ಸ್ವಾವಲಂಬಿ ಬದುಕಿಗೆ ರಾಮಲಿಂಗಾ ರೆಡ್ಡಿ ಸಾಥ್: ಮಂಗಳಮುಖಿಯರು ಮತ್ತು ಮಹಿಳೆಯರಿಗೆ 20 EV ಆಟೋ ಭಾಗ್ಯ
ಬೆಂಗಳೂರು: ಆಟೋ ಚಾಲನಾ ತರಬೇತಿ ಪಡೆದಿದ್ದ 20 ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಉಚಿತವಾಗಿ ಎಲೆಕ್ಟ್ರಿಕ್ ಆಟೋಗಳನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿತರಿಸಿದರು. ಮಹಿಳೆಯರು ಮತ್ತು ಮಂಗಳಮುಖಿರಿಗೆ ಸರ್ಕಾರದಿಂದಲೇ ಸಬ್ಸಿಡಿಯುಕ್ತ ಎಲೆಕ್ಟ್ರಿಕ್ ಆಟೋ ಪಡೆದುಕೊಳ್ಳಲು ಬೇಕಾದ ಸಹಾಯ ಮಾಡಲಾಗುವುದು ಎಂದು ಅವರು ಹೇಳಿದರು.
ನಗರದಲ್ಲಿ ಇಂದು ಭಾನುವಾರ ಬಿ.ಪ್ಯಾಕ್ ಹಾಗೂ ಸಿಜಿಐ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಆಟೋ ವಿತರಿಸಿ ಅವರು ಮಾತನಾಡಿದರು. ಬಿ.ಪ್ಯಾಕ್ ಹಾಗೂ ಸಿಜಿಐ ಸಹಯೋಗದಲ್ಲಿ ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಉಚಿತವಾಗಿ ಆಟೋ ಚಾಲನೆ ತರಬೇತಿ ನೀಡುವ ಜೊತೆಗೆ, ಅವರಿಗೆ ಆರ್ಥಿಕವಾಗಿ ಇನ್ನಷ್ಟು ಅನುಕೂಲ ಮಾಡಿಕೊಡಲು ಉಚಿತವಾಗಿಯೇ ಆಟೋ ವಿತರಿಸುತ್ತಿರುವ ಕಾರ್ಯ ಶ್ಲಾಘಿಸಿದರು.

ಇಂತಹ ತರಬೇತಿ, ಕಾರ್ಯಕ್ರಮಗಳಿಂದ ಸಾಕಷ್ಟು ಮಹಿಳೆಯರು ತಮ್ಮ ಕಾಲಮೇಲೆ ನಿಂತು ಜೀವನ ನಡೆಸುವ ಧೈರ್ಯ ಬೆಳೆಸಿಕೊಳ್ಳುತ್ತಾರೆ. ಸರ್ಕಾರದಿಂದಲೂ ಮಹಿಳೆಯರಿಗೆ ಇ.ವಿ.ಆಟೋ ಖರೀದಿ ವೇಳೆ ಸಬ್ಸಿಡಿ ಒದಗಿಸುವುದು ಹಾಗೂ ಡ್ರೈವಿಂಗ್ ಲೈಸನ್ಸ್ ಮಾಡಿಸುವ ವೇಳೆ ಅವರಿಗೆ ಮೊದಲ ಆದ್ಯತೆ ನೀಡುವಂತೆಯೂ ಸೂಚಿಸಲಾಗುವುದು ಎಂದರು.
10 ಎಲೆಕ್ಟ್ರಿಕ್ ಆಟೋ ಉಚಿತ ವಿತರಣೆ
ನನ್ನ ಸಂಸ್ಥೆಯಿಂದಲೇ10 ಎಲೆಕ್ಟ್ರಿಕ್ ಆಟೋಗಳನ್ನು ಈ ಸಮುದಾಯಕ್ಕೆ ಉಚಿತವಾಗಿ ನೀಡುವುದಾಗಿ ಅವರು ಇದೇ ವೇಳೆ ಘೋಷಿಸಿದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಹೆಚ್ಚುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಉದ್ಯೋಗದಲ್ಲಿದ್ದಾರೆ. ಆಟೋ ಚಾಲನೆ ಕ್ಷೇತ್ರದಲ್ಲಿ ಮಹಿಳೆಯರ ಪ್ರಮಾಣ ಕಡಿಮೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲೂ ಹೆಚ್ಚು ಮಹಿಳೆಯರು ಆಸಕ್ತಿ ತೋರುತ್ತಿರುವುದು ಶ್ಲಾಘನೀಯ. ರಾಜಕೀಯ ಕ್ಷೇತ್ರದಲ್ಲಿಯೇ ಮಹಿಳಾ ಭಾಗವಹಿಸುವಿಕೆ ಕಡಿಮೆ ಎಂದು ತಿಳಿಸಿದರು.
ಪ್ರತಿಭಾನ್ವಿತ ಮಹಿಳೆಯರಿಗೆ ಅವಕಾಶ
ಬಿ.ಪ್ಯಾಕ್ ಸಿಇಒ ರೇವತಿ ಅಶೋಕ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ಅರ್ಥಪೂರ್ಣ ಅವಕಾಶ ಒದಗಿಸುವ ಸಲುವಾಗಿ ಉಚಿತ ಆಟೋ ಚಾಲನ ತರಬೇತಿ ನೀಡುತ್ತಾ ಬರಲಾಗಿದೆ. ಒಂದು ಆಯ್ದ ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಎಲೆಕ್ಟ್ರಿಕ್ ಆಟೋ ನೀಡಲಾಗಿದೆ. ಈ ರೀತಿಯ ಕಾರ್ಯಕ್ರಮಗಳನ್ನು ಎಲ್ಲಾ ಕಾರ್ಪೋರೇಟ್ ವಲಯ ಹಾಗೂ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರಬೇಕು ಎಂದರು.
ಈಗಾಗಲೇ ಬಿ.ಪ್ಯಾಕ್ ವತಿಯಿಂದ 400ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಈ ವರ್ಷದೊಳಗೆ ಸುಮಾರು ಸಾವಿರ ಮಹಿಳೆಯರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ಸಕ್ರಿಯ ಹಾಗೂ ಆಸಕ್ತಿ ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಜೀವನೋಪಾಯ ಕಂಡುಕೊಳ್ಳಲು ಹಾಗೂ ವೃತ್ತಿ ಜೀವನ ಉತ್ತೇಜಿಸಲು ಈ ತರಬೇತಿ ನೀಡುತ್ತಾ ಬಂದಿರುವುದು ಹೆಮ್ಮೆಯ ವಿಷವೆಂದು ಸಿಜಿಐನ ಹಿರಿಯ ಉಪಾಧ್ಯಕ್ಷ ಸುಧೀರ್ ಶರ್ಮಾ ತಿಳಿಸಿದರು.












Click it and Unblock the Notifications