ಜೂನ್‌ನಿಂದ ಬೆಂಗಳೂರಿಗರಿಗೆ ಸಿಗಲಿದೆ 'ಒನ್ ನೇಷನ್ ಒನ್ ಕಾರ್ಡ್' ಸೌಲಭ್ಯ: ಮೆಟ್ರೋ, ಬಸ್‌ಗೆ ಒಂದೇ ಕಾರ್ಡ್
ಸಿಲಿಕಾನ್ ಸಿಟಿಯ ಪ್ರಯಾಣಿಕರಿಗೆ ಇನ್ಮುಂದೆ ಪ್ರಯಾಣ ಮತ್ತಷ್ಟು ಸುಗಮವಾಗಲಿದೆ. ಜೂನ್ ತಿಂಗಳಿನಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಎಲ್ಲ ಬಸ್‌ಗಳಲ್ಲಿ 'ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್' (ಎನ್‌ಸಿಎಂಸಿ) ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಇದರಿಂದ ಪ್ರಯಾಣಿಕರು ನಮ್ಮ ಮೆಟ್ರೋ ಕಾರ್ಡ್ ಬಳಸಿ ಬಿಎಂಟಿಸಿ ಬಸ್‌ಗಳಲ್ಲೂ ಪ್ರಯಾಣಿಸಬಹುದಾಗಿದೆ.
ಹೊಸ ಇಟಿಎಂ ಯಂತ್ರಗಳ ಅಳವಡಿಕೆ
ಬಿಎಂಟಿಸಿ ತನ್ನ ಬಸ್‌ಗಳಲ್ಲಿ ಹಳೆಯ ಟಿಕೆಟ್ ಯಂತ್ರಗಳ ಬದಲಾಗಿ ಹೊಸ ಸುಧಾರಿತ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್‌ಗಳನ್ನು ಅಳವಡಿಸುತ್ತಿದೆ. ಮುಂಬೈ ಮೂಲದ 'ಚಲೋ' ಎಂಬ ಸ್ಟಾರ್ಟ್‌ಅಪ್ ಸಂಸ್ಥೆಯು ಸುಮಾರು 11,000 ಅತ್ಯಾಧುನಿಕ ಇಟಿಎಂ ಯಂತ್ರಗಳನ್ನು ಪೂರೈಸಲಿದೆ. ಈ ಯಂತ್ರಗಳು ಎನ್‌ಸಿಎಂಸಿ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡುವ ತಂತ್ರಜ್ಞಾನ ಹೊಂದಿದ್ದು, ನಗದು ರಹಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಿವೆ.

ಇವುಗಳು ಎನ್‌ಸಿಎಂಸಿ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡುವ ಸಾಮರ್ಥ್ಯ ಹೊಂದಿವೆ. ನಮ್ಮ ಮೆಟ್ರೋ ಈಗಾಗಲೇ ಆರ್‌ಬಿಎಲ್ ಬ್ಯಾಂಕ್ ಸಹಭಾಗಿತ್ವದಲ್ಲಿ ವಿತರಿಸುತ್ತಿರುವ ಸ್ಮಾರ್ಟ್ ಕಾರ್ಡ್‌ಗಳು ಸೇರಿದಂತೆ, ಯಾವುದೇ ಬ್ಯಾಂಕ್ ನೀಡಿರುವ ಎನ್‌ಸಿಎಂಸಿ ಕಾರ್ಡ್‌ಗಳನ್ನು ಈ ಯಂತ್ರಗಳು ಸ್ವೀಕರಿಸಲಿವೆ. ಸುಮಾರು 30 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಮುಂದಿನ ನಾಲ್ಕು ವರ್ಷಗಳ ಕಾಲ ನಿರ್ವಹಣಾ ಒಪ್ಪಂದವನ್ನು ಒಳಗೊಂಡಿದೆ.
ಈ ಡಿಜಿಟಲ್ ಪಾವತಿ ವ್ಯವಸ್ಥೆಯು ಜಾರಿಗೆ ಬರುವುದರಿಂದ ಪ್ರಯಾಣಿಕರಿಗೆ ಚಿಲ್ಲರೆ ಹಣದ ಕಿರಿಕಿರಿ ತಪ್ಪಲಿದೆ. ಮೆಟ್ರೋ ನಿಲ್ದಾಣದಿಂದ ಇಳಿದು ಬಸ್ ಏರುವ ಪ್ರಯಾಣಿಕರು ತಮ್ಮ ಬಳಿ ಇರುವ ಮೆಟ್ರೋ ಕಾರ್ಡ್ ಅನ್ನೇ ಬಳಸಿ ಬಸ್ ಟಿಕೆಟ್ ಪಾವತಿಸಬಹುದು. ಸದ್ಯಕ್ಕೆ 11,000 ಯಂತ್ರಗಳ ಅಳವಡಿಕೆಗೆ ಚಾಲನೆ ನೀಡಲಾಗಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ಈ ಸಂಖ್ಯೆಯನ್ನು 15,000ಕ್ಕೆ ಏರಿಸಲು ಬಿಎಂಟಿಸಿ ನಿರ್ಧರಿಸಿದೆ. ಈ ಮೂಲಕ ಬೆಂಗಳೂರಿನ ಸಾರ್ವಜನಿಕ ಸಾರಿಗೆಯು ಸಂಪೂರ್ಣವಾಗಿ ನಗದು ರಹಿತ ಮತ್ತು ತಾಂತ್ರಿಕವಾಗಿ ಸುಧಾರಿತ ವ್ಯವಸ್ಥೆಯತ್ತ ಹೆಜ್ಜೆ ಇಟ್ಟಂತಾಗಿದೆ.
ಅನುಕೂಲಗಳೇನು?
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜಾರಿಗೆ ತರುತ್ತಿರುವ ಹೊಸ ಸ್ಮಾರ್ಟ್ ಟಿಕೆಟಿಂಗ್ ವ್ಯವಸ್ಥೆಯು ಕೇವಲ ಪ್ರಯಾಣದ ಸುಗಮತೆಗಾಗಿ ಮಾತ್ರವಲ್ಲದೆ, ಇತ್ತೀಚೆಗೆ ಹೆಚ್ಚುತ್ತಿರುವ ಟಿಕೆಟ್ ದಂಧೆ ಮತ್ತು ವಂಚನೆಗಳಿಗೆ ಬ್ರೇಕ್ ಹಾಕುವ ಉದ್ದೇಶವನ್ನೂ ಹೊಂದಿದೆ. ಈಗಾಗಲೇ ಯಶವಂತಪುರ ಮತ್ತು ಮೆಜೆಸ್ಟಿಕ್ ಸೇರಿದಂತೆ ಎರಡು ಡಿಪೋಗಳಲ್ಲಿ ಸುಮಾರು 400 ಇಟಿಎಂ ಯಂತ್ರಗಳ ಮೂಲಕ ಈ ಯೋಜನೆಯ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಬನಶಂಕರಿ, ಕೆಂಗೇರಿ, ಚಿಕ್ಕನಾಗಮಂಗಲ, ಕೋರಮಂಗಲ ಡಿಪೋಗಳಿಗೆ ಹೆಚ್ಚುವರಿಯಾಗಿ 1,400 ಯಂತ್ರಗಳನ್ನು ಒದಗಿಸಲಾಗುತ್ತಿದೆ. ಏಪ್ರಿಲ್ ಅಂತ್ಯದ ವೇಳೆಗೆ ಬಿಎಂಟಿಸಿಯ ಎಲ್ಲಾ ಡಿಪೋಗಳಿಗೂ ಈ ನೂತನ ಯಂತ್ರಗಳನ್ನು ಪೂರೈಸಲಾಗುವುದು.
ಪ್ರಸ್ತುತ ಈ ಹೊಸ ಯಂತ್ರಗಳನ್ನು ಹೊಂದಿರುವ ಬಸ್‌ಗಳಲ್ಲಿ ಪ್ರಯಾಣಿಕರು ಯುಪಿಐ ಮೂಲಕ ಹಣ ಪಾವತಿಸಬಹುದಾಗಿದೆ. ಬಸ್‌ಗಳ ಒಳಗೆ ಅಂಟಿಸಲಾಗಿರುವ ಕ್ಯೂಆರ್ ಕೋಡ್‌ಗಳ ಬದಲಿಗೆ, ಕಂಡಕ್ಟರ್‌ಗಳು ಪ್ರತಿ ಟಿಕೆಟ್‌ಗೂ ಪ್ರತ್ಯೇಕವಾದ ಕ್ಯೂಆರ್ ಕೋಡ್ ಅನ್ನು ಯಂತ್ರದ ಮೂಲಕವೇ ಜನರೇಟ್ ಮಾಡುತ್ತಾರೆ. ಈ ವ್ಯವಸ್ಥೆಯು ಪಾರದರ್ಶಕತೆಯನ್ನು ಹೆಚ್ಚಿಸಲಿದೆ. ಹೊಸ ವ್ಯವಸ್ಥೆಯಲ್ಲಿ ಹಣ ಪಾವತಿಯಾದ ನಂತರವೇ ಟಿಕೆಟ್ ಜನರೇಟ್ ಆಗುವುದರಿಂದ, ನಕಲಿ ಪೇಮೆಂಟ್ ಸ್ಕ್ರೀನ್‌ಶಾಟ್ ತೋರಿಸುವ ವಂಚನೆಗಳಿಗೂ ಕಡಿವಾಣ ಬೀಳಲಿದೆ.
ಇನ್ನು ಎನ್‌ಸಿಎಂಸಿ ಸ್ಮಾರ್ಟ್ ಕಾರ್ಡ್‌ಗಳ ಬಳಕೆಯು ಕ್ಯೂಆರ್ ಕೋಡ್ ಪಾವತಿಗಿಂತ ವೇಗವಾಗಿರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೆ, ಈ ಸ್ಮಾರ್ಟ್ ಕಾರ್ಡ್‌ಗಳನ್ನು ಕೇವಲ ಪ್ರಯಾಣಕ್ಕೆ ಮಾತ್ರವಲ್ಲದೆ ರೀಟೇಲ್ ಪಾವತಿಗಳು, ಪಾರ್ಕಿಂಗ್ ಶುಲ್ಕ ಮತ್ತು ಟೋಲ್ ಪಾವತಿಗಳಿಗೂ ಬಳಸಬಹುದಾಗಿದೆ. ಇದು ಇತರೆ ಸಾರಿಗೆ ವಿಧಾನಗಳೊಂದಿಗೂ ಸುಲಭವಾಗಿ ಸಂಯೋಜನೆಗೊಳ್ಳುವುದರಿಂದ ಪ್ರಯಾಣಿಕರಿಗೆ ಬಹುಮುಖಿ ಅನುಕೂಲಗಳನ್ನು ಒದಗಿಸಲಿದೆ. ಬಿಎಂಟಿಸಿಯ ಈ ನಿರ್ಧಾರವು ಸಾರಿಗೆ ಸಂಸ್ಥೆಯಲ್ಲಿನ ಆರ್ಥಿಕ ಸೋರಿಕೆಯನ್ನು ತಡೆಗಟ್ಟುವಲ್ಲಿ ದೊಡ್ಡ ಮಟ್ಟದ ನೆರವಾಗಲಿದೆ.












Click it and Unblock the Notifications