ಮನೆ ಮನೆಗೆ ಇ-ಖಾತೆ ತಲುಪಿಸಲು ಹೊಸ ಪ್ಲ್ಯಾನ್: ಇ-ಖಾತಾ ಮೇಳ ಬಗ್ಗೆ ಸಚಿವ ಬಿ.ಎಸ್.ಸುರೇಶ್ ಹೇಳಿದ್ದೇನು ?
ಬೆಂಗಳೂರಿನಲ್ಲಿ ಎಲ್ಲಾ ಆಸ್ತಿದಾರರು ಕಡ್ಡಾಯವಾಗಿ ಇ - ಖಾತಾ ಮಾಡಿಸಿಕೊಳ್ಳಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರ ಹೇಳಿದೆ. ಆದರೆ, ಎಲ್ಲಾ ಆಸ್ತಿದಾರರಿಗೂ ಇ - ಖಾತಾ ಸಿಗುತ್ತಿಲ್ಲ. ಇದೀಗ ಇ - ಖಾತಾ ಸಮಸ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಎಲ್ಲಾ ಭಾಗದಲ್ಲೂ ಇ- ಖಾತಾ ಮೇಳವನ್ನು ಆಯೋಜನೆ ಮಾಡಲಾಗುತ್ತಿದೆ. ಈ ಬಗ್ಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬಿ.ಎಸ್.ಸುರೇಶ್ (ಭೈರತಿ) ಅವರು ಅಪ್ಡೇಟ್ಸ್ ಕೊಟ್ಟಿದ್ದಾರೆ.
ಇ-ಖಾತಾ ಮೇಳವು ಮನೆ ಮನೆಗೆ ಇ-ಖಾತೆಯನ್ನು ತಲುಪಿಸುವ ಸದುದ್ದೇಶವನ್ನು ಹೊಂದಿರುವ ಅರ್ಥಪೂರ್ಣ ಕಾರ್ಯಕ್ರಮ ಸಚಿವ ಬಿ.ಎಸ್.ಸುರೇಶ್ (ಭೈರತಿ) ಅವರು ಹೇಳಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರ್.ಟಿ.ನಗರದ ಹೆಚ್.ಎಮ್.ಟಿ ಮೈದಾನದಲ್ಲಿ ದಿನಾಂಕ 22 ಹಾಗೂ 23 ಜುಲೈ 2025 ರಂದು ಆಯೋಜಿಸಿರುವ ಬೃಹತ್ ಇ-ಖಾತಾ ಮೇಳಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ ಎಂದು ತಿಳಿಸಿದ್ದಾರೆ.

ಈಗಾಗಲೇ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ 50,000 ಸ್ವತ್ತುಗಳ ಪೈಕಿ 13,000 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ. ನಾಗರೀಕರು ಇ-ಖಾತಾ ಮೇಳದ ಸದುಪಯೋಗ ಪಡೆದು, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸುಲಭವಾಗಿ ಇ-ಖಾತಾವನ್ನು ಪಡೆಯುವಂತೆ ಈ ಭಾಗದ ಆಸ್ತಿದಾರರು ಹಾಗೂ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.
ಪೂರ್ವ ವಲಯದ ಆಯುಕ್ತರಾದ ಸ್ನೇಹಲ್.ಆರ್ ಅವರು ಮಾತನಾಡಿ ಪೂರ್ವ ವಲಯದಲ್ಲಿ ಇ-ಖಾತಾ ಮೇಳದ ಆಯೋಜನೆಯ ಮೂಲಕ ಸುಲಭವಾಗಿ ಇ-ಖಾತಾ ನೀಡಲು ವ್ಯವಸ್ಥೆ ಮಾಡಲಾಗಿದೆ. ಪೂರ್ವ ವಲಯದಲ್ಲಿ ಒಟ್ಟು 3,45,858 ಸ್ವತ್ತುಗಳ ಪೈಕಿ 55,917 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ ಎಂದಿದ್ದಾರೆ.
ಇ-ಖಾತಾ ಮೇಳದ ಸೌಲಭ್ಯವನ್ನು ಹೆಚ್ಚಿನ ಜನರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ, ಆರ್.ಟಿ.ನಗರದ ಹೆಚ್.ಎಮ್.ಟಿ ಮೈದಾನದಲ್ಲಿ ಈ ಮೇಳವನ್ನು ನಾಳೆಯೂ ಮುಂದುವರೆಸಲಾಗುತ್ತದೆ. ಇ-ಖಾತಾ ಪಡೆಯಬೇಕಿರುವ ಸಾರ್ವಜನಿಕರು ತಮ್ಮ ಅಗತ್ಯ ದಾಖಲೆಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಇ-ಖಾತಾ ಪಡೆಯುವಂತೆ ಅವರು ತಿಳಿಸಿದ್ದಾರೆ.
ಈ ವೇಳೆ ಮಾಜಿ ಉಪ ಮಹಾಪೌರರು, ವಲಯ ಆಯುಕ್ತರಾದ ಸ್ನೇಹಲ್.ಆರ್, ಜಂಟಿ ಆಯುಕ್ತರಾದ ಸರೋಜ, ಉಪ ಆಯುಕ್ತರಾದ ರಾಜು, ಕಂದಾಯ ಅಧಿಕಾರಿ ಶ್ರೀನಿವಾಸ್ ಮೂರ್ತಿ, ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್, ಮಾಜಿ ಪಾಲಿಕೆ ಸದಸ್ಯರು ಸೇರಿದಂತೆ ಹಲವರು ಹಾಜರಿದ್ದರು.












Click it and Unblock the Notifications