ತರಕಾರಿ ವ್ಯಾಪಾರಿಗಳ ಕರ್ಕಶ ಮೈಕ್ ವಿರುದ್ಧ ಪೊಲೀಸರ ಸಮರ
ಬೆಂಗಳೂರು, ಅ. 06: ಬೆಳಗಾದರೆ ಸಾಕು ವಸತಿ ಪ್ರದೇಶದಲ್ಲಿ ಐದು ನಿಮಿಷ ನೆಮ್ಮದಿಯಾಗಿ ಇರೋಕೆ ಆಗಲ್ಲ. ಮೈಕ್ (ಮೆಗಾ ಪೋನ್ ) ಬಳಿಸಿ ಕರ್ಕಶ ದನಿಯಲ್ಲಿ 'ಈರುಳ್ಳಿ, ಬೆಳ್ಳುಳ್ಳಿ, ಸೊಪ್ಪು ತರಕಾರಿ' ಅಂತ ಕೇಳಿ ಬರುವ ಕೂಗು ಕೇಳಲಾಗದೇ ಜನರು ರೋಸಿ ಹೋಗಿ ಪೊಲೀಸರಿಗೆ ದೂರು ನೀಡುತ್ತಿದ್ದಾರೆ. ಸಾರ್ವಜನಿಕರ ದೂರುಗಳು ಹೆಚ್ಚಾದ ಬೆನ್ನಲ್ಲೇ ವಸತಿ ಪ್ರದೇಶಗಳಲ್ಲಿ ಮೆಗಾ ಪೋನ್ ಬಳಿಸಿ ಕರ್ಕಶ ಶಬ್ಧ ಮಾಡುತ್ತಿದ್ದ ತರಕಾರಿ ವ್ಯಾಪಾರಿಗಳ ವಿರುದ್ಧ ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.
Recommended Video
ಇದು ವಸತಿ ಪ್ರದೇಶಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಕರ್ಕಶ ಶಬ್ಧ ಮಾಡುವ ತರಕಾರಿ ವ್ಯಾಪಾರಿಗಳಿಗೆ ಪೂರ್ವ ವಿಭಾಗದ ಪೊಲೀಸರು ನೀಡಿರುವ ಮೊದಲ ಎಚ್ಚರಿಕೆ. ತರಕಾರಿ ಮಾರಲು ಧ್ವನಿ ವರ್ಧಕ ಬಳಿಸಿ ಕೂಗಿ ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗಳಿಗೆ ಅಡಚಣೆ ಉಂಟು ಮಾಡಿದರೆ ಕರ್ಕಶ ಸದ್ದು ಮಾಡುವ ಧ್ವನಿವರ್ಧಕಗಳು ಪೊಲೀಸ್ ಠಾಣೆ ಸೇರಲಿವೆ. ಹೌದು ವಸತಿ ಪ್ರದೇಶದಲ್ಲಿ ಧ್ವನಿವರ್ಧಕ ಬಳಿಸಿ ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗೆ ಅಡಚಣೆ ಉಂಟು ಮಾಡುತ್ತಿದ್ದ ತರಕಾರಿ ವ್ಯಾಪಾರಿಗಳ ವಿರುದ್ಧ ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಮೊದಲ ದಿನವೇ ಹದಿನೈದು ತರಕಾರಿ ವ್ಯಾಪಾರಿಗಳ ಕರ್ಕಶ ಧ್ವನಿ ವರ್ಧಕಗಳನ್ನು ಜಪ್ತಿ ಮಾಡಿದ್ದಾರೆ. ಬಳಿಕ ಬುದ್ಧಿವಾದ ಹೇಳಿ ವಾಪಸು ನೀಡಿ ಕಳುಹಿಸಲಾಗಿದೆ.
ಬೆಳಗ್ಗೆ ಸೂರ್ಯ ಉದಯಿಸುತ್ತಿದ್ದಂತೆ ವಸತಿ ಪ್ರದೇಶಗಳಲ್ಲಿ ತರಕಾರಿ ವ್ಯಾಪಾರಿಗಳು ಮೈಕ್ ಬಳಿಸಿ ತರಕಾರಿ ಬಗ್ಗೆ ಪ್ರಕಟಣೆ ನೀಡುವುದು ಸಾಮಾನ್ಯ. ಈ ಧ್ವನಿಯಿಂದ ವೃದ್ಧರಿಗೆ ಹಾಗೂ ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗೆ ಕಿರಿಕಿರಿ ಉಂಟು ಆಗುತ್ತಿರುವ ಬಗ್ಗೆ ಪೊಲೀಸರಿಗೆ ದೂರುಗಳು ಸಲ್ಲಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಪೂರ್ವ ವಿಭಾಗದ ಫುಲಿಕೇಶಿನಗರ, ಹಟ್ಸನ್ ರಸ್ತೆ, ವ್ಹೀಲರ್ಸ್ ರಸ್ತೆಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು ಹದಿನೈದು ತರಕಾರಿ ವ್ಯಾಪಾರಿಗಳ ಮೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ರೀತಿಯಲ್ಲಿ ಮೈಕ್ ಬಳಿಸಿ ಕೂಗದಂತೆ ತಿಳುವಳಿಕೆ ನೀಡಲಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು, ತರಕಾರಿ ವ್ಯಾಪಾರಿಗಳು ಬದುಕಿಗಾಗಿ ವ್ಯಾಪಾರ ಮಾಡುವುದು ತಪ್ಪಲ್ಲ. ಆದರೆ ಯಾರೂ ಮೈಕ್ ಬಳಿಸಿ ವೃದ್ಧರಿಗೆ, ಮಹಿಳೆಯರಿಗೆ ಮತ್ತು ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗೆ ತೊಂದರೆ ಮಾಡುವ ರೀತಿಯಲ್ಲಿ ಜೋರಾಗಿ ಕೂಗಬಾರದು. ಶಬ್ಧ ಮಾಲಿನ್ಯದಿಂದ ಜನರಿಗೆ ತೊಂದರೆ ಆಗುತ್ತಿದ್ದು, ಇಂತಹ ಪ್ರಕರಣಗಳು ಇನ್ನು ಮೂದೆ ನಡೆದರೆ ಕಾನೂನು ಕ್ರಮ ಜರುಗಿಸಲಾಗುವುದು. ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಎಲ್ಲಾ ಕಡೆ ಮೈಕ್ ಬಳಕೆ: ಈ ಮೊದಲು ಮನೆಗಳ ಸಮೀಪ ಬಂದು ತರಕಾರಿ ಮಾರುತ್ತಿದ್ದವರು ಸಾಂಪ್ರದಾಯಿಕವಾಗಿ ಬಾಯಲ್ಲಿ ಕೂಗಿ ಮಾರಾಟ ಮಾಡುತ್ತಿದ್ದರು. ಟೆಕ್ನಾಲಜಿ ಮುಂದುವರೆದಂತೆ ಪೊಲೀಸರು ಗುಂಪು ಚದುರಲಿಸಲು ಬಳಸುವ ಮೈಕ್‌ಗಳನ್ನು ತರಕಾರಿ ವ್ಯಾಪಾರಿಗಳು ಬಳಸುತ್ತಿದ್ದಾರೆ. ಒಮ್ಮೆ ಕೂಗಿದನ್ನೇ ರೆಕಾರ್ಡ್ ಮಾಡಿಕೊಂಡು ಪೆನ್ ಡ್ರೈವ್ ಮೂಲಕ ಹಾಕಿದರೆ ಸಾಕು ನಿರಂತರ ಕೂಗುತ್ತಲೇ ಇರುತ್ತದೆ. ತರಕಾರಿ ವ್ಯಾಪಾರಿಗಳು ಕೂಗುವ ಧ್ವನಿ ಕೇಳಲಾಗದೇ ವೃದ್ಧರು , ವಿದ್ಯಾರ್ಥಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೀಗಾಗಿ ಪೂರ್ವ ವಿಭಾಗದ ಪೊಲೀಸರು ಈ ಕರ್ಕಶ ಮೆಗಾ ಪೋನ್ ಗಳ ವಿರುದ್ಧ ಸಮರ ಸಾರಿದ್ದು, ಎಚ್ಚರಿಕೆ ನಡುವೆ ಏನಾದರೂ ಮತ್ತೆ ಬೀದಿಗಳಲ್ಲಿ ಸದ್ದು ಮಾಡಿದರೆ ಬಂಧಿಸುವುದಾಗಿ ತರಕಾರಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಕಾರ್ಯಾಚರಣೆ ಅತಿ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಶುರುವಾಗಲಿದೆ.












Click it and Unblock the Notifications