New Project: ಬೆಂಗಳೂರಿನ ಪ್ರಮುಖ ಮಾರುಕಟ್ಟೆ ಅಭಿವೃದ್ಧಿಗೆ ಹೊಸ ಮಾಸ್ಟರ್ ಪ್ಲ್ಯಾನ್: ಮಹೇಶ್ವರ್ ರಾವ್ ಹೇಳಿದ್ದೇನು ?
New Project: ಬೆಂಗಳೂರಿನಲ್ಲಿ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿರುವ ಕೃಷ್ಣರಾಜೇಂದ್ರ ಮಾರುಕಟ್ಟೆಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೆ.ಆರ್. ಮಾರುಕಟ್ಟೆಯಲ್ಲಿ ಮೂಲಸೌಕರ್ಯ, ಸ್ವಚ್ಛತೆ, ಸಂಚಾರ, ಅಗ್ನಿ ಸುರಕ್ಷತೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಆಗಸ್ಟ್ 4ರ ಮಂಗಳವಾರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಸೊಪ್ಪು/ಕೊತ್ತಂಬರಿ ಮಾರುಕಟ್ಟೆ ಪ್ರದೇಶದಲ್ಲಿ ತ್ಯಾಜ್ಯ ಸಂಗ್ರಹಣಾ ಶೆಡ್ ನಿರ್ಮಿಸುವಂತೆ ಸೂಚಿಸಲಾಗಿದೆ. ಪಾರ್ಕಿಂಗ್ ಎಂಟ್ರಿ-2 ಸಮೀಪದ ರಸ್ತೆಯನ್ನು ಸಮತಟ್ಟುಗೊಳಿಸಿ ಅಭಿವೃದ್ಧಿಪಡಿಸಬೇಕು. ಅಗತ್ಯವಿರುವ ಕಡೆ ಕಾಂಕ್ರೀಟೀಕರಣ ಕೈಗೊಂಡು ತಗ್ಗು ಪ್ರದೇಶಗಳನ್ನು ಭರ್ತಿ ಮಾಡಿ ವಾಹನಗಳು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಹೇಳಲಾಗಿದೆ.

ಅಲ್ಲದೆ ಕೆ.ಆರ್. ಮಾರುಕಟ್ಟೆ ಸಮುಚ್ಛಯದಲ್ಲಿ ಮಳೆನೀರು ನಿಲ್ಲುವ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸಮಗ್ರ ಪ್ಲಂಬಿಂಗ್ ಯೋಜನೆ ರೂಪಿಸಿ, ಪಿವಿಸಿ ಗಟಾರ್, ಪೈಪ್‌ಲೈನ್ ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆಯನ್ನು ಅಳವಡಿಸಬೇಕೆಂದು ನಿರ್ದೇಶನ ನೀಡಿದ್ದಾರೆ. ಲಾರಿ ಪ್ರವೇಶ ದ್ವಾರಗಳ ಸಮೀಪ ಇರುವ ತೂಗು ಕಂಬಗಳು ಹಾಗೂ ಅನಗತ್ಯ ಅಡೆತಡೆಗಳನ್ನು ಕೂಡಲೇ ತೆರವುಗೊಳಿಸಬೇಕು. ಗುಂಡೋಪಂತ್ ರಸ್ತೆ ಪ್ರವೇಶ ದ್ವಾರದ ಕಮಾನು ಮರುನಿರ್ಮಾಣ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ ಧಾನ್ಯ ಬಜಾರ್ ರಸ್ತೆಯಲ್ಲಿರುವ ಅಪಾಯಕಾರಿಯಾದ ಕಟ್ಟಡವನ್ನು ಗುರುತಿಸಿ ಅಧಿಕೃತವಾಗಿ ಅಸುರಕ್ಷಿತ ಕಟ್ಟಡವೆಂದು ಘೋಷಿಸಿ, ಕಾರ್ಯಪಾಲಕ ಅಭಿಯಂತರರು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ತರಕಾರಿ ಮಾರುಕಟ್ಟೆ ಹಾಗೂ ಹಣ್ಣು ಮಾರುಕಟ್ಟೆ ಮಾರ್ಗದಲ್ಲಿ ಅಗ್ನಿಶಾಮಕ ವಾಹನಗಳು ಸುಗಮವಾಗಿ ಸಂಚರಿಸಲು ಕನಿಷ್ಠ 6 ಮೀಟರ್ ಅಗಲದ ಪ್ರವೇಶ ಮಾರ್ಗ ಕಲ್ಪಿಸಬೇಕು. ಅಗ್ನಿ ಸುರಕ್ಷತೆಗೆ ಅಡ್ಡಿಯಾಗಿರುವ ಎಲ್ಲಾ ಅಡೆತಡೆಗಳನ್ನು ತೆರವುಗೊಳಿಸಿ, ತುರ್ತು ಸೇವೆಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮುಂದುವರಿದು ತ್ಯಾಜ್ಯ ಸಂಗ್ರಹಣಾ ಕೇಂದ್ರಗಳು, ಸಮುಚ್ಚಯದ ಪ್ರವೇಶ ದ್ವಾರಗಳು ಹಾಗೂ ಅಗ್ನಿ ಸುರಕ್ಷತಾ ವಲಯಗಳ ಸಮೀಪ ಅನಧಿಕೃತ ವಾಹನ ನಿಲುಗಡೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸಿ ವಾಹನ ನಿಲುಗಡೆ ಮಾಡುವವರಿಗೆ ದಂಡ ವಿಧಿಸಬೇಕು ಹಾಗೂ ಮಾರುಕಟ್ಟೆ ಪ್ರವೇಶ ದ್ವಾರಗಳಲ್ಲಿ ಬಿಟ್ಟುಹೋಗಿರುವ ವಾಹನಗಳನ್ನು ತೆರವುಗೊಳಿಸಬೇಕು ಎಂದಿದ್ದಾರೆ.
ವಾಹನಗಳ ಸುಗಮ ಸಂಚಾರಕ್ಕಾಗಿ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಕುರಿತು ಪರಿಶೀಲನೆ ನಡೆಸಬೇಕು. ತೆಂಗಿನಕಾಯಿ ಹಾಗೂ ಬಾಳೆಹಣ್ಣು ಮಾರುಕಟ್ಟೆ ಪ್ರದೇಶಗಳಲ್ಲಿ ಪಾರ್ಕಿಂಗ್ ಶುಲ್ಕ ಹಾಗೂ ರಸ್ತೆಬದಿಯ ವಾಹನ ನಿಲುಗಡೆ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ತೆಂಗಿನಕಾಯಿ ಹಾಗೂ ಬಾಳೆಹಣ್ಣು ಮಾರುಕಟ್ಟೆ ರಸ್ತೆ, ಹೋಟೆಲ್ ಮುಂಭಾಗ ಹಾಗೂ ಇತರೆ ಮಾರ್ಗಗಳಲ್ಲಿರುವ ಒತ್ತುವರಿಗಳನ್ನು ಕೂಡಲೇ ತೆರವುಗೊಳಿಸಬೇಕು.
ಹೂ ಮಾರುಕಟ್ಟೆಯಲ್ಲಿ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯವನ್ನು ಶ್ಲಾಘಿಸಿ, ಇದೇ ರೀತಿಯ ಕಾರ್ಯಾಚರಣೆಯನ್ನು ಮುಂದುವರಿಸಬೇಕು. ಪಾದಚಾರಿ ಮಾರ್ಗಗಳಿಗೆ ಅಡ್ಡಿಯಾಗಿರುವ ವ್ಯಾಪಾರಿಗಳನ್ನು ಸ್ಥಳಾಂತರಿಸಿ, ಮಾರ್ಷಲ್ ಮೇಲ್ವಿಚಾರಕರು ವ್ಯಾಪಾರಿಗಳ ಗಡಿಯನ್ನು ಗುರುತಿಸಿ ನಿಯಮಿತವಾಗಿ ಗಸ್ತು ನಡೆಸುವಂತೆ ಸೂಚಿಸಿದರು.
ತ್ಯಾಜ್ಯ ಸಂಗ್ರಹಣೆಗೆ ಅಗತ್ಯವಾದ ಕ್ರೇಟ್‌ಗಳು ತಲುಪಿರುವ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಾಚರಣೆ ಆರಂಭಿಸಬೇಕು. ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ವಿಳಂಬವಿಲ್ಲದೆ ಅನುಷ್ಠಾನಗೊಳಿಸಲು ಪಾಲಿಕೆ ಆಯುಕ್ತರೊಂದಿಗೆ ಸಮನ್ವಯ ಸಾಧಿಸಬೇಕು. ಅಗತ್ಯವಿರುವ ಕಡೆ ಬಯೋಗ್ಯಾಸ್ ಶೆಡ್‌ಗಳನ್ನು ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಾಗಿ ಪರಿವರ್ತಿಸಬೇಕು. ಟ್ರಾಲಿಗಳ ನಿರ್ವಹಣೆಗೆ ಪ್ರತ್ಯೇಕ ಮೆಕ್ಯಾನಿಕ್‌ರನ್ನು ನಿಯೋಜಿಸಿ ದೋಷಗಳನ್ನು ತ್ವರಿತವಾಗಿ ಸರಿಪಡಿಸಬೇಕು. ಸರಕುಗಳ ಲೋಡಿಂಗ್ ಹಾಗೂ ಅನ್‌ಲೋಡಿಂಗ್ ವ್ಯವಸ್ಥೆಯನ್ನು ನಗರ ವಿನ್ಯಾಸ ತಜ್ಞರ ಸಹಕಾರದೊಂದಿಗೆ ವೈಜ್ಞಾನಿಕವಾಗಿ ರೂಪಿಸುವಂತೆ ಸೂಚಿಸಿದ್ದಾರೆ.


Click it and Unblock the Notifications
