ಬೆಂಗಳೂರಿನ ಐಟಿ ಕೆಲಸ ಬಿಟ್ಟು ಮೈಸೂರಿನಲ್ಲಿ ಸ್ಟಾರ್ಟ್ಅಪ್ ಆರಂಭಿಸಿದ ಯುವಕ: ಈಗ ತಿಂಗಳಿಗೆ ಬರೋಬ್ಬರಿ 1 ಕೋಟಿ ರೂ. ಆದಾಯ
ಬೆಂಗಳೂರಿನ ಟ್ರಾಫಿಕ್, ಒತ್ತಡದ ಬದುಕು ಸಾಕೆನಿಸಿ, ನೆಮ್ಮದಿ ಅರಸಿ ಮೈಸೂರಿಗೆ ಮರಳಿದ ಯುವಕನೊಬ್ಬ ಇಂದು ತಿಂಗಳಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಆದಾಯ ಗಳಿಸುವ ಕಟ್ಟಿದ್ದಾರೆ.
ಹೌದು, ಅವರೇ 'ವೆಲ್ಬಿ' ಸುಸ್ಥಿರ ಉಡುಪು ಬ್ರ್ಯಾಂಡ್‌ನ ಸಂಸ್ಥಾಪಕ ಮತ್ತು ಸಿಇಒ ಸುಪ್ರೀತ್ ಕಶ್ಯಪ್. ಟೈರ್-1 ನಗರಗಳಾದ ಬೆಂಗಳೂರು , ದೆಹಲಿಯಂತಹ ಮಹಾನಗರಗಳಲ್ಲಿಯೇ ಉದ್ಯಮ ಶುರು ಮಾಡಬೇಕು ಹಾಗಿದ್ರೆ ಮಾತ್ರ ಸಕ್ಸಸ್ ಆಗ್ತೀವಿ ಎಂಬ ಟ್ರೆಂಡ್ ನಡುವೆ ಸುಪ್ರೀತ್ ಸ್ವಲ್ಪ ವಿಭಿನ್ನವಾಗಿ ಯೋಚಿಸಿ, ಮೈಸೂರಿನಲ್ಲಿ ಉದ್ಯಮ ಶುರು ಯಶಸ್ವಿಯಾಗಿದ್ದಾರೆ.

ಮೈಸೂರಿನಲ್ಲೇ ಹುಟ್ಟಿ ಬೆಳೆದ 30 ವರ್ಷದ ಸುಪ್ರೀತ್ ಕಶ್ಯಪ್, ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು. 2017ರಲ್ಲಿ ಪದವಿ ಮುಗಿಸಿದ ಬಳಿಕ ಬೆಂಗಳೂರಿನ ಅಕ್ಸೆಂಚರ್ ಕಂಪನಿಯಲ್ಲಿ ಐಟಿ ಉದ್ಯೋಗಕ್ಕೆ ಸೇರಿದರು.
ಒಳ್ಳೆಯ ಸಂಬಳವೇನೋ ಇತ್ತು. ಆದ್ರೆ ಬೆಂಗಳೂರಿನಲ್ಲಿ ಅವರಿಗೆ ನೆಮ್ಮದಿ ಸಿಗಲಿಲ್ಲ. ಟ್ರಾಫಿಕ್, ಜನದಟ್ಟಣೆ ಮತ್ತು ನಿರಂತರ ಒತ್ತಡದಿಂದ ಬೇಸತ್ತ ಅವರು, 2018ರಲ್ಲಿ ಕೆಲಸಕ್ಕೆ ರಿಸೈನ್ ಮಾಡಿ, ತಮ್ಮದೇ ಆದ ಏನಾದರೂ ಹೊಸತನ್ನ ಮೈಸೂರಿನಿಂದಲೇ ಆರಂಭಿಸಲು ನಿರ್ಧರಿಸಿದರು.
ಟೈರ್-2 ನಗರದಲ್ಲಿ ಉದ್ಯೋಗ ಸೃಷ್ಟಿಯ ಕನಸು
2021ರಲ್ಲಿ ಸಾವಯವ ಮತ್ತು ಸುಸ್ಥಿರ ಬಟ್ಟೆಗಳಿಂದ ತಯಾರಾದ 'ವೆಲ್ಬಿ' ಬ್ರ್ಯಾಂಡ್ ಅನ್ನ ಸುಪ್ರೀತ್ ಹುಟ್ಟುಹಾಕಿದರು. "ನಾನು ಐಟಿ ಕ್ಷೇತ್ರದಲ್ಲಿ ಮಾಡುತ್ತಿದ್ದ ಕೆಲಸ ನನಗೆ ಸಂಪೂರ್ಣ ತೃಪ್ತಿ ನೀಡಿರಲಿಲ್ಲ. ಟೈರ್-2, ಟೈರ್-3 ನಗರಗಳು ಹಾಗೂ ಗ್ರಾಮೀಣ ಭಾಗದ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸಬೇಕು, ಅವರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು ಎಂಬುದೇ ನನ್ನ ಮುಖ್ಯ ಉದ್ದೇಶವಾಗಿತ್ತು" ಎನ್ನುತ್ತಾರೆ ಸುಪ್ರೀತ್.
ಪ್ರಸ್ತುತ ಇವರ ಕಂಪನಿಯಲ್ಲಿ 15 ಫುಲ್ ಟೈಮ್ ಉದ್ಯೋಗಿಗಳಿದ್ದು, ನೂಲು ತಯಾರಿಕೆ, ನೇಯ್ಗೆ ಮತ್ತು ಹೊಲಿಗೆ ಕೆಲಸಗಳಲ್ಲಿ 40ಕ್ಕೂ ಹೆಚ್ಚು ಕುಶಲಕರ್ಮಿಗಳು ತೊಡಗಿಸಿಕೊಂಡಿದ್ದಾರೆ.
10 ಲಕ್ಷ ಬಂಡವಾಳದಿಂದ 1 ಕೋಟಿ ರೂ. ಮಾಸಿಕ ಆದಾಯದವರೆಗೆ
ಕೇವಲ 10 ಲಕ್ಷ ರೂಪಾಯಿ ಸ್ವಂತ ಉಳಿತಾಯ ಮತ್ತು ಕುಟುಂಬದವರ ಬೆಂಬಲದೊಂದಿಗೆ ಆರಂಭವಾದ ಈ ಸಂಸ್ಥೆ ಇಂದು ತುಂಬ ದೊಡ್ಡದಾಗಿ ಬೆಳೆದಿದೆ. ಆರಂಭದಲ್ಲಿ ಏಂಜಲ್ ಹೂಡಿಕೆದಾರರಿಂದ ಸುಮಾರು 3 ಕೋಟಿ ರೂಪಾಯಿ ಸಂಗ್ರಹಿಸಿದ ಈ ಕಂಪನಿ, 2025-26ನೇ ಆರ್ಥಿಕ ವರ್ಷದಲ್ಲಿ 6 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸಿದೆ.
ಮೊದಲ ವರ್ಷ ಕೇವಲ 11 ಲಕ್ಷ ರೂಪಾಯಿ ಆದಾಯ ಗಳಿಸಿದ್ದ ವೆಲ್ಬಿ, ಈಗ ತಿಂಗಳಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ಮಾರ್ಚ್ 2027ರ ವೇಳೆಗೆ ವಾರ್ಷಿಕ 15 ರಿಂದ 16 ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿಯನ್ನು ಹೊಂದಿದೆ.
ಆರಂಭಿಕ ಹಂತದಲ್ಲಿ ಮಾಡಿದ ತಪ್ಪುಗಳು
ಸುಪ್ರೀತ್ ಅವರ ಈ ಯಶಸ್ಸಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ವ್ಯವಹಾರದ ಯಾವುದೇ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದ ಅವರು, ಆರಂಭದಲ್ಲಿ ಹಲವು ತಪ್ಪುಗಳನ್ನ ಮಾಡಿದ್ದಾಗಿ ಹೇಳಿದ್ದಾರೆ.
"ಉತ್ಪನ್ನದ ಗುಣಮಟ್ಟಕ್ಕಿಂತ ಫೋಟೋಶೂಟ್‌ಗಳತ್ತ ಹೆಚ್ಚು ಗಮನ ಹರಿಸಿದ್ದು ನನ್ನ ಮೊದಲ ತಪ್ಪು. ವ್ಯಾಪಾರಕ್ಕೆ ಮೊದಲು ಮಾರುಕಟ್ಟೆಗೆ ತಕ್ಕಂತಹ ಉತ್ಪನ್ನ ಮುಖ್ಯ ಎಂಬುದನ್ನು ಆಮೇಲೆ ಅರಿತೆ. ಹಾಗೆಯೇ, ಆರಂಭಿಕ ಹಂತದಲ್ಲಿ ಆದಾಯ ಕಡಿಮೆ ಇದ್ದಾಗ ಹೆಚ್ಚು ಜನರನ್ನ ಕೆಲಸಕ್ಕೆ ತೆಗೆದುಕೊಂಡದ್ದು ಮತ್ತೊಂದು ತಪ್ಪು. ಸರಿಯಾದ ಮಲ್ಟಿ-ಟಾಸ್ಕರ್‌ಗಳನ್ನ ನೇಮಿಸಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಅವರು ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.
ಪ್ರಖ್ಯಾತ ಬ್ರ್ಯಾಂಡ್‌ಗಳಿಂದ ಮೆಚ್ಚುಗೆ
ಇಂದು ವೆಲ್ಬಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿವೆ. ಮೆಟಾ ಮತ್ತು ಝೆರೋದಾದಂತಹ ದೈತ್ಯ ಕಂಪನಿಗಳಿಗೂ ವೆಲ್ಬಿ ಟಿ-ಶರ್ಟ್‌ಗಳನ್ನ ಪೂರೈಸಿದೆ. ಫ್ರಿಡೋ ಸಂಸ್ಥಾಪಕ ಗಣೇಶ್ ಸೋನಾವಣೆ, ಬೌನ್ಸ್ ಸಹ-ಸಂಸ್ಥಾಪಕ ವಿವೇಕಾನಂದ ಹಳ್ಳೇಕೆರೆ ಮುಂತಾದವರು ವೆಲ್ಬಿ ಬಟ್ಟೆಗಳನ್ನ ಮೆಚ್ಚಿಕೊಂಡು ಗ್ರಾಹಕರಾಗಿದ್ದಾರೆ.
ಟ್ರೆಂಡ್‌ಗಳ ಹಿಂದೆ ಓಡದೆ, ಉಸಿರಾಡಲು ಸುಲಭವಾದ ಹಾಗೂ ಆರಾಮದಾಯಕವಾದ ಬಟ್ಟೆಗಳನ್ನ ನೀಡುವುದೇ ವೆಲ್ಬಿ ಉದ್ದೇಶವಾಗಿದೆ. ಶೀಘ್ರದಲ್ಲೇ ಅಮೆರಿಕದ ಅಮೆಜಾನ್‌ನಲ್ಲೂ ಈ ಬ್ರ್ಯಾಂಡ್ ಬಿಡುಗಡೆಯಾಗಲು ಸಜ್ಜಾಗಿದೆ.


Click it and Unblock the Notifications
