Namma Metro Yellow Line: ಮುಂಬೈಗೆ ಆಗಮಿಸಿದ ಚೀನಾ ಡ್ರೈವರ್‌ಲೆಸ್ ರೈಲು ಸೆಟ್
ಬೆಂಗಳೂರು, ಸೆಪ್ಟಂಬರ್ 16: ಬೆಂಗಳೂರು ಮೆಟ್ರೋ ಹಳದಿ ಮಾರ್ಗವು ಯಾವಾಗ ಶುರುವಾಗಲಿದೆ ಎಂದು ಕಾಯುತ್ತಿರುವವರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಮೆಟ್ರೋ ಕೋಚ್‌ಗಳ ಕೊರತೆಯಿಂದಾಗಿ ವಾಣಿಜ್ಯ ಕಾರ್ಯಾಚರಣೆ ತಡವಾಗುತ್ತಿದ್ದು, ಇದೀಗ ಮೆಟ್ರೋ ರೈಲುಗಳು ಮುಂಬೈಗೆ ಬಂದಿಳಿದಿವೆ. ಅವು ಶೀಘ್ರವೇ ರಾಜಧಾನಿ ಬೆಂಗಳೂರಿಗೆ ಬರಲಿದ್ದು, ಬಂದ ಬಳಿಕ ಈ ಮಾರ್ಗದಲ್ಲಿ ಸಂಚಾರ ಆರಂಭವಾಗಲಿವೆ.
ಹೌದು, 18.82 ಕಿಲೋ ಮೀಟರ್ ವ್ಯಾಪ್ತಿಯ ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ, ಸಿಗ್ನಲ್ ಪರೀಕ್ಷೆ ಪೂರ್ಣಗೊಂಡರೂ ಸಹಿತ ಈ ಮಾರ್ಗವು ಪ್ರಯಾಣಿಕರಿಗೆ ಮುಕ್ತಗೊಂಡಿಲ್ಲ. ಕಾರಣ ಆರಂಭದಲ್ಲಿ ಎರಡು ಸೆಟ್ ಮೆಟ್ರೋ ರೈಲುಗಳು ಬಂದಿದ್ದು, ಹೊರತುಪಡಿಸಿದರೆ ಉಳಿದ ಮೆಟ್ರೋ ಬೋಗಿಗಳ ಪೂರೈಕೆ ಆಗಿಲ್ಲ. ಹೀಗಾಗಿ ಹಳದಿ ಮಾರ್ಗದಲ್ಲಿ ಸಂಚಾರ ವಿಳಂಬವಾಗುತ್ತಿದೆ.

ಇದೇ ಮಾರ್ಗಕ್ಕಾಗಿ ಚೀನಾದಿಂದ ಮೆಟ್ರೋ ರೈಲುಗಳು ಬಂದಿಳಿದಿವೆ. ಮುಂಬೈ ಬಂದರುಗೆ ಮೆಟ್ರೋ ರೈಲು ಬೋಗಿಗಳ ಬಿಡಿ ಭಾಗಗಳು ಬಂದಿದವೆ. ಇಲ್ಲಿನ ಕಸ್ಟಮ್ಸ್ ಕ್ಲಿಯರೆನ್ಸ್‌ಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಅನುಮತಿ ದೊರೆಯುತ್ತಿದ್ದಂತೆ ಅವು ಕೊಲ್ಕತ್ತಾದ ಟಿಟಾಗರ್ ಉತ್ಪಾದನಾ ಘಟಕಕ್ಕೆ ಶೀಘ್ರವೇ ರವಾನೆಯಾಗುತ್ತವೆ.
ಬೆಂಗಳೂರಿಗೆ ಡ್ರೈವರ್‌ಲೆಸ್ ರೈಲು ಸೆಟ್ ಆಗಮನ ಯಾವಾಗ?
ಅನೇಕ ಭಾಗಗಳೊಂದಿಗೆ ಮುಂಬೈಗೆ ಬಂದಿರುವ ನಮ್ಮ ಮೆಟ್ರೋ ಬೋಗಿಗಳನ್ನು ಕೊಲ್ಕತ್ತಾ ಟಿಟಾಗರ್ ಅಧಿಕಾರಿಗಳು, ಸಿಬ್ಬಂದಿ ಸಂಯೋಜಿಸಲಿದ್ದಾರೆ. ಬಿಡಿಭಾಗಗಳನ್ನು ಜೋಡಣೆ ಮಾಡಿ ರೈಲು ಬೋಗಿಯಾಗಿ ತಯಾರು ಮಾಡುತ್ತಾರೆ. ಮೂಲತಃ ಈ ರೈಲು ಸಂವಹನ ಆಧಾರಿತ ರೈಲು ನಿಯಂತ್ರಣ (CBTC) ವ್ಯವಸ್ಥೆ ಹೊಂದಿದೆ. ಸರಳವಾಗಿ ಹೇಳುವುದಾದರೆ, ಇವು ಚಾಲಕರಹಿತ (ಡ್ರೈವರ್‌ಲೆಸ್) ತಂತ್ರಜ್ಞಾನ ಹೊಂದಿವೆ. ಹೀಗಾಗಿ ಜೋಡಣೆ ಮಾಡಿ, ಸಂಚಾರಕ್ಕೆ ಯೋಗ್ಯವಾಗುವವರೆಗೂ ಘಟಕದಲ್ಲಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ನಂತರ ಬೆಂಗಳೂರಿಗೆ ರವಾನಿಸಲಾಗುತ್ತದೆ.

ಮತ್ತೆರಡು ರೈಲುಗಳು ಬಂದ ಬಳಿಕ ಸಂಚಾರ ಶುರು?
ಈ ಹಿಂದೆ ಚೀನಾದಿಂದ ಸಮುದ್ರಾ ಮಾರ್ಗವಾಗಿ ಚೆನ್ನೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ರಸ್ತೆ ಮಾರ್ಗವಾಗಿ ಬಂದಿದ್ದ ಎರಡು ಸೆಟ್ ಮೆಟ್ರೋ ರೈಲುಗಳು ಹಳಿದ ಮಾರ್ಗದಲ್ಲಿ ಸಂಚರಿಸಿವೆ. ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದು, ಇದೀಗ ಇನ್ನು ಎರಡು ರೈಲುಗಳು ಟಿಟಾಗರ್ ಘಟಕದಲ್ಲಿ ಸಿದ್ಧಗೊಳ್ಳುತ್ತಿವೆ.
ನಿಗದಿಯಂತ ಈ ನಮ್ಮ ಮೆಟ್ರೋ ಹಳದಿ ಮಾರ್ಗವು ಇದೇ ಫೆಬ್ರವರಿ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಬೇಕಿತ್ತು. ಆದರೆ ಆಗಲಿಲ್ಲ. ಇದೀಗ 2024ರ ಡಿಸೆಂಬರ್ ಗೆ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಕೊಲ್ಕತ್ತಾದಿಂದ ರೈಲು ಬರುವುದು ತಡವಾದರೆ ಈ ಮಾರ್ಗದಲ್ಲಿ ಜನ ಸಂಚಾರ ಮುಂದಿನ ವರ್ಷ ಜನವರಿಗೆ ಶುರುವಾಗುವ ಸಾಧ್ಯತೆ ಇದೆ.
ಆರ್‌ಡಿಎಸ್‌ಓ ಅಧಿಕಾರಿಗಳು ಪರೀಕ್ಷೆ
ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ ಸೇರಿದಂತೆ ಈ ಭಾಗದ ಅನೇಕ ಉದ್ಯೋಗಿಗಳಿಗೆ, ಸಾರ್ವಜನಿಕರಿಗೆ ಈ ಮಾರ್ಗ ಅತ್ಯವಶ್ಯಕವಾಗಿದೆ. ಸಿವಿಲ್ ಕಾಮಗಾರಿ ಪೂರ್ಣಗೊಂಡು ತಿಂಗಳು ಕಳೆದಿವೆ. ಮೊನ್ನೆಯಷ್ಟೇ ಆರ್‌ಡಿಎಸ್‌ಓ ಅಧಿಕಾರಿಗಳು ಎರಡು ವಾರಗಳ ಪರೀಕ್ಷೆ ಆರಂಭಿಸಿದ್ದಾರೆ. ಇದು ಪೂರ್ಣಗೊಂಡ ಬಳಿಕ ವರದಿಯನ್ನು ತಾಂತ್ರಿಕ ಅನುಮೋದನೆಗೆ ಕಳುಹಿಸಲಿದ್ದಾರೆ..
ಕೊಲ್ಕತ್ತಾದಿಂದ ಹೊಸ ಬೋಗಿಗಳು ಬಂದ ಬಳಿಕವೇ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ. ಬಿಎಂಆರ್‌ಸಿಎಲ್ ಚೀನಾ ಕಂಪನಿ ಜೊತೆಗೆ 216 ಬೋಗಿಗಳ 35 ರೈಲು ಸೆಟ್ ಒದಗಿಸುವಂತೆ ಬಹುಕೋಟಿ ಒಪ್ಪಂದ ಮಾಡಿಕೊಂಡಿದೆ. ಸದ್ಯ ಎರಡು ಸೆಟ್ ರೈಲು ಮಾತ್ರ ಬೆಂಗಳೂರಿಗೆ ಬಂದಿವೆ...












Click it and Unblock the Notifications