Namma Metro: ಹಳಿ ಮೇಲೆ ಯುವಕನ ಓಡಾಟ, ಅರ್ಧ ಗಂಟೆ ಮೆಟ್ರೋ ಸೇವೆ ಸ್ಥಗಿತ
ಬೆಂಗಳೂರು, ಮಾರ್ಚ್ 12: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಇತ್ತೀಚಿಗೆ ಹುಚ್ಚಾಟ ಹೆಚ್ಚಾಗುತ್ತಿದೆ. ಮೆಟ್ರೋ ಹಳಿಗೆ ಇಳಿಯುವುದು, ಪ್ರಯಾಣಿಕರಿಗೆ ತೊಂದರೆಯಾಗುವಂತೆ ಮೆಟ್ರೋ ರೈಲಿನಲ್ಲಿ ವಿಡಿಯೋ ಮಾಡುವುದು ಹೀಗೆ ಒಂದಾದ ಮೇಲೊಂದು ಅವಾಂತರಗಳು ನಡೆಯುತ್ತಲೇ ಇದೆ. ಇಂದು ಕೂಡ ಇಂತಹದ್ದೇ ಒಂದು ಘಟನೆ ನಡೆದಿದ್ದು, ಯುವಕನ ಹುಚ್ಚಾಟಕ್ಕೆ ಬೆಂಗಳೂರು ನಮ್ಮ ಮೆಟ್ರೋ ಸೇವೆ ಸರಿಸುಮಾರು ಅರ್ಧ ಘಂಟೆ ಸ್ಥಗಿತಗೊಂಡ ಪ್ರಸಂಗ ನಡೆದಿದೆ.
ಜ್ಞಾನಭಾರತಿ ಸ್ಟೇಷನ್ನಿಂದ ಪಟ್ಟಣಗೆರೆ ಸ್ಟೇಷನ್ ನಡುವೆ ಮೆಟ್ರೋ ಹಳಿಯಲ್ಲಿ ಯುವಕನೊಬ್ಬ ಇಳಿದು ಮನಬಂದಂತೆ ಓಡಾಡಿದ್ದಾನೆ. ಹಳಿ ಮೇಲೆ ಯುವಕನ ಓಡಾಟವನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಮೈಸೂರು ರಸ್ತೆ ನಿಲ್ದಾಣದಿಂದ ಚಲ್ಲಘಟ್ಟ ನಡುವಿನ ನೇರಳೆ ಮಾರ್ಗದಲ್ಲಿ ಸುಮಾರು ಅರ್ಧ ಗಂಟೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿತ್ತು.

ಯುವಕ ಮೆಟ್ರೋ ಹಳಿ ಮೇಲೆ ಕಂಡು ಬರುತ್ತಿದ್ದಂತೆ ಬಿಎಂಆರ್ಸಿಎಲ್ ಅಧಿಕಾರಿಗಳು, ಮೆಟ್ರೋ ಹಳಿಗಳ ಬಳಿ ಹೈವೊಲ್ಟೇಜ್ ವಿದ್ಯುತ್ ಇರುವುದರಿಂದ, ಮೊದಲು ಪವರ್ ಆಫ್ ಮಾಡಿಸಿ ಸುಮಾರು 27 ನಿಮಿಷಗಳ ಕಾಲ ಮೆಟ್ರೋ ಸೇವೆ ಸ್ಥಗಿತಗೊಳಿಸಿದ್ದಾರೆ. ಬಳಿಕ ಕೂಡಲೇ ಕಾರ್ಯಪ್ರವೃತ್ತರಾದ ಬಿಎಂಆರ್ಸಿಎಲ್ ಅಧಿಕಾರಿಗಳು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವಕ ಹಳಿಯಿಂದ ಹೊರಬಂದ ಬಳಿಕ ಪರಿಶೀಲನೆ ನಡೆಸಿ, ನಂತರ ಎಂದಿನಂತೆ ಮೆಟ್ರೋ ಸೇವೆ ಆರಂಭಗೊಳಿಸಲಾಗಿದೆ ಎಂದು ವರದಿಯಾಗಿದೆ.












Click it and Unblock the Notifications