Namma metro: ಮೆಟ್ರೋದಿಂದ BBMP ಸೇವಾಶುಲ್ಕ ವಸೂಲಿ ಕ್ರಮದ ಪರಿಣಾಮ ಯಾರ ಮೇಲೆ ಬೀರಲಿದೆ?-ಮಾಹಿತಿ
ಬೆಂಗಳೂರು, ನವೆಂಬರ್, 30: ಅತೀ ವೇಗದಲ್ಲಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿ ಬೆಂಗಳೂರಿನ ಬೃಹತ್ ಬೆಂಗಳೂರು ಮಹನಗರ ಪಾಲಿಕೆ (BBMP) ನಗರದಲ್ಲಿ ಆದಾಯದ ಮೂಲಗಳನ್ನು ಹುಡುಕುತ್ತಲೇ ಇರುತ್ತದೆ. ಇದೀಗ ಸರ್ಕಾರದ ಆದೇಶದಂತೆ ನಗರದ ಮೆಟ್ರೋ ನಿಲ್ದಾಣಗಳ ಆಸ್ತಿಗಳಿಂದ ಸೇವಾ ಶುಲ್ಕ ಸಂಗ್ರಹ ಮಾಡಲು ಸುತ್ತೋಲೆ ಹೊರಡಿಸಲಾಗುವುದೆಂದು ಬಿಬಿಎಂಪಿ ತಿಳಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.
BMRCLನ ನಿಲ್ದಾಣ, ಕಚೇರಿ, ಡಿಪೋ ಸೇರಿದಂತೆ ವಿವಿಧ ಆಸ್ತಿಗಳಿಂದ ಆಸ್ತಿ ತೆರಿಗೆ ಪಡೆಯಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ 2019ರಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಅದರಂತೆಯೇ 2020ರ ಡಿಸೆಂಬರ್ 9ರಿಂದ ತೆರಿಗೆ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದರು.

ಸರ್ಕಾರದ ಆದೇಶ, ಒಪ್ಪಂದದ ನಂತರ 2022ರಲ್ಲಿ ನಡೆದ ಸಭೆಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ, ನಿಯಮಗಳ ಅಳವಡಿಕೆ ಬಗ್ಗೆ ಚರ್ಚೆ ನಡೆಸಲಾಯಿತು. 2020ರ ಡಿಸೆಂಬರ್ 9ರಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಬದಲು ಸೇವಾ ಶುಲ್ಕ ಪಾವತಿ ಮಾಡುವಂತೆ ಆದೇಶ ನೀಡಬೇಕು ಎಂದು BMRCL ವ್ಯವಸ್ಥಾಪಕರು ಸರ್ಕಾರಕ್ಕೆ ಪತ್ರ ಬರೆದಿದ್ದರು.
ಹಾಗೆಯೇ 2023ರ ಆಗಸ್ಟ್ 19ರಂದು ಸರ್ಕಾರ ಆದೇಶ ಹೊರಡಿಸಿದ್ದು, ಅದರಂತೆಯೇ ಸೇವಾ ಶುಲ್ಕ ಪಾವತಿ ಮಾಡಬೇಕಿದೆ. ಇದರ ಸವಿವರ ಸುತ್ತೋಲೆಯನ್ನು ಬಿಬಿಎಂಪಿ ಸದ್ಯದಲ್ಲೇ ಹೊರಡಿಸಿ, ವಸೂಲಿ ಮಾಡಲಿದೆ ಎಂದು ತಿಳಸಿದ್ದಾರೆ.
2019ರಿಂದ ಪ್ರಸ್ತಾವದಲ್ಲಿದ್ದ BMRCL ಆಸ್ತಿಗಳಿಗೆ ತೆರಿಗೆ ವಿಷಯ ಇದೀಗ ಅಂತಿಮ ಹಂತಕ್ಕೆ ಬಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಯಾವ ಬಾಬ್ತಿನಲ್ಲಿ ಹೆಚ್ಚು ವಸೂಲಿ ಸಾಧ್ಯ ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ. ಈ ವೇಳೆ ಬಾಕಿ ಉಳಿದಿದ್ದ ನಮ್ಮ ಮೆಟ್ರೋದ ಸೇವಾ ಶುಲ್ಕ ಪ್ರಸ್ತಾಪ ಪತ್ತೆಯಾಗಿದ್ದು, ಅದನ್ನು ಸರ್ಕಾರದಿಂದ ಆದೇಶ ಮಾಡಿಸಿಕೊಳ್ಳಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಆರ್ಥಿಕ ಸಾಲಿನಲ್ಲಿ 4,500 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಆದರೆ ನಾವು 3000 ಕೋಟಿ ರೂಪಾಯಿ ಆಸುಪಾಸಿನಲ್ಲೇ ಇದ್ದೇವೆ. ಇನ್ನು ನಾಲ್ಕು ತಿಂಗಳಿನಲ್ಲಿ ವಸೂಲಿ ಪ್ರಕ್ರಿಯೆಗೆ ವೇಗ ನೀಡಲಾಗುತ್ತಿದೆ ಎಂದು ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದರು.
ಬೆಂಗಳೂರು ಮೆಟ್ರೋ ರೈಲು ನಿಗಮದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಪಾಲಿಕೆಗೆ ವಾರ್ಷಿಕ 2.14 ಕೋಟಿ ರೂಪಾಯಿ ಸೇವಾ ಶುಲ್ಕದ ರೂಪದಲ್ಲಿಆದಾಯ ಬರಲಿದೆ. ಸದ್ಯ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್‌ನ 73.81 ಕಿಲೋ ಮೀಟರ್ ಮಾರ್ಗದಲ್ಲಿ ಮೆಟ್ರೊ ರೈಲುಗಳು ಕಾರ್ಯಾಚರಣೆಗೊಳ್ಳುತ್ತಿವೆ. ಈ ಮಾರ್ಗದಲ್ಲಿರುವ ನಿಲ್ದಾಣಗಳು, ವಾಣಿಜ್ಯ ಮಳಿಗೆಗಳು, ಸ್ವತ್ತುಗಳಿಂದ ಸೇವಾ ಶುಲ್ಕ ಸಂಗ್ರಹ ಆಗಲಿದೆ.
ಸರಕಾರದ ಆದೇಶದಂತೆ ಬಿಎಂಆರ್‌ಸಿಎಲ್ ಅಧೀನದಲ್ಲಿರುವ ಮೆಟ್ರೊ ನಿಲ್ದಾಣಗಳು, ಕಚೇರಿಗಳು, ಡಿಪೋ, ಕಾರ್ಯಾಗಾರಗಳು ಹಾಗೂ ಇನ್ನಿತರೆ ಆಸ್ತಿಗಳಿಂದ ಸೇವಾ ಶುಲ್ಕವನ್ನು ಸಂಗ್ರಹಣೆ ಮಾಡಲಾಗುವುದು. ಈ ಬಗ್ಗೆ ಬಿಎಂಆರ್‌ಸಿಎಲ್ ಮತ್ತು ಬಿಬಿಎಂಪಿ ನಡುವೆ ಒಡಂಬಡಿಕೆ ಆಗಿದೆ. ಅದರಂತೆಯೇ 2020ರ ಡಿಸೆಂಬರ್ 9ರಿಂದ ಅನ್ವಯ ಆಗುವಂತೆ ಸೇವಾ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.












Click it and Unblock the Notifications