ಶಾಲಾ ಮಕ್ಕಳ ಭಾರದ ಬ್ಯಾಗ್ ಸಮಸ್ಯೆಗೆ ಪರಿಹಾರ ಸಿಕ್ಕೀತೆ?
ಬೆಂಗಳೂರು, ನವೆಂಬರ್ 24 : ಬೆಳೆಯುವ ಹಂತದಲ್ಲಿರುವ ಶಾಲಾ ಮಕ್ಕಳ ಹೆಗಲ ಮೇಲೆ ಬ್ಯಾಗ್ ಎಂಬ ಮಣ ಭಾರದ ಮೂಟೆಯನ್ನು ವಾರದಲ್ಲಿ ಒಂದು ದಿನ ಇಳಿಸಲು ರಾಜ್ಯ ಸರ್ಕಾರ ಆಲೋಚಿಸಿದೆ.
ಮಕ್ಕಳಿಗೆ ಶಿಕ್ಷಣ ಹೊರೆಯಾಗದಂತೆ, ಮಕ್ಕಳ ಮನೋದೈಹಿಕ ಬೆಳವಣಿಗೆಗೆ ಪೂರಕವಾಗುವ ವಾರದಲ್ಲಿ ಒಂದು ದಿನ" ನೋ ಬ್ಯಾಗ್ ಡೇ"ನ್ನು ಜಾರಿಗೆ ತರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯವಾಗುವಂತೆ ರೂಪುರೇಷೆ ಸಿದ್ಧಪಡಿಸುತ್ತದೆ.

ಪುಟ್ಟ ಮಕ್ಕಳು ಅವರ ತೂಕದಷ್ಟೇ ದೊಡ್ಡ ಬ್ಯಾಗ್ ಗಳನ್ನು ಹೆಗಲಿಗೇರಿಸಿಕೊಂಡು ಪ್ರತಿನಿತ್ಯ ಶಾಲೆಗೆ ಹೋಗುವುದು ನೋಡಿದರೆ ಅಯ್ಯೋ ಎನಿಸದೆ ಇರಲಾರದು. ಮಕ್ಕಳ ಶಾಲಾ ಬ್ಯಾಗ್ ಹೊರೆಯ ಬಗ್ಗೆ ನಿರಂತರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಭಾರವಾದ ಬ್ಯಾಗ್ ಗಳನ್ನು ಹೊರುವುದರಿಂದ ಮಕ್ಕಳಲ್ಲಿ ಸೊಂಟ ನೋವು, ಕತ್ತು ನೋವು ಹಾಗೂ ಮಾಂಸಖಂಡಗಳ ಸಮಸ್ಯೆ ಎದುರಾಗುತ್ತದೆ.
ಶಾಲೆಗೆ ಹೋಗುವ ಸುಮಾರು ಶೇ.85ರಷ್ಟು ಮಕ್ಕಳು 7 ರಿಂದ 14 ಕೆಜಿ ಭಾರದವರೆಗೂ ಹೊರಬೇಕಾದ ಅನಿವಾರ್ಯತೆ ಇದೆ. ಶಾಲಾ ಮಕ್ಕಳ ಭಾರದ ಬ್ಯಾಗ್ ಸಮಸ್ಯೆಗೆ ಪರಿಹಾರ ಸಿಗುತ್ತದೆಯಾ ಎಂದು ಆಲೋಚಿಸಬೇಕಿದೆ.
ತೂಕದ ಶೇ.10ರಷ್ಟು ಮೀರಬಾರದು: ಶಾಲಾ ಬ್ಯಾಗ್ ಭಾರ ಇಳಿಕೆಗೆ ನಿರ್ದಿಷ್ಟ ಮಾನದಂಡ ಇಲ್ಲದಿದ್ದರೂ ಮಕ್ಕಳ ತೂಕದ ಶೇ.10ರಷ್ಟು ಮೀರಬಾರದು ಎಂಬ ಹೆಚ್ಚಿನ ಸೂತ್ರವನ್ನು ಸಾಕಷ್ಟು ದೇಶಗಳು ಅನುಸರಿಸುತ್ತಿದೆ. ಹಾಗೆಯೇ ಪೋಷಕರು ಮತ್ತು ಶಿಕ್ಷರು ಚಿರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಮನೆಯಿಂದಲೇ ಬ್ಯಾಗ್ ಗೆ ಪಿಕ್ ಅಪ್ : ಇನ್ನು ಕೆಲವು ಕಡೆಗಳಲ್ಲಿ ಮಕ್ಕಳ ಶಾಲಾ ಬ್ಯಾಗ್ ಗಳನ್ನು ಮಕ್ಕಳ ಮನೆ ಬಾಗಿಲಿಗೆ ಬಂದು ತೆಗೆದುಕೊಂಡು ಹೋಗಿ ಶಾಲೆಗೆ ತಲುಪಿಸುತ್ತಾರೆ. ಮಕ್ಕಳು ಆರಾಮಾಗಿ ಶಾಲೆಗೆ ನಡೆದುಕೊಂಡು ಹೋಗುತ್ತಾರೆ.
ಕೇರಳದಲ್ಲಿ ಇಂತಹ ಒಂದು ನೂತನ ಯೋಜನೆ ಜಾರಿಯಲ್ಲಿದೆ, ಇದರಿಂದ ಆರ್ಥಿಕ ತೊಂದರೆಯಿಂದಾಗಿ ಬಸ್ ವ್ಯವಸ್ಥೆ ಪಡೆದುಕೊಳ್ಳುವವರೂ ಕೂಡ ಬ್ಯಾಗ್ ಹೊರೆಯಿಂದ ಮುಕ್ತರಾಗಿದ್ದಾರೆ. ಒಟ್ಟು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಪಿಕ್ ಅಪ್ ಯೋಜನೆಯಿಂದ ಪ್ರಯೋಜನವಾಗುತ್ತಿದೆ.












Click it and Unblock the Notifications