ಸಿಡಿ ಸ್ಫೋಟ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಿಡಿ ಗರ್ಲ್ ವೈರಲ್ !
ಬೆಂಗಳೂರು, ಮಾರ್ಚ್ 13: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಇದೊಂದು ಬ್ಲಾಕ್ ಮೇಲ್, ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಆರೋಪಿಸಿ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ, ಅತ್ತ ಸಂತ್ರಸ್ತೆ ಎನ್ನಲಾದ ಯುವತಿ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು ಹೊಸ ತಿರುವು ಪಡೆದುಕೊಂಡಿದೆ. ಒಂದಡೆ ಎಸ್ಐಟಿ ತನಿಖೆ ಆರಂಭಿಸುತ್ತಿದ್ದಂತೆ ಸಂತ್ರಸ್ತೆ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಂತಾಗಿದೆ. ಇನ್ನು ಆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಏನಿದೆ ?
ಸಿಡಿ ಷಡ್ಯಂತ್ರದಲ್ಲಿ ಮಹಾ ನಾಯಕ ಕೈವಾಡ ಇದೆ ಎಂಬ ಆರೋಪ ಕೇಳಿ ಬಂದಿತ್ತು. ಇದು ಭಾರೀ ಚರ್ಚೆಗೆ ನಾಂದಿ ಹಾಡಿತ್ತು. ಇದರ ನಡುವೆ ಎಸ್ಐಟಿ ರಚನೆಯಾಗಿತ್ತು. ಎಸ್ಐಟಿ ಪ್ರಾಥಮಿಕ ವರದಿ ನೀಡುತ್ತಿದ್ದಂತೆ ಅದರ ಅಂಶಗಳನ್ನು ನೋಡಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತನ್ನ ಆಪ್ತ ಮೂಲಕ ಸದಾಶಿವನಗರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಎಫ್‌ಐಆರ್ ದಾಖಲಿಸಿ ಎಸ್ಐಟಿ ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆ ನಿಗೂಢವಾಗಿದ್ದ ಯುವತಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾಳೆ.
ನನಗೆ ಯಾವ ರಾಜಕಾರಣಿಯ ಪರಿಚಯವಿಲ್ಲ. ರಮೇಶ್ ಜಾರಕಿಹೊಳಿ ನನಗೆ ಕೆಲಸ ಕೊಡುವುದಾಗಿ ಮೋಸ ಮಾಡಿದ್ದಾರೆ. ಈ ಸಿಡಿಯನ್ನು ಅವರೇ ಸ್ವತಃ ಬಿಡಗುಡೆ ಮಾಡಿದ್ದಾರೆ. ಇದರಿಂದ ನೊಂದು ನನ್ನ ತಂದೆ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನನ್ನ ಮಾನ ಹರಾಜು ಆಗಿದೆ ಎಂದು ಆರೋಪಿಸಿ ಸಂತ್ರಸ್ತ ಯುವತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾಳೆ. ದಿನೇಶ್ ಕಲ್ಲಹಳ್ಳಿ ಮೊದಲಗೊಂಡು ಯಾವಾಗ ಕೆಲವರ ಕೊರಳಿಗೆ ಸುತ್ತಿಕೊಳ್ಳಲು ಆರಂಭಿಸಿತೋ ಇದೀಗ ಯುವತಿ ಕೂಡ ಅಖಾಡಕ್ಕೆ ಇಳಿಯಲು ಸಜ್ಜಾದಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

ಎಸ್ಐಟಿ ಬಂಧನ ಪ್ರಕ್ರಿಯೆ: ಕೇವಲ ವಿಚಾರಣೆಗೆ ಸೀಮಿತಗೊಂಡಿದ್ದ ಎಸ್ಐಟಿ ತನಿಖೆಗೆ ಇದೀಗ ಅಧಿಕೃತ ಚಾಲನೆ ಸಿಕ್ಕಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ತನಿಖೆ ಚುರುಕು ಮುಟ್ಟಿಸಿದೆ. ಒಂದಡೆ ಎಸ್ಐಟಿ ಬೇಟೆಯಾಡುತ್ತಿದೆ. ಪ್ರಮುಖ ಆರೋಪಿಗಳ ಜಾಡು ಹಿಡಿದು ತನಿಖೆ ಶುರುವಿಟ್ಟುಕೊಂಡಿದೆ. ಎಸ್ಐಟಿ ತನಿಖೆಗೆ ಎದುರಾಗಿದ್ದ ಎಫ್ಐಆರ್ ತೊಡಕು ಇಲ್ಲದಂತಾಗಿದೆ.
ಇದೀಗ ಸಂತ್ರಸ್ತ ಯುವತಿ ದೂರು ಕೊಡಲು ಮುಂದಾದರೆ, ರಮೇಶ್ ಜಾರಕಿಹೊಳಿಯೇ ನನಗೆ ಮೊಸ ಮಾಡಿದರು ಎಂದು ದೂರನ್ನು ಇದೇ ಎಸ್ಐಟಿಗೆ ನೀಡಿದರೆ ಮುಂದೆ ಯಾವ ಬೆಳವಣಿಗೆ ಯಾಗಬಹುದು ಎಂಬುದು ಕುತೂಹಲ ಕೆರಳಿಸಿದೆ. ಸಿಡಿ ಬಿಡುಗಡೆ ಬಳಿಕ ಸಾಮಾಜಿಕ ಜಾಲ ತಾಣದಿಂದ ದೂರ ಉಳಿದಿದ್ದ ಯುವತಿ ಇದೀಗ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಯುವತಿ ಸಾಮಾಜಿಕ ಜಾಲ ತಾಣ ಬೆನ್ನುಬಿದ್ದಿರುವ ಎಸ್ಐಟಿ ತಂಡ ಇದೀಗ ಆಕೆಯನ್ನು ಪತ್ತೆ ಮಾಡುವ ಕಾರ್ಯಕ್ಕೆ ಮುಂದಾಗಿದೆ.












Click it and Unblock the Notifications