ರಾತ್ರೋ ರಾತ್ರಿ ನಮ್ಮ ಮೆಟ್ರೋದಲ್ಲಿ ವ್ಯಾಯಾಮ ಮಾಡಿದ ವಿದ್ಯಾರ್ಥಿಗಳಿಗೆ BMRCL ವಿಧಿಸಿದ ದಂಡ ಎಷ್ಟು ಗೊತ್ತಾ?
ಬೆಂಗಳೂರು, ಅಕ್ಟೋಬರ್, 18: ಇತ್ತೀಚೆಗೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರಿಗೆ ಕಿರಿಕಿರಯಾಗುವಂತಹ ಒಂದಿಲ್ಲೊಂದು ಘಟನೆಗಳು ನಡೆಯುತ್ತಲೇ ಇವೆ. ಹಾಗೆಯೇ ಇದೀಗ ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ವಿದ್ಯಾರ್ಥಿಗಳು ಮೆಟ್ರೋದಲ್ಲಿನ ಸರಳುಗಳನ್ನು ಹಿಡಿದು ರೋಲಿಂಗ್ ವ್ಯಾಯಾಮ ಮಾಡಿ ಹುಚ್ಚಾಟ ಮೆರೆದ ಘಟನೆ ಲೈನ್-2ನಲ್ಲಿ ನಡೆದಿದೆ.
ಮೀತ್ ಪಟೇಲ್ ಹಾಗೂ ಇತರೆ ಮೂವರು ವಿದ್ಯಾರ್ಥಿಗಳು ಮೆಟ್ರೋದಲ್ಲಿನ ಸರಳುಗಳನ್ನು ಹಿಡಿದು ರೋಲಿಂಗ್ ವ್ಯಾಯಾಮ ಮಾಡಿ ಹುಚ್ಚಾಟ ಮೆರೆದ ವರ್ತನೆಗೆ ಸಹಪ್ರಯಾಣಿಕರು ಕೂಡ ಕಿಡಿಕಾಡಿದ್ದಾರೆ. ಇನ್ನು ಉದ್ಧಟತನ ಮೆರೆದ ವಿದ್ಯಾರ್ಥಿಗಳ ವಿಡಿಯೋ ಮಾಡಿದ ಮೆಟ್ರೋ ಸಿಬ್ಬಂದಿಯು ಅದನ್ನು ಸೆಕ್ಯೂರಿಟಿ ಡಿಪಾರ್ಟ್ಮೆಂಟ್‌ಗೆ ತೋರಿಸಿದ್ದಾರೆ.

ಇನ್ನು ಈ ವಿಡಿಯೋದಲ್ಲಿ ಉದ್ಧಟತನ ತೋರಿದವರಿಗೆ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿಯೇ ಡಿಪಾರ್ಟ್ಮೆಂಟ್ & ಹೋಮ್ ಗಾರ್ಡ್ ಸಿಬ್ಬಂದಿ ಬಿಸಿ ಮುಟ್ಟಿಸಿದ್ದಾರೆ. ಬಳಿಕ ಮೆಟ್ರೋ ಪ್ರಾಟರ್ಟಿ ಡ್ಯಾಮೇಜ್ ಮಾಡಿದ ವಿದ್ಯಾರ್ಥಿಗಳಿಗೆ ತಲಾ ₹500 ದಂಡ ವಿಧಿಸಿದ್ದಲ್ಲದೆ, ಇನ್ಮುಂದೆ ಮೆಟ್ರೋದಲ್ಲಿ ಈ ರೀತಿಯ ವರ್ತನೆ ತೋರದಂತೆ ಎಚ್ಚರಿಕೆ ಕೂಡ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೂರ್ಚೆ ರೋಗ ಬಂದಂತೆ ನಟನೆ
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿಇತ್ತೀಚೆಗಷ್ಟೇ ಯುವಕನೊಬ್ಬ ಮೂರ್ಚೆ ರೋಗ ಬಂದಂತೆ ನಟಿಸಿ ರೀಲ್ಸ್ ಮಾಡಲು ಹೋಗಿ ಪಜೀತಿಗೆ ಸಿಲುಕಿರುವ ಘಟನೆ ನಡೆದಿತ್ತು.
ಸಮಾನ್ಯವಾಗಿ ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೆ ಅಂತಹವರಿಗೆ ಸಹಾಯ ಮಾಡುವ ಮಂದಿ ತುಂಬಾ ಜನ ಇರುತ್ತಾರೆ. ಇನ್ನೂ ಕೆಲವರು ಇಂತಹ ಘಟನೆಗಳನ್ನು ನೋಡಿ ಭಯಭೀತರಾಗಿಬಿಡುತ್ತಾರೆ. ಹಾಗೆಯೇ ಯುವಕನೊಬ್ಬ ನಮ್ಮ ಮೆಟ್ರೋದಲ್ಲಿ ಪ್ರಾಂಕ್ ಮಾಡಲು ಹೋದಾಗ ತುಂಬಾ ಜನ ಹೆದರಿದ್ದಾರೆ. ಆದರೆ ಇವನು ಹೀಗೆ ಮಾಡಿದ್ದು ರೀಲ್ಸ್‌ಗೋಸ್ಕರ ಎಂದು ಗೊತ್ತಾದ ತಕ್ಷಣವೇ ಪ್ರಯಾಣಿಕರು ಗರಂ ಆಗಿದ್ದರು.
ವಿಜಯನಗರದಿಂದ ಮೆಜೆಸ್ಟಿಕ್ ಕಡೆಗೆ ಬರುವ ನೇರಳೆ ಬಣ್ಣದ ಮೆಟ್ರೋ ರೈಲಿನಲ್ಲಿ ಯೂಟ್ಯೂಬರ್ ಹುಚ್ಚಾಟಕ್ಕೆ ಪ್ರಯಾಣಿಕರು ಗಾಬರಿಗೊಂಡಿದ್ದರು. ಅಲ್ಲದೆ ಎಸ್ಕಲೇಟರ್ ಮೇಲೆಯೂ ಮೂರ್ಚೆ ರೋಗ ಬಂದಂತೆ ನಟಿಸಿದ್ದಾನೆ. ಇದೀಗ ಹುಚ್ಚಾಟದ ಈ ವೀಡಿಯೋ ಬಗ್ಗೆ ಸಾಮಾಜಿಕ ಜಾಲಾತಣದಲ್ಲಿ ಆಕ್ರೋಶಗಳು ಭುಗಿಲೆದ್ದಿವೆ. ಇನ್ನು ಪ್ರಾಂಕ್ ಮಾಡಿದ ಯುವಕನ ವಿಳಾಸವನ್ನು ಪತ್ತೆ ಹಚ್ಚಿದ BMRCL ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಾಂಕ್ ಪ್ರಜ್ಜು ಮೇಲೆ ದೂರು ದಾಖಲಿಸಿ 500 ರೂಪಾಯಿ ದಂಡ ವಿಧಿಸಿದೆ ಎನ್ನುವ ಮಾಹಿತಿ ತಿಳಿದುಬಂದಿತ್ತು.
ಹಾಗೆಯೇ ಇತ್ತೀಚೆಗಷ್ಟೇ ಮತ್ತೊಂದು ಪ್ರಕರಣದಲ್ಲಿ ನಮ್ಮ ಮೆಟ್ರೋದಲ್ಲಿ ನಿಯಮ ಮೀರಿ ಗೋಬಿ ತಿಂದ ಪ್ರಯಾಣಿಕನಿಗೆ BMRCL 500 ರೂಪಾಯಿ ದಂಡ ವಿಧಿಸಿ, ಇನ್ಮುಂದೆ ಮೆಟ್ರೋದಲ್ಲಿ ನಿಯಮ ಪಾಲನೆ ಮಾಡುವಂತೆ ಸೂಚನೆ ನೀಡಿ ಕಳುಹಿಸಿದ್ದಾರೆ. ಹಾಗೆಯೇ ನಮ್ಮ ಮೆಟ್ರೋದಲ್ಲಿ ಇತ್ತೀಚೆಗೆ ಒಂದು ಪ್ರಕರಣ ನಡೆದಿದ್ದು, ಮೆಟ್ರೋ ನಿಲ್ದಾಣಕ್ಕೆ ನುಸುಳಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ್ದಕ್ಕಾಗಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸೈಪ್ರಸ್ ಮೂಲದ ಯೂಟ್ಯೂಬರ್ ಫಿಡಿಯಾಸ್ ಪನಯೋಟೌ ವಿರುದ್ಧ ಬಿಎಂಆರ್ಸಿಎಲ್ ಪ್ರಕರಣ ದಾಖಲು ಮಾಡಿತ್ತು.












Click it and Unblock the Notifications