ಬೆಂಗಳೂರಿನ ಈ ಭಾಗದಲ್ಲಿ ಕೈಗೆಟುಕುವ ದರಕ್ಕೆ ಸೈಟು, ಖರೀದಿಗೆ ಮುಗಿಬಿದ್ದ ಜನ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಟುಗಳಿಗೆ ಭಾರಿ ಡಿಮ್ಯಾಂಡ್ ಇದೆ. ಬಹುತೇಕ ಏರಿಯಾಗಳಲ್ಲಿ ಭೂಮಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರಿಗೆ ಹೊಂದುವ ಬೆಲೆಗೆ ಸೈಟ್ ಸಿಗುತ್ತಿಲ್ಲ. ಇದಕ್ಕೆ ಪರಿಹಾರ ಎನ್ನುವಂತೆ ಬೆಂಗಳೂರಿನ ಹಲವು ಪ್ರದೇಶಗಳು ಕೂಡ ಭಾರೀ ಡೆವಲಪ್ ಆಗುತ್ತಿದ್ದು, ಸೈಟು ಖರೀದಿದಾರರ ಗಮನ ಈ ಕಡೆಗೆ ವಾಲಿದೆ. ಆದರೆ ಯಾವ ಪ್ರದೇಶದಲ್ಲಿ ಸೈಟು ಖರೀದಿಸುವುದು? ಎಂಬ ಗೊಂದಲವೂ ಇದೆ. ಆದರೆ ನಗರದ ಈ ಭಾಗದಲ್ಲೇ ಸೈಟು ಖರೀದಿ ಜೋರಾಗಿ ನಡೆಯುತ್ತಿದ್ದು, ಕೈಗೆಟಕುವ ದರದಲ್ಲಿ ಆಸ್ತಿ ಖರೀದಿಗೆ ಜನ ಮುಗಿಬಿದಿದ್ದಾರೆ.
ವರ್ಷಗಳು ಕಳೆದಂತೆ ಬೆಂಗಳೂರಿನಲ್ಲಿ ಭೂಮಿ ಖರೀದಿಸುವುದು ದುಬಾರಿಯಾಗುತ್ತಿದೆ. ಆದರೆ ಬೆಂಗಳೂರು ಉತ್ತರ ಭಾಗದಲ್ಲಿರುವ ಕೆಲವು ಪ್ರದೇಶಗಳಲ್ಲಿ ಇನ್ನೂ ಕಡಿಮೆ ಬೆಲೆಗೆ ಪ್ಲಾಟ್‌ಗಳು ಲಭ್ಯವಾಗುತ್ತಿವೆ ಎನ್ನಲಾಗಿದೆ. ಹೆಚ್ಚುತ್ತಿರುವ ಬೇಡಿಕೆ ಮತ್ತು ಹೊಸ ಮೂಲಸೌಕರ್ಯಗಳೊಂದಿಗೆ ಬೆಂಗಳೂರು ಉತ್ತರ ಭಾಗದ ಪ್ರಮುಖ ಪ್ರದೇಶಗಳಾದ ಹೆಣ್ಣೂರು, ಬಾಗಲೂರು, ಕೋಗಿಲು, ದೇವನಹಳ್ಳಿ ಮುಂತಾದ ಪ್ರದೇಶಗಳಲ್ಲಿ ಭೂಮಿಯಲ್ಲಿ ಹೂಡಿಕೆ ಮಾಡಲು ಜನ ಬಯಸುತ್ತಿದ್ದು, ಕೈಗೆಟುಕುವ ದರಕ್ಕೆ ಭೂಮಿ ಸಿಗುತ್ತಿದೆ.

ಕೋವಿಡ್ ನಂತರದ ಅವಧಿಯಲ್ಲಿ, ಕೋರಮಂಗಲ ಮತ್ತು ಇಂದಿರಾನಗರ ಬಳಿಯ ಪ್ರದೇಶಗಳು ಸೇರಿದಂತೆ ಬೆಂಗಳೂರಿನ ಪೂರ್ವ ಮತ್ತು ಮಧ್ಯ ಭಾಗಗಳಲ್ಲಿ ಭೂಮಿಯ ಬೆಲೆಗಳು ಗಗನಕ್ಕೇರಿದ್ದವು. ಇದೀಗ ಹೆಬ್ಬಾಳ ಮತ್ತು ದೇವನಹಳ್ಳಿಯಂತಹ ಉತ್ತರ ಬೆಂಗಳೂರಿನ ಪ್ರದೇಶಗಳಲ್ಲಿ ಭೂಮಿ ದರಗಳು ಈಗೀಗ ಏರಿಕೆಯಾಗುತ್ತಿದ್ದು, ಹೂಡಿಕೆದಾರರ ನೆಚ್ಚಿನ ತಾಣವಾಗುತ್ತಿದೆ.
ಎಷ್ಟಿದೆ ದರ?
ರಿಯಲ್ ಎಸ್ಟೇಟ್ ತಜ್ಞರು ಹೇಳುವ ಪ್ರಕಾರ ಬೆಂಗಳೂರು ಉತ್ತರ ಭಾಗ ಮನೆ ಖರೀದಿದಾರರು ಮತ್ತು ಹೂಡಿಕೆದಾರರನ್ನು ಆಕರ್ಷಿಸುತ್ತಿವೆ. ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿಶೇಷವಾಗಿ ಉತ್ತರದಲ್ಲಿ, ಅಪಾರ್ಟ್‌ಮೆಂಟ್‌ಗಳು ಮತ್ತು ವಿಲ್ಲಾಗಳಿಗಿಂತ ಪ್ಲಾಟ್ ಖರೀದಿ ಹೆಚ್ಚಾಗಿದೆ ಎನ್ನಲಾಗಿದೆ. ದೇವನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ರೇಡ್ ಎ ಡೆವಲಪರ್‌ಗಳ ಪ್ಲಾಟ್ ಯೋಜನೆಗಳು ಪ್ರತಿ ಚದರ ಅಡಿಗೆ ಕನಿಷ್ಠ 7000 ರೂಪಾಯಿಗಳಿಂದ ಪ್ರಾರಂಭವಾಗುತ್ತವೆ. ನಗರದ ಉತ್ತರ ಭಾಗದಲ್ಲಿ ಕೈಗೆಟುಕುವ ದರದ ಪ್ಲಾಟ್‌ಗಳಿಗೆ ದೇವನಹಳ್ಳಿ ಒಂದು ಪ್ರಮುಖ ಸ್ಥಳ ಎಂದು ಹೇಳಲಾಗುತ್ತಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಹಾಗೂ ಮೂಲಸೌಕರ್ಯ ಯೋಜನೆಗಳೊಂದಿಗೆ ಈ ಪ್ರದೇಶವು ಭಾರೀ ಬೆಳವಣಿಗೆ ಕಂಡಿದೆ.

ಹೆಣ್ಣೂರು ಮತ್ತು ಬಾಗಲೂರು ಭಾಗದಲ್ಲಿ ಪ್ರತಿ ಚದರ ಅಡಿಗೆ 6000 ರೂಪಾಯಿಗೆ ಪ್ಲಾಟ್‌ಗಳು ಲಭ್ಯವಿದೆ. ಗ್ರೇಡ್ ಎ ಡೆವಲಪರ್‌ಗಳು ಅಭಿವೃದ್ಧಿಪಡಿಸಿದ ಈ ಸಣ್ಣ ಯೋಜನೆಗಳು ಪ್ರತಿ ಚದರ ಅಡಿಗೆ 4000 ರೂಪಾಯಿಯಿಂದ 5000 ರೂಪಾಯಿಗೆ ಲಭ್ಯವಿದೆ. ನಗರದೊಳಗೇ ಪ್ಲಾಟ್‌ಗಳನ್ನು ಖರೀದಿಸಲು ಬಯಸುವವರಿಗೆ ಹೊರಮಾವು, ಕಲ್ಕೆರೆ ಬೆಸ್ಟ್ ಜಾಗಗಳು ಎಂದು ಸಲಹೆ ನೀಡಿದ್ದಾರೆ. ಹೊರಮಾವು ಮತ್ತು ಕಲ್ಕೆರೆಯಲ್ಲಿ 80ರಿಂದ 90 ಲಕ್ಷ ರೂಪಾಯಿಗೆ ಪ್ಲಾಟ್‌ಗಳು ಲಭ್ಯವಿದೆ ಎಂದು ವರದಿಯಾಗಿದೆ. ದೇವನಹಳ್ಳಿ, ಹೆಣ್ಣೂರು, ಬಾಗಲೂರು ಮತ್ತು ಯಲಹಂಕದ ಹೊರವಲಯಗಳಲ್ಲಿ ಪ್ಲಾಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ಉಪನಗರ ರೈಲು ಜಾಲ, ಪೆರಿಫೆರಲ್ ರಿಂಗ್ ರಸ್ತೆ ಮತ್ತು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (ಎಸ್‌ಟಿಆರ್‌ಆರ್) ಸೇರಿದಂತೆ ನಡೆಯುತ್ತಿರುವ ಮತ್ತು ಮುಂಬರುವ ಮೂಲಸೌಕರ್ಯ ಯೋಜನೆಗಳು ಸಂಪರ್ಕವನ್ನು ಹೆಚ್ಚಿಸುವ ನಿರೀಕ್ಷೆಯಿರುವುದರಿಂದ ಈ ಭಾಗದ ಭೂಮಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಹೇಳಿದ್ದಾರೆ.












Click it and Unblock the Notifications