National Highway 44: ರಾಷ್ಟ್ರೀಯ ಹೆದ್ದಾರಿ 44 ಅಭಿವೃದ್ಧಿಯಿಂದ ಬೆಂಗಳೂರು-ಹೈದರಾಬಾದ್ ಪ್ರಯಾಣ ಸಮಯ ಭಾರೀ ಇಳಿಕೆ
National Highway 44: ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ ಆಗುತ್ತಲಿದ್ದು, ಪ್ರಯಾಣ ಅವಧಿ ಕಡಿಮೆ ಆಗುವುದಲ್ಲದೆ ಹಲವು ಪ್ರಯೋಜನಗಳಾಗುತ್ತಿವೆ. ಈ ನಡುವೆಯೇ ಮಹತ್ವದ ಯೋಜನೆಯೊಂದರಿಂದ ಇದೀಗ ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಮತ್ತು ತಂತ್ರಜ್ಞಾನ ಕೇಂದ್ರಗಳಾದ ಬೆಂಗಳೂರು-ಹೈದರಾಬಾದ್ ನಡುವಿನ ಪ್ರಯಾಣ ಸಮಯ ಶೀಘ್ರದಲ್ಲೇ ಇಳಿಕೆಯಾಗಲಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಷ್ಟ್ರೀಯ ಹೆದ್ದಾರಿ 44 (NH-44) ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಪೂರ್ಣಗೊಂಡರೆ, ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಹಾಗೂ ತಂತ್ರಜ್ಞಾನ ಕೇಂದ್ರಗಳಾದ ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ಪ್ರಯಾಣ ಸಮಯ ಐದು ಗಂಟೆಗೆ ಇಳಿಕೆಯಾಗಲಿದೆ. ಪ್ರಯಾಣ ಸಮಯವನ್ನು ಕಡಿಮೆ ಮಾಡುವುದು, ಸಂಚಾರವನ್ನು ಸುಗಮಗೊಳಿಸುವುದು ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಅಭಿವೃದ್ಧಿ ಸಾಧಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಕರ್ನಾಟಕದ ಬೆಂಗಳೂರು ಮತ್ತು ತೆಲಂಗಾಣದ ಹೈದರಾಬಾದ್ ಅನ್ನು ಸಂಪರ್ಕಿಸುವ ಎನ್‌ಎಚ್-44 (NH-44) ಹೆದ್ದಾರಿಯನ್ನು ನಿಯಂತ್ರಿತ ಪ್ರವೇಶ ಹೊಂದಿರುವ ಆರು ಲೇನ್‌ಗಳ ಹೆದ್ದಾರಿಯಾಗಿ ಪರಿವರ್ತಿಸಲು ಸಂಬಂಧಪಟ್ಟ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಯೋಜನೆಯಡಿ ರಸ್ತೆ ಅಗಲೀಕರಣ ಮಾಡಲಾಗುವುದು, ಅಪಾಯಕಾರಿ ತಿರುವುಗಳನ್ನು ಸರಳಗೊಳಿಸಲಾಗುವುದು ಹಾಗೂ ವಾಹನಗಳ ವೇಗವನ್ನು ಹೆಚ್ಚಿಸಲು ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಮ್ನು ಸೀಮಿತಗೊಳಿಸಲಾಗುತ್ತದೆ. ಇದರಿಂದ ಪ್ರಯಾಣ ಸಮಯ ಕಡಿಮೆಯಾಗುವ ಜೊತೆಗೆ ಸುರಕ್ಷಿತ ಹಾಗೂ ವೇಗದ ಸಂಚಾರಕ್ಕೆ ಅನುಕೂಲ ಆಗಲಿದೆ.
ಪ್ರಯಾಣದ ಸಮಯ ಇಳಿಕೆ: ಪ್ರಸ್ತುತ ಈ ಎರಡು ನಗರಗಳ ನಡುವಿನ ರಸ್ತೆ ಪ್ರಯಾಣಕ್ಕೆ ಸುಮಾರು ಎಂಟರಿಂದ ಒಂಬತ್ತು ಗಂಟೆಗಳಷ್ಟು ಸಮಯ ಆಗುತ್ತಿದೆ. ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಬಳಿಕ, ಪ್ರಯಾಣದ ಅವಧಿ ಸುಮಾರು ಐದು ಗಂಟೆಗಳಿಗೆ ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಪ್ರದೇಶದೊಳಗಿನ ಜನರ ಸಂಚಾರ ಮತ್ತು ಸರಕು ಸಾಗಣೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಆಗುವ ನಿರೀಕ್ಷೆಯಿದೆ.
ಕಾಮಗಾರಿಯಿಂದ ಏನೆಲ್ಲ ಪ್ರಯೋಜನಗಳಿವೆ?
* ಆರು ಲೇನ್‌ಗಳ ರಸ್ತೆ ನಿರ್ಮಾಣ: ಸ್ಥಳೀಯ ಸಂಚಾರ ದಟ್ಟಣೆ ನಿಯಂತ್ರಿಸಲು ಆರು ಪಥಗಳ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ದೂರ ಪ್ರಯಾಣಿಸುವ ವಾಹನಗಳಿಗೆ ಹೆಚ್ಚು ಅನುಕೂಲ ಆಗಲಿದೆ.
* ಸಂಚಾರ ಸರಾಗವಾಗಿರಲು ಸೂಕ್ತ ಸ್ಥಳಗಳಲ್ಲಿ ಮಾತ್ರ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಾಣ ಮಾಡಲಾಗುತ್ತದೆ.
* ಸುಧಾರಿತ ಸುರಕ್ಷತಾ ವ್ಯವಸ್ಥೆಗಳು: ಹೆಚ್ಚಿನ ವೇಗವನ್ನು ನಿಭಾಯಿಸಲು ಉತ್ತಮ ಸುರಕ್ಷತಾ ಸೌಲಭ್ಯಗಳು ಮತ್ತು ಗುಣಮಟ್ಟದ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ.
* ಭಾರತದಲ್ಲಿ ಈಗಾಗಲೇ ಅನುಸರಿಸಲಾಗುತ್ತಿರುವ ಎಕ್ಸ್‌ಪ್ರೆಸ್‌ವೇ ಮಾದರಿಯನ್ನು ಆಧರಿಸಿ, ಈ ಹೆದ್ದಾರಿಯನ್ನು ದೀರ್ಘಾವಧಿಗೆ ಅನುಕೂಲ ಆಗುವಂತೆ ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿ ನಿರ್ಮಾಣ ಮಾಡಲಾಗುತ್ತದೆ.
* ಪ್ರಯಾಣಿಕರಿಗೆ ಅನುಕೂಲ: ನಿಯಮಿತವಾಗಿ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.
* ಆರ್ಥಿಕತೆಗೆ ಉತ್ತೇಜನ: ಸರಕು ಸಾಗಣೆ ಮತ್ತು ವ್ಯಾಪಾರ ವೇಗಗೊಳ್ಳುವುದರಿಂದ ಸ್ಥಳೀಯ ಹಾಗೂ ಪ್ರಾದೇಶಿಕ ವ್ಯಾಪಾರ ವೃದ್ಧಿಗೆ ಸಹಕಾರ ಆಗಲಿದೆ.
ಎರಡೂ ನಗರಗಳಿಗೆ ತಲುಪುವುದು ಸುಲಭವಾಗುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಸುಧಾರಿತ ಹೆದ್ದಾರಿ ದಕ್ಷಿಣ ಭಾರತದ ರೈಲು ಮತ್ತು ವಿಮಾನ ಸಂಚಾರ ವ್ಯವಸ್ಥೆಗಳೊಂದಿಗೆ ಸಮನ್ವಯವಾಗಿ ಕಾರ್ಯನಿರ್ವಹಿಸಿ, ಸಂಪೂರ್ಣ ಪ್ರಾದೇಶಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಲಾಗುತ್ತದೆ.
ಎನ್‌ಎಚ್-44 (NH-44) ಹೆದ್ದಾರಿ ಅಭಿವೃದ್ಧಿ ಯೋಜನೆ ದಕ್ಷಿಣ ಭಾರತದ ಅತಿದೊಡ್ಡ ರಸ್ತೆ ಯೋಜನೆಗಳಲ್ಲೊಂದಾಗಿದೆ ಎನ್ನಲಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ, ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ಪ್ರಯಾಣ ಸಮಯವು ಸುಮಾರು ಐದು ಗಂಟೆಗಳಿಗೆ ಇಳಿಕೆಯಾಗಲಿದೆ. ಇದರಿಂದ ಈ ಎರಡು ಮಹಾನಗರಗಳ ನಡುವೆ ಮಹತ್ವದ ಬದಲಾವಣೆಗಳಾಗಲಿವೆ ಎನ್ನಲಾಗುತ್ತಿದೆ.












Click it and Unblock the Notifications