ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಆರಂಭ ಯಾವಾಗ?-ಇಲ್ಲಿದೆ ಮಹತ್ವದ ಅಪ್ಡೇಟ್
Bengaluru Metro: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ನಗರದ ಬಹುತೇಕ ಮಂದಿ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಇನ್ನು ನಗರದಲ್ಲಿ ಜನಸಂಖ್ಯೆ ಹೆಚ್ಚಳದಿಂದ ಮೆಟ್ರೋ ಮಾರ್ಗ ವಿಸ್ತರಣೆ ಆಗುತ್ತಲೇ ಇದೆ. ಇದೀಗ ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗದ ಅಪ್ಡೇಟ್ ಮಾಹಿತಿಯೊಂದು ಹೊರಬಿದ್ದಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹೆಬ್ಬಾಳ ನಡುವಿನ ನೀಲಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಯಾವಾಗ ಆಗಲಿದೆ ಎನ್ನುವ ಮಾಹಿತಿಯೊಂದು ರಿವೀಲ್ ಆಗಿದೆ. 2026ರ ಜೂನ್ ಅಥವಾ ಸೆಪ್ಟಂಬರ್‌ವೊಳಗೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದರಿಂದ ಏನಲ್ಲ ಪ್ರಯೋಜನೆಗಳಿವೆ ಎಂದು ಇಲ್ಲಿ ತಿಳಿಯಿರಿ.

ಹೆಬ್ಬಾಳ ಹಾಗೂ ಕೆ.ಆರ್.ಪುರ ನಡುವಿನ ಮಾರ್ಗ ಡಿಸೆಂಬರ್ ವೇಳೆಗೆ ಆರಂಭ ಆಗಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೆಆರ್ ಪುರ ನಡುವಿನ 38 ಕಿಲೋ ಮೀಟರ್ ಮೆಟ್ರೋ ಮಾರ್ಗ ಪೂರ್ಣಗೊಳ್ಳುವವರೆಗೂ ಕಾಯದೆ, ಹೆಬ್ಬಾಳ ಕೆಐಎ ವಿಮಾನ ನಿಲ್ದಾಣ ನಡುವಿನ ಸಂಚಾರ ಆರಂಭಿಸಲು ಉದ್ದೇಶಿಸಲಾಗಿದೆ.
ಇದು ಒಂದು ವೇವೆ ಆರಂಭ ಆದರೆ, ವಿಮಾನ ನಿಲ್ದಾಣ ತಲುಪುವ ಲಕ್ಷಾಂತರ ಪ್ರಯಾಣಿಕರು ಹೆಬ್ಬಾಳದಿಂದ ಸುಲಭವಾಗಿ ಪ್ರಯಾಣಿಸಬಹುದಾಗಿದೆ. ಟ್ರಾಫಿಕ್, ಟೋಲ್ ಗಾಗಿ ಹೆಚ್ಚಿನ ಹಣ ಪಾವತಿ ಮಾಡುವ ಯಾವ ಕಿರಿಕಿರಿಯೂ ಇರುವುದಿಲ್ಲ. ಈ ಮಾರ್ಗದಲ್ಲಿ ಕಾಮಗಾರಿ ತುಂಬಾ ವೇಗವಾಗಿ ನಡೆಯುತ್ತಿದೆ. ಕೆಲವು ಸ್ಥಳಗಳಲ್ಲಿ ಮಾತ್ರ ವಿಳಂಬ ಆಗುತ್ತಿದೆ.
ಕಾಮಗಾರಿಯ ಸಮಯಕ್ಕೆ ಮಿತಿ ಏರಿರುವುದರಿಂದ ಯಲಹಂಕ ಸಮೀಪದ ವಾಯುಪಡೆ ನಿಲ್ದಾಣದ ಹತ್ತಿರ ನಿಧಾನಗತಿಯಲ್ಲಿ ಸಾಗುತ್ತಿದೆ. ಬೆಟ್ಟಹಲಸೂರು ನಿಲ್ದಾಣದ ಬಳಿಯೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. 2020ರಲ್ಲಿ ಇಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸಲು ಎಂಬೆಸಿ ಗ್ರೂಪ್ ಬಿಎಂಆರ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಈ ನಿಲ್ದಾಣಕ್ಕೆ ಎಂಬೆಸಿ 140 ಕೋಟಿ ರೂಪಾಯಿ ನೀಡುತ್ತಿದೆ.
ಹೆಬ್ಬಾಳ-ಕೆಆರ್ ಪುರ ನಡುವಿನ ಮೆಟ್ರೋ ಕಾಮಗಾರಿಯೂ ನಿಧಾನವಾಗಿ ಸಾಗುತ್ತಿದೆ. ಮೆಟ್ರೋ ಕಾಮಗಾರಿ ಹತ್ತಿರ ಅವಘಡ ಸಂಭವಿಸಿ ಇಬ್ಬರು ಜೀವ ತೆತ್ತ ನಂತರ ಕಳೆದ 6 ತಿಂಗಳಿನಿಂದ ಕಾಮಗಾರಿ ಸ್ಥಗಿತ ಆಗಿದೆ. ಎಚ್‌ಬಿಆರ್ ಲೇಔಟ್ ಸಮೀಪ 18 ಮೀಟರ್ ಉದ್ದದ ಮೆಟ್ರೋ ಪಿಲ್ಲರ್ ನಿರ್ಮಾಣ ಮಾಡುವಾಗ ಕಬ್ಬಿಣದ ರಾಡ್‌ಗಳು ತಾಯಿ ಮತ್ತು ಆಕೆಯ ಪುಟ್ಟ ಮಗುವಿನ ಮೇಲೆ ಬಿದ್ದು ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ನೀಲಿ ಮಾರ್ಗದಲ್ಲಿ ಮಾತ್ರ ಸರಾಸರಿ ವಾಣಿಜ್ಯ ವೇಗ ಗಂಟೆಗೆ 50 ಕಿಲೋ ಮೀಟರ್ ಇರುವಂತೆ ಯೋಜನೆ ರೂಪಿಸಲಾಗಿದೆ. ಅತೀ ಹೆಚ್ಚು ವಾಹನ ದಟ್ಟಣೆ ಪ್ರದೇಶಗಳಲ್ಲಿ ಒಂದಾಗಿರುವ ಹೊರ ವರ್ತುಲ ರಸ್ತೆಯ ದಟ್ಟಣೆ ಕಡಿಮೆ ಮಾಡುವಲ್ಲಿಯೂ ನೀಲಿ ಮಾರ್ಗ ಪ್ರಮುಖ ಪಾತ್ರ ವಹಿಸಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಮೆಟ್ರೊ ನೀಲಿ ಮಾರ್ಗದಲ್ಲಿ ಓಡಾಡುವ ರೈಲು, ಉಳಿದ ಮಾರ್ಗಗಳಿಗಿಂತ ವೇಗವಾಗಿ ಸಂಚರಿಸಲಿದೆ. ಇದರಿಂದ ಪ್ರಯಾಣಿಕರ ಸಮಯ ಉಳಿತಾಯ ಆಗಲಿದೆ. ಪ್ರಸ್ತುತ ನಮ್ಮ ಮೆಟ್ರೊದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ರೈಲುಗಳು ಗಂಟೆಗೆ 34 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿವೆ. ಕೆಲವೇ ತಿಂಗಳಲ್ಲಿ ಆರಂಭಗೊಳ್ಳುವ ಹಳದಿ ಮಾರ್ಗ ಮತ್ತು ಮುಂದಿನ ವರ್ಷ ಆರಂಭಗೊಳ್ಳಲಿರುವ ಗುಲಾಬಿ ಮಾರ್ಗದಲ್ಲಿ ಸಂಚರಿಸಲಿರುವ ಮೆಟ್ರೊಗಳ ಸರಾಸರಿ ವಾಣಿಜ್ಯ ವೇಗ ಗಂಟೆಗೆ 34 ಕಿಲೋ ಮೀಟರ್‌ಗೆ ನಿಗದಿ ಆಗಿದೆ.
ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ನೀಲಿ ಮಾರ್ಗವನ್ನು ಎರಡು ಹಂತಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ರೇಷ್ಮೆ ಮಂಡಳಿಯಿಂದ ಕೆ.ಆರ್.ಪುರವರೆಗಿನ ಮೊದಲ ಹಂತದ ಕಾಮಗಾರಿ 2021ರಲ್ಲಿ ಆರಂಭ ಆಗಿತ್ತು. ಕೆ.ಆರ್.ಪುರದಿಂದ ಕೆಐಎ ವರೆಗಿನ ಎರಡನೇ ಹಂತ 2022ರಲ್ಲಿ ಆರಂಭ ಆಗಿತ್ತು.
ಮೆಟ್ರೋ ನಿಲ್ದಾಣಗಳ ವಿವರ
* ಎರಡು ಹಂತಗಳ ಉದ್ದ: 58.19 ಕಿಲೋ ಮೀಟರ್
* ನಿಲ್ದಾಣಗಳ ಸಂಖ್ಯೆ: 32
* ಕೇಂದ್ರ ರೇಷ್ಮೆ ಮಂಡಳಿ-ಹೆಬ್ಬಾಳ: 29 ಕಿಲೋ ಮೀಟರ್
* ಕೇಂದ್ರ ರೇಷ್ಮೆ ಮಂಡಳಿ-ಹೆಬ್ಬಾಳದವರೆಗೆ ನಿಲ್ದಾಣಗಳ ಸಂಖ್ಯೆ: 22
* ಹೆಬ್ಬಾಳ-ವಿಮಾನ ನಿಲ್ದಾಣ: 29 ಕಿಲೋ ಮೀಟರ್
* ಹೆಬ್ಬಾಳ-ವಿಮಾನ ನಿಲ್ದಾಣದವರೆಹೆ ಮೆಟ್ರೋ ನಿಲ್ದಾಣಗಳ ಸಂಖ್ಯೆ: 10
ನೀಲಿ ಮಾರ್ಗವು ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಹಳದಿ ಮಾರ್ಗವನ್ನು, ಕೆ.ಆರ್.ಪುರ ನೇರಳೆ ಮಾರ್ಗವನ್ನು, ನಾಗವಾರದಲ್ಲಿ ಗುಲಾಬಿ ಮಾರ್ಗವನ್ನು ಸಂಪರ್ಕಿಸುವುದರುಂದ ನಗರದ ಬೇರೆ ಬೇರೆ ಕಡೆಗಳಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರಿಗೂ ಹೆಚ್ಚು ಪ್ರಯೋಜನ ಆಗಲಿದೆ. ಮತ್ತೊಂದೆಡೆ ಚರ್ಚೆಯ ಹಂತದಲ್ಲಿರುವ ಕೆಂಪು ಮತ್ತು ಕಿತ್ತಳೆ ಮಾರ್ಗಗಳೂ ಸಹ ನೀಲಿ ಮಾರ್ಗವನ್ನು ಸಂಧಿಸಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications