಟಿಟಿಎಂಸಿ ಶಿವಾಜಿ ನಗರ 1ನೇ ಮಹಡಿ ಮತ್ತು ಹಳೆಯ ಕೆಜಿಐಡಿ ಕಟ್ಟಡ, ಕಿಂಗ್ಸ್ ರಸ್ತೆ (ಕಬ್ಬನ್ ಪಾರ್ಕ್ ಒಳಗೆ) ವಾಹನಗಳನ್ನು ನಿಗಡೆ ಮಾಡಬಹುದಾಗಿದೆ.
ಇನ್ನು ಈ ಸಲಹೆಗಳ ತಕ್ಕಂತೆ ಕ್ರಿಕೆಟ್ ವೀಕ್ಷಣೆಗೆ ಬರುವವರು ಹಾಗೂ ಈ ಮಾರ್ಗಗಳಲ್ಲಿ ಸಂಚರಿಸುವ ವಾಹನ ಸವಾರರು ಸಹಕರಿಸುವಂತೆ ವಿನಂತಿಸಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಕೋರಿದ್ದಾರೆ.












Click it and Unblock the Notifications